Mysore
18
few clouds

Social Media

ಶನಿವಾರ, 04 ಜನವರಿ 2025
Light
Dark

ಇಲ್ಲಿ ಅಣ್ಣನ ಹೆಂಡತಿ ತಮ್ಮಂದಿರಿಗೂ ಹೆಂಡತಿ!

ಪಂಜು ಗಂಗೊಳ್ಳಿ

ಬಿಮಾರು ರಾಜ್ಯಗಳಲ್ಲಿ ಒಂದಾದ ರಾಜಸ್ತಾನ ಹೆಣ್ಣು ಭ್ರೂಣ ಹತ್ಯೆಗೆ ಕುಖ್ಯಾತಿ ಪಡೆದ ರಾಜ್ಯಗಳಲ್ಲಿ ಒಂದು. ಅಲ್ಲಿನ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣುಗಳು ಭೋಗದ ವಸ್ತುಗಳು ಅಥವಾ ಎರಡನೇ ದರ್ಜೆಯ ದರ್ಜೆಯ ನಾಗರಿಕರು. ಒಂದೆಡೆ ಗಂಡುಗಳ ಬಗ್ಗೆ ಅತಿಯಾದ ಪಕ್ಷಪಾತದ ಧೋರಣೆಯಾದರೆ ಇನ್ನೊಂದೆಡೆ ಹೆಣ್ಣುಗಳ ಬಗ್ಗೆ ಅಷ್ಟೇ ಅತಿಯಾದ ನಿರ್ಲಕ್ಷ್ಯದ ಮನೋಭಾವ, ಆದರೆ, ಪ್ರಕೃತಿಗೆ ವಿರುದ್ಧವಾದ ಮನುಷ್ಯನ ಯಾವುದೇ ವ್ಯವಹಾರ ಕೊನೆಗೆ ಅವನಿಗೆ ಉರುಳಾಗುತ್ತದೆ ಎಂಬಂತೆ, ಈ ಸ್ತ್ರೀ ವಿರೋಧಿ ಮನೋಭಾವನೆಯು ರಾಜಸ್ತಾನದಲ್ಲಿ ಅದರದ್ದೇ ಆದ ಸಮಸ್ಯೆಗಳನ್ನು ಹುಟ್ಟು ಹಾಕಿದೆ.

ನಿರಂತರ ಹೆಣ್ಣು ಭ್ರೂಣ ಹತ್ಯೆ ಹಾಗೂ ಪುರುಷ ಪಕ್ಷಪಾತ ಧೋರಣೆಯಿಂದಾಗಿ ರಾಜಸ್ತಾನದಲ್ಲಿ ಗಂಡು ಮತ್ತು ಹೆಣ್ಣುಗಳ ಸಂಖ್ಯೆಯ ಸರಾಸರಿ ಅನುಪಾತ 1000-922ಕ್ಕೆ ಇಳಿದಿದೆ. ಅಂದರೆ 1,000 ಗಂಡು ಮಕ್ಕಳಿಗೆ 922 ಹೆಣ್ಣು ಮಕ್ಕಳು. ಅಲ್ಲಿನ ಕೆಲವು ಹಳ್ಳಿಗಳಲ್ಲಂತೂ 1,000 ಗಂಡುಗಳಿಗೆ ಹೆಣ್ಣುಗಳ ಸಂಖ್ಯೆ 500ಕ್ಕೂ ಕಡಿಮೆ ಇದೆ. ಇಂತಹ ಪರಿಸ್ಥಿತಿಯಿಂದಾಗಿ ರಾಜಸ್ತಾನದಲ್ಲಿ ಹೆಣ್ಣುಗಳ ತೀವ್ರ ಕೊರತೆ ಕಾಣಿಸಿಕೊಂಡು, ವಯಸ್ಸಾದರೂ ಹೆಣ್ಣು ಸಿಗದೆ ಅವಿವಾಹಿತರಾಗಿ ಉಳಿದಿರುವ ಗಂಡುಗಳ ಸಂಖ್ಯೆ ಒಂದೇ ಸಮನೆ ಏರುತ್ತಿದೆ!

ಹಣ್ಣುಗಳ ಕೊರತೆಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ರಾಜಸ್ತಾನಿ ಸಮಾಜ ಈಗ ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಿದೆ. ಅವುಗಳಲ್ಲಿ ‘ಆತಾ-ಸಾತಾ’ ಎಂಬುದೊಂದು. ಇದಕ್ಕೆ ‘ಡಬಲ್ ಜೋಡಿ’ ಎಂದೂ ಕರೆಯುತ್ತಾರೆ. ಈ ಕ್ರಮದಲ್ಲಿ ಒಂದು ಮನೆಯ ಹೆಣ್ಣನ್ನು ತರಬೇಕಾದರೆ ಗಂಡಿನ ಮನೆಯವರು ಆ ಹೆಣ್ಣಿನ ಮನೆಯಲ್ಲಿರುವ ಗಂಡುಗಳಿಗೆ ತಮ್ಮ ಹೆಣ್ಣುಗಳನ್ನು ಕೊಡಬೇಕು. ಅಂದರೆ ಯಾವ ಗಂಡಿಗೆ ಸಹೋದರಿಯರಿರುತ್ತಾರೋ ಅಂತಹ ಗಂಡಿಗೆ ಮದುವೆ ಭಾಗ್ಯವಿದೆ. ಹಾಗೆ ಸಹೋದರಿಯರಿಲ್ಲದ ಗಂಡು ಮಕ್ಕಳು ಜೀವಮಾನವಿಡೀ ಅವಿವಾಹಿತರಾಗಿ ಉಳಿಯಬೇಕು!

ಕೀಶಾಲ್, ಗ್ರಾಮದ ದೌಲಕ್ ರಾಮ್‌ಗೆ ಮೂವರು ಗಂಡು ಮಕ್ಕಳು. ಹಿರಿಯರಿಬ್ಬರು ಬಿಡಿ, ಕಿರಿಯವನಿಗೂ ಮದುವೆ ಪ್ರಾಯ ಮೀರಿ ಹೋಗಿದೆ. ಭವಿಷ್ಯದಲ್ಲಿ ಅವರಿಗೆ ಮದುವೆಯಾಗುವ ಯಾವ ಭರವಸೆಯೂ ಇಲ್ಲ. ಏಕೆಂದರೆ, ದೌಲತ್‌ ರಾಮನಿಗೆ ಹೆಣ್ಣು ಮಕ್ಕಳಿಲ್ಲ, ಜುಂಜುನು, ಚುರು ಮತ್ತು ಸಿಕಾರ್‌ ಎಂಬ ಮೂರು ಜಿಲ್ಲೆಗಳಲ್ಲಿ ಹೆಚ್ಚಿನ ಮದುವೆಗಳು ಡಬಲ್ ಜೋಡಿ ಶ್ರಮದಲ್ಲಿ ನಡೆಯುತ್ತಿರುವುದರಿಂದ ಸಹೋದರಿಯರಿಲ್ಲದ ಅಲ್ಲಿನ ನೂರಾರು ಜನ ಯುವಕರು ಮದುವೆ ವಯಸ್ಸು ಮೀರಿದರೂ ಹೆಣ್ಣು ಸಿಗದೆ ಪರದಾಡುತ್ತಿದ್ದಾರೆ.

ಒಂದು ವೇಳೆ ಹೆಣ್ಣು ಶಿಕ್ಷಿತಳಾಗಿದ್ದರೆ ಅವಳ ಅಪ್ಪ ರಾಜನಂತೆ, ರಘುನಾಥ ಪುರದ ಧರಮ್ ಪಾಲ್ ಚೌಧರಿ ತನ್ನ ಕಾಲೇಜು ಶಿಕ್ಷಿತ ಮಗಳನ್ನು ಪಕ್ಷದ ಇಂದ್ರಪುರ ಹಳ್ಳಿಯ ಒಂದು ಕುಟುಂಬಕ್ಕೆ ಮದುವೆ ಮಾಡಿಕೊಟ್ಟಾಗ ಅದಕ್ಕೆ ಬದಲಾಗಿ ಗಂಡನ ಮನೆಯವರು ತಮ್ಮ ಇಬ್ಬರು ಅನಕ್ಷರಸ್ತ ಹೆಣ್ಣು ಮಕ್ಕಳನ್ನು ಧರಮ್ ಪಾಲ್ ಚೌಧರಿಯ ಇಬ್ಬರು ಗಂಡು ಮಕ್ಕಳಿಗೆ ಮದುವೆ ಮಾಡಿಕೊಡಬೇಕಾಯಿತು. ಮೊದಲೆಲ್ಲ ಹಣ್ಣಿನ ವಯಸ್ಸು ಗಂಡಿನ ವಯಸ್ಸಿಗಿಂತ ಬಹಳ ಕಡಿಮೆ ಇರುವ ಹಾಗೆ ನೋಡಿಕೊಳ್ಳಲಾಗುತ್ತಿತ್ತು. ಈಗ ಹಾಗಲ್ಲ, ಹೆಣ್ಣಿಗೆ ಗ೦ಡಿಗಿಂತ ಹೆಚ್ಚು ವಯಸ್ಸಾಗಿದ್ದರೂ ನಡೆಯುತ್ತದೆ. ಒಂದು ಮನೆಯಲ್ಲಿ ಮದುವೆ ಪ್ರಾಯದ ಹೆಣ್ಣಿದ್ದು, ಅವಳಿಗೆ ಅಪ್ರಾಪ್ತ ಪ್ರಾಯದ ತಮ್ಮಂದಿರಿದ್ದರೆ, ಅವರು ಮದುವೆ ವಯಸ್ಸಿಗೆ ಬರುವ ತನಕ ಆ ಹೆಣ್ಣಿಗೆ ಮದುವೆ ಮಾಡದೆ ಕಾಯುತ್ತಾರೆ. ಆ ಸಹೋದರರು ಮದುವೆ ಪ್ರಾಯಕ್ಕೆ ಬರುವಾಗ ಆ ಹೆಣ್ಣಿಗೆ ಸಾಕಷ್ಟು ವಯಸ್ಸಾಗಿರುತ್ತದೆ. ಅದರಿಂದೇನೂ ತೊಂದರೆ ಇಲ್ಲ, ಆಗ ಆ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಅತಾ-ಸಾತಾ ಕ್ರಮದಲ್ಲಿ ಮದುವೆ ಮಾಡಲಾಗುತ್ತದೆ. ಹೆಣ್ಣುಗಳ ಕೊರತೆಯಿಂದಾಗಿ ರಾಜಸ್ತಾನದಲ್ಲೀಗ ವರದಕ್ಷಿಣೆಯ ಕಾಟ ಇಲ್ಲ. ಬದಲಿಗೆ, ಗಂಡಿನ ಕಡೆಯವರೇ ಮದುವೆಯ ಎಲ್ಲ ಖರ್ಚುಗಳನ್ನು ಭರಿಸಬೇಕಾಗುತ್ತದೆ.

ಜುಂಜುನು, ಚುರು, ಸಿಕಾರ್ ಮೊದಲಾದ ಜಿಲ್ಲೆಗಳಲ್ಲಿ ಹೀಗಾದರೆ ಅಳ್ವಾ‌ ಜಿಲ್ಲೆಯ ಮಂಟೇದಾ ಎಂಬ ಹಳ್ಳಿಯಲ್ಲಿ ಇದಕ್ಕೆ ಸಂಪೂರ್ಣವಾಗಿ ವಿರುದ್ಧವಾದ ಕಸರತ್ತು ನಡೆಯುತ್ತದೆ. ಹೆಣ್ಣುಗಳ ಕೊರತೆಯಿಂದಾಗಿ ಅಲ್ಲಿ ಬಹುಪತ್ನಿತ್ವ ಕ್ರಮ ರೂಢಿಯಲ್ಲಿದೆ! ಹೌದು, ಬಹುಪತ್ನಿತ್ವ, ಈ ಕ್ರಮ ಹೇಗೆಂದರೆ, ಒಂದು ಕುಟುಂಬದಲ್ಲಿ ಹಲವು ಗಂಡುಗಳಿದ್ದಾರೆ ಅಂತಿಟ್ಟುಕೊಳ್ಳಿ. ಹೇಗೋ ಕಷ್ಟಪಟ್ಟು ಹೆಣ್ಣನ್ನು ಹುಡುಕಿ ಹಿರಿಯಮಗನಿಗೆ ಮದುವೆ ಮಾಡುತ್ತಾರೆ. ಮದುವೆಯಾಗಿ ಬರುವ ಆ ಹೆಣ್ಣು ಅವನ ತಮ್ಮಂದಿರಿಗೂ ಹೆಂಡತಿಯಾಗಿ ಬದುಕ ಬೇಕಾಗುತ್ತದೆ! ಈ ಕ್ರಮಕ್ಕೆ ಯಾವುದೇ ಕಾನೂನಿನ ಮಾನ್ಯತೆ ಇಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ, ಹಾಗೆಯೇ, ಇಂತಹದ್ದೊಂದು ಕ್ರಮ ರೂಢಿಯಲ್ಲಿದೆ ಎಂಬುದೂ ಅಲ್ಲಿನ ಎಲ್ಲರಿಗೂ ತಿಳಿದ ವಿಚಾರ, ಮಂಖೇರಾ ಕೃಷಿ ಪ್ರಧಾನವಾದ ಗ್ರಾದು. ಜಾಟರು ಇಲ್ಲಿನ ಬಹುಸಂಖ್ಯೆಯ ಸಮುದಾಯ. ಅವರನ್ನು ಹೊರತುಪಡಿಸಿದರೆ ಕೆಲವು ಬ್ರಾಹ್ಮಣ ಹಾಗೂ ದಲಿತ ಕುಟುಂಬಗಳಿವೆ. ದಲಿತರಲ್ಲಿ ಹೆಚ್ಚಿನವರು ಚಮ್ಮಾರರು ಮತ್ತು ವಾಲ್ಮೀಕಿ ಸಮುದಾಯದವರು.

ಬಹುಪತ್ನಿತ್ವಕ್ಕೆ ಹೆಣ್ಣುಗಳ ಕೊರತೆ ಮಾತ್ರ ಕಾರಣವಲ್ಲ. ಇದಕ್ಕೆ ಇನ್ನೂ ಒಂದು ಮುಖ್ಯ ಕಾರಣವಿದೆ- ಜಮೀನು ಒಂದು ಕುಟುಂಬದಲ್ಲಿ ಹಲವು ಗಂಡು ಮಕ್ಕಳಿದ್ದರೆ, ಮತ್ತು ಅವರೆಲ್ಲರಿಗೂ ಮದುವೆಯಾಗಿ ಪ್ರತ್ಯೇಕ ಕುಟುಂಬಗಳಾದರೆ ಮನೆಯ ಜಮೀನನ್ನೂ ವಿಭಾಗ ಮಾಡಬೇಕಾಗುತ್ತದೆ. ಆಗ ಪ್ರತಿಯೊಬ್ಬನ ಪಾಲಿಗೆ ಬರುವುದು ಸಣ್ಣ ವಿಸ್ತೀರ್ಣದ ಜಮೀನು, ಸಣ್ಣ ವಿಸ್ತೀರ್ಣದ ಜಮೀನುಗಳಲ್ಲಿ ಕೃಷಿ ಮಾಡುವುದು ಲಾಭಕರವಲ್ಲ. ಅದನ್ನು ತಪ್ಪಿಸಲು ಅಲ್ಲಿನವರು ಕಂಡುಕೊಂಡ ಉಪಾಯವೆಂದರೆ, ಕುಟುಂಬದ ಹಿರಿಯ ಗಂಡಿಗೆ ಮಾತ್ರ ಹೆಣ್ಣನ್ನು ತಂದು ಮದುವೆ ಮಾಡುವುದು, ಮತ್ತು, ಆ ಹೆಣ್ಣು ಅವನ ತಮ್ಮಂದಿರಿಗೂ ಹೆಂಡತಿಯಂತಿರುವುದು! ಇದೇನೂ ಕದ್ದು ಮುಚ್ಚಿ ನಡೆಯುವ ವ್ಯವಹಾರವಲ್ಲ. ಇದೆಲ್ಲವನ್ನೂ ಮದುವೆಯ ಸಮಯದಲ್ಲಿ ಹೆಣ್ಣಿನ ಮನೆಯವರಿಗೆ ತಿಳಿಸಿಯೇ ನಡೆಸಲಾಗುತ್ತದೆ. ಈ ಬಗ್ಗೆ ಯಾರೂ ಯಾರಿಗೂ ದೂರು ನೀಡುವಂತಿಲ್ಲ. ಏಕೆಂದರೆ, ಎಲ್ಲ ಕುಟುಂಬಗಳೂ ಹೆಣ್ಣಿನ ಕೊರತೆಯನ್ನು ಅನುಭವಿಸುತ್ತಿರುವಾಗ ಎಲ್ಲ ಕುಟುಂಬಗಳಿಗೂ ಈ ಕ್ರಮ ಅಥವಾ ಅಕ್ರಮ, ಅನುಕೂಲಕರವಾಗಿಯೇ ಪರಿಣಮಿಸುತ್ತದೆ. ಈ ಕ್ರಮಕ್ಕ ತನಗೆ ಒಪ್ಪಿಗೆ ಇದೆಯೋ ಇಲ್ಲವೋ ಎಂದು ಮದುವೆಯಾಗುವ ಹೆಣ್ಣನ್ನು ಯಾರೂ ಕೇಳುವುದಿಲ್ಲ. ಪುರುಷ ಪ್ರಧಾನ ಸಮಾಜದಲ್ಲಿ ತಾನು ಭ್ರೂಣಾವಸ್ಥೆಯಲ್ಲಿ ಕೊಲ್ಲಲ್ಪಡದ ಇನ್ನೂ ಜೀವಂತವಾಗಿದ್ದೇನೆ ಎಂಬುದೇ ಆ ಹೆಣ್ಣಿಗೆ ಸಮಾಧಾನದ ಸಂಗತಿ!

“ಹೆಣ್ಣುಗಳ ಕೊರತೆಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ರಾಜಸ್ತಾನಿ ಸಮಾಜ ಈಗ ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಿದೆ. ಅವುಗಳಲ್ಲಿ ‘ಆತಾ-ಸಾತಾ’ ಎಂಬುದೊಂದು. ಇದಕ್ಕೆ ‘ಡಬಲ್ ಜೋಡಿ’ ಎಂದೂ ಕರೆಯುತ್ತಾರೆ. ಈ ಕ್ರಮದಲ್ಲಿ ಒಂದು ಮನೆಯ ಹೆಣ್ಣನ್ನು ತರಬೇಕಾದರೆ ಗಂಡಿನ ಮನೆಯವರು ಆ ಹೆಣ್ಣಿನ ಮನೆಯಲ್ಲಿರುವ ಗಂಡುಗಳಿಗೆ ತಮ್ಮ ಹೆಣ್ಣುಗಳನ್ನು ಕೊಡಬೇಕು. ಅಂದರೆ ಯಾವ ಗಂಡಿಗೆ ಸಹೋದರಿಯರಿರುತ್ತಾರೋ ಅಂತಹ ಗಂಡಿಗೆ ಮದುವೆ ಭಾಗ್ಯವಿದೆ. ಹಾಗೆ ಸಹೋದರಿಯರಿಲ್ಲದ ಗಂಡು ಮಕ್ಕಳು ಜೀವಮಾನವಿಡೀ ಅವಿವಾಹಿತರಾಗಿ ಉಳಿಯಬೇಕು!”

 

Tags: