Light
Dark

ದೆಹಲಿ ಧ್ಯಾನ – ಕೆಲವು ಅತ್ಯಾಚಾರಗಳಿಗೇಕೆ ಕಣ್ಣೀರು ಹರಿಯುವುದಿಲ್ಲ?  

 ಡಿ. ಉಮಾಪತಿ

ಅತ್ಯಾಚಾರಿಗಳ ಬಿಡುಗಡೆಗಿಂತ ಅವರ ಬಿಡುಗಡೆಯನ್ನು ಸಿಹಿ ಹಂಚಿ ಹೇಗೆ ಸಂಭ್ರಮಿಸಲಾಯಿತು ಎಂಬುದು ಕಳವಳದ ಸಂಗತಿ!

(ವ್ಯಂಗ್ಯಚಿತ್ರ ಕೃಪೆ- ಪೊನ್ನಪ್ಪ, ದಿ ಪ್ರಿಂಟ್)

ಒಂದೊಂದು ಅತ್ಯಾಚಾರದ ಮೊಕದ್ದಮೆಗೆ ಒಂದೊಂದು ತೆರನ ಶಿಕ್ಷೆ. ೨೦೧೨ರ ಡಿಸೆಂಬರಿನಲ್ಲಿ ದೆಹಲಿಯ ಚಲಿಸುವ ಬಸ್ಸಿನಲ್ಲಿ ನಿರ್ಭಯಾ ಮೇಲೆ ಜರುಗಿದ ಅತ್ಯಾಚಾರದ ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಯಿತು. ಬಿಲ್ಕಿಸ್ ಬಾನುವಿನಂತಹ ಹತ್ತು ಹಲವು ಕೇಸುಗಳಲ್ಲಿ ಜೀವಾವಧಿ ಶಿಕ್ಷೆ. ಈ ಕೇಸಿನಲ್ಲಿ ಕ್ಷಮಾದಾನ ಕೂಡ ಸಿಕ್ಕಿಬಿಟ್ಟಿತು! ಗಂಡಾಳಿಕೆ ಎಂಬ ದಬ್ಬಾಳಿಕೆಯ ಸಮಾಜವಿದು. ಹೆಣ್ಣು ಗಂಡಿನ ನಡುವೆ ಭೇದ ಭಾವ ಅಸಮಾನತೆಯು ಇಂತಹ ಸಮಾಜದ ವಂಶವಾಹಿಯಲ್ಲೇ ಅಡಗಿದೆ. ಇಲ್ಲಿಂದ ನಿರಂತರ ಹರಿದು ಹರಡುತ್ತಿದೆ ಮಹಿಳೆಯ ವಿರುದ್ಧದ ಹಿಂಸೆ. ಮತ್ತು ಮಹಿಳಾ ದ್ವೇಷ. ಮಹಿಳೆಯ ಸಬಲೀಕರಣ ಎಂಬುದು ಕೇವಲ ಆಳುವವರ ತುಟಿ ಮೇಲಿನ ಮಾತುಗಳು. ಸ್ತ್ರೀದ್ವೇಷವೇ ಇವರ ಎದೆಯೊಳಗಿನ ಕಟು ವಾಸ್ತವ.

ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಯ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು ಹನ್ನೊಂದು ಮಂದಿ. ಈ ಅಪರಾಧಿಗಳನ್ನು ಇದೇ ಆಗಸ್ಟ್ ೧೫ರಂದು ಗುಜರಾತ್ ಸರ್ಕಾರ ಕ್ಷಮಾದಾನ ನೀತಿಯಡಿ ಬಿಡುಗಡೆ ಮಾಡಿತು. ಐದು ತಿಂಗಳ ಗರ್ಭಿಣಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಯ ಮೂರು ವರ್ಷದ ಹಸುಳೆಯನ್ನು ನೆಲಕ್ಕೆ ಬಡಿದು ಹತ್ಯೆ ಮಾಡಿದವರಿವರು. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಂದು ಗುಜರಾತ್ ಸರ್ಕಾರ ಈ ಪಾತಕಿಗಳಿಗೆ ಕರುಣಿಸಿದ ಕ್ಷಮೆಯಿದು.

ಕ್ಷಮಾದಾನ ನೀತಿಯಡಿ ಬಿಡುಗಡೆ ಕೋರಿ ಈ ಹನ್ನೊಂದು ಮಂದಿಯ ಪೈಕಿ ಒಬ್ಬ ನ್ಯಾಯಾಲಯದ ಮೊರೆ ಹೋಗಿದ್ದ. ಈ ಅರ್ಜಿ ಕುರಿತು ಎರಡು ತಿಂಗಳೊಳಗೆ ತೀರ್ಮಾನ ತೆಗೆದುಕೊಳ್ಳುವಂತೆ ಸುಪ್ರೀಮ್ ಕೋರ್ಟ್ ಕಳೆದ ಮೇ ತಿಂಗಳಿನಲ್ಲಿ ಗುಜರಾತ್ ಸರ್ಕಾರಕ್ಕೆ ಆದೇಶ ನೀಡಿತ್ತು.
ಸದರಿ ಕ್ಷಮಾದಾನವನ್ನು ಸುಪ್ರೀಮ್ ಕೋರ್ಟಿನ ಆದೇಶದ ಮೇರೆಗೆ ನೀಡಲಾಗಿದೆ ಎಂಬ ಗುಜರಾತ್ ಸರ್ಕಾರದ ಮಾತಿನಲ್ಲಿ ಸತ್ಯಾಂಶ ಇಲ್ಲ. ಕ್ಷಮಾದಾನ ಕೋರಿಕೆಯ ಅಹವಾಲನ್ನು ಮೂರು ತಿಂಗಳುಗಳ ಒಳಗಾಗಿ ಇತ್ಯರ್ಥಪಡಿಸಬೇಕು ಎಂಬುದಷ್ಟೇ ಸುಪ್ರೀಮ್ ಕೋರ್ಟಿನ ಆಣತಿಯಾಗಿತ್ತು. ಈ ಕ್ಷಮಾದಾನ ಎಂಬುದು ಕಾರ್ಯಾಂಗದ ತೀರ್ಮಾನವೇ ವಿನಾ ನ್ಯಾಯಾಂಗದ್ದಲ್ಲ. ನ್ಯಾಯನೀಡಿಕೆಯನ್ನು ಬುಡಮೇಲು ಗೊಳಿಸಿರುವ ಕೃತ್ಯವಿದು. ಅಲ್ಪಸಂಖ್ಯಾತರ ವಿರುದ್ಧ ನಡೆಯುವ ಹತ್ಯೆ ಅತ್ಯಾಚಾರಗಳು ಕ್ಷಮಾದಾನಕ್ಕೆ ಅರ್ಹ, ಅತ್ಯಾಚಾರಿಗಳು- ಹಂತಕರಿಗೆ ರಕ್ಷಣೆ ಉಂಟು ಎಂಬ ಅಪಾಯಕಾರಿ ರಾಜಕೀಯ ಸಂದೇಶ ರವಾನೆಯ ದುಷ್ಕೃತ್ಯ.

ಒಂದೊಂದು ಅತ್ಯಾಚಾರದ ಮೊಕದ್ದಮೆಗೆ ಒಂದೊಂದು ತೆರನ ಶಿಕ್ಷೆ. ೨೦೧೨ರ ಡಿಸೆಂಬರಿನಲ್ಲಿ ದೆಹಲಿಯ ಚಲಿಸುವ ಬಸ್ಸಿನಲ್ಲಿ ನಿರ್ಭಯಾ ಮೇಲೆ ಜರುಗಿದ ಅತ್ಯಾಚಾರದ ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಯಿತು. ಬಿಲ್ಕಿಸ್ ಬಾನುವಿನಂತಹ ಹತ್ತು ಹಲವು ಕೇಸುಗಳಲ್ಲಿ ಜೀವಾವಧಿ ಶಿಕ್ಷೆ. ಈ ಕೇಸಿನಲ್ಲಿ ಕ್ಷಮಾದಾನ ಕೂಡ ಸಿಕ್ಕಿಬಿಟ್ಟಿತು!

ಗಂಡಾಳಿಕೆ ಎಂಬ ದಬ್ಬಾಳಿಕೆಯ ಸಮಾಜವಿದು. ಹೆಣ್ಣು ಗಂಡಿನ ನಡುವೆ ಭೇದ ಭಾವ ಅಸಮಾನತೆಯು ಇಂತಹ ಸಮಾಜದ ವಂಶವಾಹಿಯಲ್ಲೇ ಅಡಗಿದೆ. ಇಲ್ಲಿಂದ ನಿರಂತರ ಹರಿದು ಹರಡುತ್ತಿದೆ ಮಹಿಳೆಯ ವಿರುದ್ಧದ ಹಿಂಸೆ. ಮತ್ತು ಮಹಿಳಾ ದ್ವೇಷ. ಮಹಿಳೆಯ ಸಬಲೀಕರಣ ಎಂಬುದು ಕೇವಲ ಆಳುವವರ ತುಟಿ ಮೇಲಿನ ಮಾತುಗಳು. ಸ್ತ್ರೀದ್ವೇಷವೇ ಇವರ ಎದೆಯೊಳಗಿನ ಕಟು ವಾಸ್ತವ.

ಹನ್ನೊಂದು ಮಂದಿಯನ್ನು ಹೇಗೆ ಬಿಡುಗಡೆ ಮಾಡಲಾಯಿತು ಎಂಬ ಚರ್ಚೆಗಿಂತ ಅವರ ಬಿಡುಗಡೆಯನ್ನು ಸಿಹಿ ಹಂಚಿ ಹೇಗೆ ಸಂಭ್ರಮಿಸಲಾಯಿತು ಎಂಬುದು ಕಳವಳದ ಸಂಗತಿ. ಗಂಡಾಳಿಕೆಯ ಸಮಾಜದಲ್ಲಿ ಹೊಡೆದಾಟ ಬಡಿದಾಟದಲ್ಲಿ ಹೆಣ್ಣಿನ ಮೇಲೆ ಅತ್ಯಾಚಾರ ಎಂಬುದೊಂದು ಆಯುಧದಂತೆ ಬಳಕೆಯಾಗುತ್ತದೆ. ನಿರ್ದಿಷ್ಟ ಸಮುದಾಯ ಅಥವಾ ಗುಂಪನ್ನು ಅವಮಾನಿಸುವುದು, ಬಗ್ಗುಬಡಿಯುವುದು, ಭಯ ಹುಟ್ಟಿಸುವುದು ಇಂತಹ ಅತ್ಯಾಚಾರದ ಉದ್ದೇಶ. ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವರು ಮತ್ತು ಅತ್ಯಾಚಾರಿಗಳಿಗೆ ಸನ್ನಡತೆಯ ಆಧಾರದ ಕ್ಷಮಾದಾನ ದೊರೆಯಕೂಡದು ಎಂಬುದು ಎರಡು ತಿಂಗಳ ಹಿಂದೆಯಷ್ಟೇ ಜಾರಿಯಾದ ಕೇಂದ್ರ ಗೃಹಮಂತ್ರಾಲಯದ ಮಾರ್ಗಸೂಚಿ.

ಲಕ್ಷ್ಮಣ ನಾಸ್ಕರ್ ವರ್ಸಸ್ ಯೂನಿಯನ್ ಅಫ್ ಇಂಡಿಯಾ ಮೊಕದ್ದಮೆಯಲ್ಲಿ ಸುಪ್ರೀಮ್ ಕೋರ್ಟ್ ನೀಡಿರುವ ತೀರ್ಪು ಕೂಡ ಬಹುಮುಖ್ಯ. ಕ್ಷಮಾದಾನ ನೀಡುವಾಗ ಅದನ್ನು ಪಕ್ಕಕ್ಕೆ ಸರಿಸುವ ಪ್ರಶ್ನೆಯೇ ಇಲ್ಲ. ಕ್ಷಮಾದಾನ ನೀಡುವಾಗ ಎಸಗಲಾಗಿರುವ ಅಪರಾಧ ಇಡೀ ಸಮಾಜದ ಮೇಲೆ ಪರಿಣಾಮ ಬೀರದಿರುವ, ಕೇವಲ ವ್ಯಕ್ತಿಗತ ಅಪರಾಧ ಮಾತ್ರ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಸುಪ್ರೀಮ್ ಕೋರ್ಟ್ ಕೂಡ ಹೇಳಿದೆ.
ಈ ಎರಡೂ ಮಾರ್ಗಸೂಚಿಗಳನ್ನು ಗುಜರಾತ್ ಸರ್ಕಾರ ಗಾಳಿಗೆ ತೂರಿ ಸ್ವೇಚ್ಛಾನುಸಾರ ವರ್ತಿಸಿದೆ. ಗುಜರಾತ್ ಸರ್ಕಾರ ರಚಿಸಿದ್ದ ಕ್ಷಮಾದಾನ ಪರಿಶೀಲನಾ ಸಮಿತಿ ನಿಷ್ಪಕ್ಷಪಾತಿ ಅಲ್ಲ, ಸ್ವತಂತ್ರವೂ ಆಗಿರಲಿಲ್ಲ. ಈ ಸಮಿತಿಯ ಇಬ್ಬರು ಸದಸ್ಯರು ಬಿಜೆಪಿ ಶಾಸಕರು. ಸಿ.ಕೆ.ರಾವಲ್ ಜೀ (ಗೋಧ್ರಾ ವಿಧಾನಸಭಾ ಕ್ಷೇತ್ರ) ಮತ್ತು ಸುಮನ್ ಚೌಹಾಣ್ (ಗೋಧ್ರಾ ಜಿಲ್ಲೆಯ ಕಲೋಲ್ ಕ್ಷೇತ್ರ). ಗೋಧ್ರಾದ ಮಾಜಿ ಪುರಸಭಾ ಸದಸ್ಯ ಮುರಳಿ ಮೂಲ್ಚಂದಾನಿ ಮೂರನೆಯ ಸದಸ್ಯ. ಗೋಧ್ರಾ ರೈಲು ದುರಂತ ಪ್ರಕರಣದಲ್ಲಿ ಸರ್ಕಾರಿ ಸಾಕ್ಷ್ಯ ನುಡಿದಿದ್ದಾತ ಈತ. ಬಿಜೆಪಿ ಮಹಿಳಾ ಘಟಕದ ಕಾರ್ಯಕರ್ತೆ ಸ್ನೇಹಾಬೆನ್ ಭಾಟಿಯಾ ನಾಲ್ಕನೆಯ ಸದಸ್ಯೆ. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ಸೆಷನ್ಸ್ ನ್ಯಾಯಾಧೀಶ ಹಾಗೂ ಗೋಧ್ರಾ ಜೈಲು ಸೂಪರಿಂಟಿಂಡೆಂಟ್ ಇತರೆ ಸದಸ್ಯರು. ಗೋಧ್ರಾ ಜಿಲ್ಲಾಧಿಕಾರಿ ಸುಜಲ್ ಮಯಾತ್ರ ಈ ಸಮಿತಿಯ ಅಧ್ಯಕ್ಷ. ಈ ಸಮಿತಿಯು ಕ್ಷಮಾದಾನದ ತೀರ್ಮಾನವನ್ನು ಸರ್ವಾನುಮತದಿಂದ ಅಂಗೀಕರಿಸಿತು.

ಹನ್ನೊಂದು ಮಂದಿಯ ಬಿಡುಗಡೆಯ ನಂತರ ಈ ಸಮಿತಿಯ ಸದಸ್ಯ ರಾವಲ್ ಜೀ ನೀಡಿರುವ ಸಾರ್ವಜನಿಕ ಹೇಳಿಕೆ ಇನ್ನೂ ಘೋರ. ’’ಈ ಹನ್ನೊಂದು ಮಂದಿ ಜಾತಿಯಿಂದ ಬ್ರಾಹ್ಮಣರು. ಈ ಕಾರಣದಿಂದಾಗಿಯೇ ಉತ್ತಮ ಸಂಸ್ಕಾರವಂತರು. ಇವರನ್ನು ಉದ್ದೇಶಪೂರ್ವಕವಾಗಿ ಈ ಕೇಸಿನಲ್ಲಿ ಸಿಕ್ಕಿಸಿ ಹಾಕಿಸಿರಬಹುದು. ಅತ್ಯಾಚಾರ ಮತ್ತು ಹತ್ಯೆಗಳನ್ನು ಇವರು ಮಾಡಿದರೇ ಇಲ್ಲವೇ ಎಂಬುದು ನನಗೆ ಗೊತ್ತಿಲ್ಲ. ಆದರೆ ಅವರ ಗುಣ ನಡತೆ ಒಳ್ಳೆಯದಿತ್ತು. ಕುಟುಂಬದ ಚಟುವಟಿಕೆಗಳು ಉತ್ತಮವಾಗಿದ್ದವು. ಅವರು ಆಚರಿಸುವ ಮೌಲ್ಯಗಳು ಅತ್ಯುತ್ತಮ ವಾಗಿದ್ದವು’’ ಎಂದು ರಾವಲ್ ಜೀ ಬಣ್ಣಿಸಿದ್ದಾರೆ.

ಈ ಹನ್ನೊಂದು ಮಂದಿ ಮಾತ್ರವೇ ಅಲ್ಲ, ಗುಜರಾತ್ ಕೋಮು ಗಲಭೆಯ ಹಲವಾರು ಪ್ರಮುಖರು ಜೈಲಿನಿಂದ ಹೊರಬಿದ್ದಿದ್ದಾರೆ. ಮುಸಲ್ಮಾನ ಗರ್ಭಿಣಿಯ ಗರ್ಭವನ್ನು ಖಡ್ಗದಿಂದ ಕತ್ತರಿಸಿ ಭ್ರೂಣವನ್ನು ಹೊರಗೆಳೆದು ಅದನ್ನು ಕತ್ತಿಯ ತುದಿಗೆ ಸಿಕ್ಕಿಸಿ ಎತ್ತಿ ತೋರಿದ್ದನ್ನು ಬಹಳ ಹೆಮ್ಮೆಯಿಂದ ನೆನಪಿಸಿಕೊಂಡಿದ್ದನೀತ. ಆ ಘಳಿಗೆಯಲ್ಲಿ ತನ್ನನ್ನು ತಾನು ಮಹಾರಾಣಾ ಪ್ರತಾಪ ಮಹಾರಾಜ ಎಂದು ಭಾವಿಸಿ ಬೀಗಿದ್ದಾಗಿ ಹೇಳಿದ್ದ.

ನರೋಡ ಪಾಟ್ಯಾದ ನೂರು ಮಂದಿ ಅಲ್ಪಸಂಖ್ಯಾತರ ಮಾರಣಹೋಮದಲ್ಲಿ ಪಾತ್ರ ವಹಿಸಿದ್ದ ಮಾಯಾ ಕೊಡ್ನಾನಿ ಎಂಬ ಅಂದಿನ ಮಂತ್ರಿಯನ್ನು ಆರೋಗ್ಯದ ಕಾರಣಗಳಿಗಾಗಿ ಬಿಡುಗಡೆ ಮಾಡಲಾಗಿದೆ.

‘ಕುಟುಂಬ ಮರ್ಯಾದೆ’ಯ ಹೊಣೆಗಾರಿಕೆಯನ್ನು ಹೆಣ್ಣು ದೇಹಗಳ ಮೇಲೆಯೇ ಹೊರಿಸಲಾಗಿದೆ. ವಿಶೇಷವಾಗಿ ಆಕೆ ಮತ್ತೊಂದು ಜಾತಿ, ಧರ್ಮ ಅಥವಾ ವರ್ಗಕ್ಕೆ ಸೇರಿದ ಗಂಡನ್ನು ವರಿಸಿದಾಗ ನಡೆಯುವ ‘ಅವಮರ್ಯಾದೆ ಹತ್ಯೆ’ಗಳು ಇಲ್ಲವೇ ಯುದ್ಧಗಳು- ಘರ್ಷಣೆಗಳಲ್ಲಿ ಲೈಂಗಿಕ ಅತ್ಯಾಚಾರಗಳನ್ನು ಶತ್ರುವಿಗೆ ವಿಧಿಸುವ ಶಿಕ್ಷೆಯೆಂದು ಜರುಗಿಸಿದಾಗ ಈ ಮಾತು ಹೆಚ್ಚು ನಿಜವೆನಿಸುತ್ತದೆ.

ಚರಿತ್ರೆಯಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ವಶಪಡಿಸಿಕೊಂಡು ಮುಸಲ್ಮಾನ ಸಂತತಿಯನ್ನು ಹುಟ್ಟಿಸಿದ ದಾಳಿಕೋರ ಮುಸ್ಲಿಂ ದೊರೆಗಳ ಮುಸ್ಲಿಂ ಪತ್ನಿಯರು ಹಿಂದೂ ರಾಜರ ಕೈವಶ ಆದಾಗ ಅವರನ್ನು ಹೆಣ್ಣೆಂದು ಗೌರವಿಸಿ ಬಿಟ್ಟು ಕೊಟ್ಟ ಸದ್ಗುಣವನ್ನು ‘ಬುದ್ಧಿ ಕೆಟ್ಟ ನಡೆ’ ಮುಂತಾದ ಕಟುನುಡಿಗಳಲ್ಲಿ ಖಂಡಿಸುತ್ತಾರೆ ವಿನಾಯಕ ದಾಮೋದರ ಸಾವರ್ಕರ್.

ಕಲ್ಯಾಣದ ಮುಸ್ಲಿಂ ರಾಜ್ಯಪಾಲನ ಸೊಸೆಯನ್ನು ಗೌರವದಿಂದ ನಡೆಸಿಕೊಂಡು ವಾಪಸು ಕಳಿಸುವ ಛತ್ರಪತಿ ಶಿವಾಜಿ ಮತ್ತು ಪೋರ್ಚುಗೀಸ್ ರಾಜ್ಯಪಾಲನ ಪತ್ನಿಯನ್ನು ಸಮ್ಮಾನದಿಂದ ವಾಪಸು ಮಾಡುವ ಚೀಮಾಜಿ ಅಪ್ಪ ಅವರ ನಡೆಯನ್ನು ಓತಪ್ರೋತವಾಗಿ ಟೀಕಿಸುತ್ತಾರೆ. ದಾಳಿಕೋರ ಮುಸ್ಲಿಮರು ಮಾಡಿದ್ದನ್ನು ಆರಂಭದಲ್ಲಿಯೇ ಹಿಂದೂ ರಾಜರು ಅವರ ಹೆಣ್ಣುಮಕ್ಕಳಿಗೆ ಮಾಡಿದ್ದರೆ, ಹಿಂದು ಹೆಣ್ಣುಮಕ್ಕಳತ್ತ ಕಣ್ಣೆತ್ತಿ ನೋಡುವ ಧೈರ್ಯ ಕೂಡ ಅವರಿಗೆ ಇರುತ್ತಿರಲಿಲ್ಲ ಎಂದು ವಾದಿಸುತ್ತಾರೆ.

ಸಿಕ್ಸ್ glorious epochs of Indian history ಎಂಬ ಉದ್ಗ್ರಂಥದ ಎಂಟನೆಯ ಅಧ್ಯಾಯದ ಹೆಸರು perverted conception of virtues

ಸಮಕಾಲೀನ ಭಾರತದ ಕೋಮು ದಂಗೆಗಳಲ್ಲಿ ಸಾವರ್ಕರ್ ಅವರ ಈ ‘ಬೋಧನೆ’ ಅಭಿವ್ಯಕ್ತಿ ಪಡೆದಿದ್ದರೆ ಅದು ಕೇವಲ ಆಕಸ್ಮಿಕ ಅಲ್ಲ!

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ