ಗೋಳೂರು ನಾರಾಯಣಸ್ವಾಮಿ
ಆಗ ತಾನೇ ಗದ್ದೆ ಕೆಲಸದಿಂದ ಬಂದ ನನ್ನ ನೋಡಿದ ಅಜ್ಜಿ ತಾನು ಹಾಡುತ್ತಿದ್ದ ಹಾಡು ನಿಲ್ಲಿಸಿದವಳೆ, ‘ಈಗ್ಬಂದ್ಯ ಕೂಸು, ಕೈ ಕಾಲ್ ತೊಳ್ಕಂಡ್ ಅನ್ನ ಉಣ್ಣು ಹೋಗು’ ಅಂದ್ಳು.
ನಂಗ ಹಸಿವಿರಲಿಲ್ಲ. ಮಾತಿಗಿಳಿದೆ. ‘ಅಯ್ಯೋ ಕಂದಾ ಆ ಕಾಲುದ್ ಮಾತ್ ಯಾಕ್ ಹಾಡ್ದಯಪ್ಪ. ಹಟ್ಟಿ ತುಂಬಾ ಜನ ಮಕ್ಕಮರಿ ನೇಗ್ಲು ಒಣ್ಕ ಹೊಲ ಮನ ಚೆನ್ನಾಗ್ ಗೆಯ್ಯರು. ನಮ್ಮೂರಲ್ಲಿ ಒಂದ್ ಹತ್ ಹನ್ನೆರಡು ಮನ ಅಂತಿನಿ: ದಿಗ್ಗಯ್ಯನ್ಹಟ್ಟಿ, ಕೊನೆಯನ್ಹಟ್ಟಿ, ಗೌಡಯ್ಯನ್ಹಟ್ಟಿ, ಹೊಂಗಯ್ಯನ್ಹಟ್ಟಿ, ಹಳಕೋಟಯ್ಯನ್ಹಟ್ಟಿ, ಪಟೇಲಯ್ಯನ್ಹಟ್ಟಿ, ಚಕ್ರದ್ಹಟ್ಟಿ, ಕೆಂಪಗಯ್ಯನ್ಹಟ್ಟಿ, ಭದ್ರಮ್ಮನ್ಹಟ್ಟಿ, ಮೂಗಿಮಾದಯ್ಯನ್ಹಟ್ಟಿ ಇವು ಮಾತ್ರ ಸಣ್ಣ ಹಂಚುನ್ ಮನಗಳು. ಉಳ್ದವೆಲ್ಲ ಮುಕ್ಕಾಲ್ ಭಾಗ ಗುಳ್ಳುಗಳು. ಹಲ್ಲುನ್ ಮನಗಳು, ವಡ್ಕ ಮನಗಳು. ಈಗ್ಯಾನ ಬರೀ ಮಾಗಡಿ ಮನಗಳಿಯ. ಹೀಗೆಲ್ಲಿದ್ದು ಮೇಗುಲ್ ಕಾವ್ಲಿಗಂಟ ಬರೀ ಮನ್ಗಳೆ ಆದ್ವು. ಇಸ್ಕೂಲ್ ನಂಜಗೂಡಲ್ಲಿ ಇತ್ತು. ನಮ್ಮ ಊರ್ಗ ಗಾಂಧಿಮಾತ್ಮ ಬಂದಿದಾಗ್ಲು ಇಸ್ಕೂಲ್ ಇರ್ಲಿಲ್ವಂತ. ನಮ್ಮಪ್ಪ ಬಸವಣ್ಣನ ಪದಗಳ ಹಾಡ್ತಿದ್ನ. ಜನ ಹೊಲದ ಕೆಲಸ ಮುಗಿದ್ ಮ್ಯಾಲ ಹೊಪ್ಪತ್ನಾಗ ಮಣಿಯಮ್ಮಗುಡಿ ಹಜಾರಲಿ ಕೂತ್ಕಂಡು ಒಳ್ಳೆದು ಕೆಟ್ಟದು ಮಾತಾಡರು. ನಮ್ಮಪ್ಪ ಅಂದ್ರ ಮುಂದ್ ಬರದ್ನು ಯೋಳ್ತಿದ್ನಕಪ. ನೋಡು ಈಗ ಅಂವ ಯೋಳಿ ನಲವತ್ತು ವರ್ಷೂ ಆಗಿಲ್ಲ ನನ್ ಕಣ್ಣಲ್ಲೇ ನೋಡ್ಬುಟ್ಟಿ’’
ಯಾನಮ್ಮ ಅದು?
ಮೊಬೇಲುಕಪೈ! ಅವ ಒಬ್ ಒಬ್ರೆ ತಾವು ಮಾತಾಡ್ಕ ಹೊಯ್ತರಕವ ಅಂತಿದ್ದ ದಿಟ ಆತು.
ರಾಜ್ ಕುಮಾರ್ನ ನೀನು ನೋಡಿದ್ಯ?
ಹೂಂ ನಮ್ಮ ನಂಜನಗೂಡ ಅಯ್ಯಪ್ಪಸ್ವಾಮಿ ದೇವಸ್ಥಾನವ ಅವರ ಕೈಲೇ ಅಲ್ವ ಮೊದ್ಲು ಬಾಗ್ಲು ತಗಿಸಿದ್ದು. ಆಗ ನೋಡಿನಿ. ವೀರಪ್ಪನ್ ಮುಂಡಮಗ ಎತ್ಕಹೋಗಿದ್ದಾಗ ವಸೀ ಅತ್ತಿಲ್ಲ ನಾನು.
ಯಾವ್ಯಾವ ಜಾತ್ರೆಗಳ್ಗ ನೀವು ಹೊಯ್ತಿದ್ರಮ್ಮ.
ಆ ನಮ್ಮಪ್ಪ ಧರಗ ದೊಡ್ಡವರು. ಬೊಪ್ಪೇಗೌಡನ ಜಾತ್ರೆ ಶುರುವಾದ್ರ ಅಲ್ಲಿಂದ ಬೆಟ್ಟದು ಮ್ಯಾಲಿನ ರಂಗಯ್ಯನ ಜಾತ್ರಗಂಟೂ ಹೊಯ್ತಿದ್ನುಕಪ. ನಂಜನಗೂಡು ದೊಡ್ಡ ಜಾತ್ರೆ, ಚಿಕ್ಕಜಾತ್ರೆ, ತಿರುಪತಿ, ಮಾದಪ್ಪನ ಬೆಟ್ಟ, ರಂಗಪ್ಪನ ಬೆಟ್ಟ, ಚಿಕ್ಕಲ್ಲೂರು ಜಾತ್ರ, ಬೊಪ್ಪನಪುರ ಮಂಟೇಸ್ವಾಮಿ, ಕಪ್ಪಡಿ ರಾಚಪ್ಪಾಜಿ ಜಾತ್ರ ಎಲ್ಲಕ್ಕು ಹೊಯ್ತಿದ್ನು. ದೀವಳಿಗೆ ಹೊತ್ಗ ಮಾದಪ್ಪುನ ಬೆಟ್ಟನ ನೋಡಕೆ ಅಂತನೇ ರಜಾ ಹೊಡೆಯಕ ಅಂತ ಹೊಂಟೋಯ್ತಿದ್ನು. ದೀಪಾವಳಿ ಹಬ್ಬುಕ್ಕ ಊರಿಗ ಬತಿದ್ನು. ಈಗ್ಲೂ ಹೊಯ್ತರ ಆದ್ರ ಕಮ್ಮಿ.
ದಸರಾ ಹಿಂದ್ಕ ಅಂದ್ರ ಅಂಬಾರಿ ಮ್ಯಾಲ ರಾಜ್ರು ಕೂತ್ಕ ಹೊಯ್ತಿದ್ರು. ನಾವು ಎತ್ತುನ್ ಗಾಡಿ ಕಟ್ಕಂಡ್ ಹೊತ್ತುಗ್ ಮುಂಚೆ ಊರ್ಬುಡ್ತಿದ್ನು ಮೈಸೂರ್ಗ ಹೋಗಿ ದಸರಾ ನೋಡಕ. ಈಗ ಹಂಗಿದ್ದ ಚಾಮುಂಡಿ ದೇವಿನ ಕೂರುಸ್ತರ. ನೀವು ಬಸ್ ಮ್ಯಾಲ ಹತ್ನಿಮ್ಸುಕ್ ಹೊಯ್ತಿದರಿ.
ಈಗ ನೀನೆನೋ ಇದ್ನೆಲ್ಲ ಕ್ಯೋಳ್ತಿದಯ್ ಇದೆಲ್ಲ ಹೊಟ್ಟ ತುಂಬುದ್ದ ಯಾವ್ದಾರ ಕೆಲ್ಸ ಮಾಡು ಹೋಗು ಕೂಸು. ಅನ್ನುಕ್ಕ ಯಾವ್ದಾರ ದಾರಿ ನೋಡ್ಕ ಕಂದಾ. ಹೋಗು ಕ್ಯಾಮಿ ನೋಡು ಹೋಗು, ಅಂತ ಎದ್ದಳು.