Mysore
23
clear sky

Social Media

ಬುಧವಾರ, 21 ಜನವರಿ 2026
Light
Dark

ಲಾಭದಾಯಕ ಉದ್ಯಮವಾಗುತ್ತಿರುವ ಖಾಸಗಿ ಚಲನಚಿತ್ರ ಪ್ರಶಸ್ತಿ ಪರಂಪರೆಯ ನಡುವೆ 

ಚಪ್ಪಾಳೆ ಮತ್ತು ಪ್ರಶಸ್ತಿಗಳು ಕಲಾವಿದರಿಗೆ ಶಕ್ತಿವರ್ಧಕ ಟಾನಿಕ್ ಇದ್ದಂತೆ. ಬಹಳಷ್ಟು ಸಂದರ್ಭಗಳಲ್ಲಿ ಯಾರು ಚಪ್ಪಾಳೆ ತಟ್ಟುತ್ತಾರೆ, ಯಾರು ಪ್ರಶಸ್ತಿ ನೀಡುತ್ತಾರೆ ಎನ್ನುವುದು ಮುಖ್ಯವಾಗುವುದಿಲ್ಲ. ಅವು ಬಂತು ಎನ್ನುವುದಷ್ಟೇ ಮುಖ್ಯ. ಇತ್ತೀಚೆಗಂತೂ ಚಿತ್ರರಂಗದಲ್ಲಿ ಹಲವು ಖಾಸಗಿ ಸಂಸ್ಥೆಗಳ ಪ್ರಶಸ್ತಿಗಳು. ಅವುಗಳಿಗೆ ‘ಅಂತಾರಾಷ್ಟ್ರೀಯ’ ಎನ್ನುವ ಶಬ್ಧ ಸೇರಿಕೊಂಡರಂತೂ ಬೇರೆ ಹೇಳಬೇಕಿಲ್ಲ! ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳು! ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳ ಸುದ್ದಿ! ಈ ಪ್ರಸ್ತಾಪಕ್ಕೆ ಕಾರಣ ಕಳೆದ ವಾರ ದುಬೈಯಲ್ಲಿ ನಡೆದ ಒಂದು ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಅದರ ನಂತರದ ಬೆಳವಣಿಗೆ.

ಇದರ ಹೆಸರು ದಕ್ಷಿಣ ಭಾರತ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು (South Indian International Movie Awards -SIIMA) ಸೈಮಾ ಎಂದು ಸಂಕ್ಷಿಪ್ತ ರೂಪ. ೨೦೧೨ರಲ್ಲಿ ಆರಂಭವಾದ ಈ ಪ್ರಶಸ್ತಿ ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳದಲ್ಲಿ ಆಯಾ ವರ್ಷ ತೆರೆಕಂಡ ಚಲನಚಿತ್ರಗಳಲ್ಲಿ ಅತ್ಯುತ್ತಮ ಎಂದು ಅವರು ಆರಿಸುವ ಚಿತ್ರಗಳಿಗೆ ಮತ್ತು ಕಲಾವಿದರು, ತಂತ್ರಜ್ಞರಿಗೆ ನೀಡಲಾಗುತ್ತದೆ. ದಕ್ಷಿಣ ಭಾರತೀಯ ಭಾಷೆಗಳಲ್ಲಿ ತಯಾರಾಗುವ ಚಿತ್ರಗಳಿಗೆ ನೀಡುವ ಪ್ರಶಸ್ತಿ ‘ಅಂತಾರಾಷ್ಟ್ರೀಯ’ ಆಗುವುದಂತು ಚೋದ್ಯವೇ ಸರಿ!

ಸಾಮಾನ್ಯವಾಗಿ ಈ ಪ್ರಶಸ್ತಿಯ ಸಂಯೋಜಕರು ಎರಡು ದಿನಗಳ ಕಾಲ ಇದನ್ನು ಹಮ್ಮಿಕೊಳ್ಳುತ್ತಾರೆ. ಮೊದಲ ದಿನ ತೆಲುಗು ಮತ್ತು ಕನ್ನಡ ಚಿತ್ರಗಳವಿಜೇತರು ಮತ್ತು ಎರಡನೇ ದಿನ ತಮಿಳು ಮತ್ತು ಮಲಯಾಳ ಚಿತ್ರಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ. ನಡುನಡುವೆ ಮನರಂಜನಾ ಕಾರ್ಯಕ್ರಮಗಳು- ಜನಪ್ರಿಯ ಕಲಾವಿರಿಂದ ಸಾಮಾನ್ಯವಾಗಿ ಇರುತ್ತವೆ. ಅಲ್ಲಿ ಪ್ರಶಸ್ತಿ ವಿಜೇತರು ಸಾಮಾನ್ಯವಾಗಿ ಜನಪ್ರಿಯ ಕಲಾವಿದ, ತಂತ್ರಜ್ಞರಾಗಿರುತ್ತಾರೆ. ಅನಿವಾರ್ಯವಾಗಿ ವಿಮರ್ಶಕರ ಆಯ್ಕೆ ಎಂದು ಕೆಲವು ಪ್ರಶಸ್ತಿಗಳನ್ನು ನೀಡುವುದೂ ಇದೆ.

ಮೊನ್ನೆ ಸೈಮಾದಲ್ಲಿ ನಡೆದ ಬೆಳವಣಿಗೆ ಹೇಳುವ ಮೊದಲು ಅದರ ಹಿನ್ನೆಲೆಯ ಬಗೆಗೂ ಹೇಳಬೇಕು. ಈ ಪ್ರಶಸ್ತಿ ಯೋಚನೆ, ಯೋಜನೆಗೆ ಮೂಲ ಕಾರಣ ೨೦೦೧ರಲ್ಲಿ ಆರಂಭವಾದ ಇನ್ನೊಂದು ‘ಅಂತಾರಾಷ್ಟ್ರೀಯ’ ಪ್ರಶಸ್ತಿ. ಅಂತಾರಾಷ್ಟ್ರೀಯ ಭಾರತ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು International Indian Film Academy Awards (IIFA Awards)   ಭಾರತೀಯ ಚಿತ್ರಗಳಿಗೆ ಪ್ರಶಸ್ತಿ ಎಂದು ಇದ್ದರೂ ಅದು ಕೇವಲ ಹಿಂದಿ ಚಿತ್ರಗಳಿಗೆ ಮಾತ್ರ ಮೀಸಲಾಗಿತ್ತು. ಬೇರೆ ಯಾವ ಭಾರತೀಯ ಭಾಷಾ ಚಿತ್ರಗಳಿಗಾಗಲೀ, ಅಲ್ಲಿನ ಕಲಾವಿದ ತಂತ್ರಜ್ಞರಿಗಾಗಲೀ ಈ ಪ್ರಶಸ್ತಿ ನೀಡಲಿಲ್ಲ. ಮೊದಲಿನಿಂದಲೂ ಭಾರತೀಯ ಚಿತ್ರಗಳೆಂದರೆ ಹಿಂದಿ ಚಿತ್ರಗಳೆಂದೇ ಹೇಳುವ ಒಂದು ವರ್ಗ ಇದ್ದೇ ಇದೆ. ಇತರ ಭಾರತೀಯ ಭಾಷಾ ಚಿತ್ರಗಳನ್ನು ಪ್ರಾದೇಶಿಕ ಭಾಷಾ ಚಿತ್ರಗಳು ಎಂದು ಹೇಳುವುದನ್ನು ಆ ಮಂದಿ ರೂಢಿ ಮಾಡಿ ಕೊಂಡಿದ್ದಾರೆ. ಇತರ ಭಾರತೀಯ ಭಾಷೆಗಳು ಪ್ರಾದೇಶಿಕ ಆದರೆ, ಹಿಂದಿ ಕೂಡಾ ಪ್ರಾದೇಶಿಕವೇ ಎನ್ನುವವರ ಸಂಖ್ಯೆ ಕಡಿಮೆ. ರಾಷ್ಟ್ರೀಯ ಮಟ್ಟದಲ್ಲಿ ಸಮಾರಂಭಗಳನ್ನು ಆಯೋಜಿಸುವ ವಿಚ್‌ಕ್ರಾಫ್ಟ್ ಸಂಸ್ಥೆಯ ಆಶ್ರಯದಲ್ಲಿ ಈ ಐಫಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

ಅದು ಸಾಮಾನ್ಯವಾಗಿ ವಿದೇಶಗಳಲ್ಲಿ ನಡೆಯುತ್ತದೆ. ಮೊದಲ ಪ್ರಶಸ್ತಿ ಪ್ರದಾನ ಲಂಡನ್‌ನಲ್ಲಿ ನಡೆದರೆ, ಮೊನ್ನೆ ಮಾರ್ಚ್‌ನಲ್ಲಿ ನಡೆದದ್ದು ಗುಜರಾತಿನಲ್ಲಿ. ಕೆಲವು ವರ್ಷಗಳ ಹಿಂದೆ ದುಬೈಯಲ್ಲಿ ಈ ಪ್ರಶಸ್ತಿಪ್ರದಾನ ಸಮಾರಂಭ ನಡದಾಗ ಅಲ್ಲಿಗೆ ನಟ ಮಮ್ಮುಟಿ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. ‘ಭಾರತೀಯ ಚಿತ್ರರಂಗಕ್ಕೆ ಪ್ರಶಸ್ತಿ’ ಎಂದರೆ ಕೇವಲ ಹಿಂದಿ ಚಿತ್ರಗಳಿಗೆ ಕೊಡುವುದನ್ನು ಅವರು ಅಲ್ಲಿ ವೇದಿಕೆಯ ಮೇಲೆಯೇ ಖಂಡಿಸಿದರಲ್ಲದೆ, ದಕ್ಷಿಣ ಭಾರತದಲ್ಲಿ ತಯಾರಾಗುವ ಚಿತ್ರಗಳ ಕುರಿತಂತೆ ಆ ಮಂದಿಗೆ ತಿಳಿಯಹೇಳಿದರು. ಅದರ ಪರಿಣಾಮವೋ, ಅಥವಾ ದಕ್ಷಿಣ ಭಾರತ ಎಂದರೆ ಬೇರೆಯೇ ಅಂದುಕೊಂಡೋ ಏನೋ, ಐಫಾ ಉತ್ಸವಂ ಹೆಸರಿನಲ್ಲಿ ದಕ್ಷಿಣ ಭಾರತೀಯ ಭಾಷಾ ಚಿತ್ರಗಳಿಗೆ ಸೀಮಿತವಾಗಿ ಪ್ರಶಸ್ತಿ ನೀಡಲು ಆರಂಭಿಸಿದರು. ಅದು ಆರಂಭ ಆದದ್ದು ೨೦೧೬ರಲ್ಲಿ. ಇಲ್ಲಿಯವರೆಗೆ ಮೂರು ಬಾರಿ ಆಗಿದೆ ಎನ್ನುವುದು ಮಾಹಿತಿ.

ಐಫಾಕ್ಕೆ ಪರ್ಯಾಯವಾಗಿ ದಕ್ಷಿಣ ಭಾರತೀಯ ಭಾಷಾ ಚಿತ್ರಗಳಿಗೆ ಪ್ರಶಸ್ತಿ ನೀಡಬೇಕು ಎನ್ನುವ ಯೋಚನೆ, ಯೋಜನೆ ಆರಂಭವಾದದ್ದು ಬೆಂಗಳೂರಿನಲ್ಲಿ.ಪ್ರತಿ ಭಾಷಾ ಚಿತ್ರರಂಗಗಳಿಂದ ಒಬ್ಬ ಜನಪ್ರಿಯ ನಟರನ್ನು ರಾಯಭಾರಿಯಾಗಿ ಮಾಡುವುದು, ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆಯೇ ಮೊದಲಾದ ಆರಂಭಿಕ ಮಾತಕತೆಗಳಾಗುತ್ತಿದ್ದವು. ಬೆಂಗಳೂರಿನಲ್ಲಿ ಮೊದಲ ಸಭೆಯಲ್ಲಿ ನಟ ವಿಷ್ಣುವರ್ಧನ್ ಪಾಲ್ಗೊಂಡ ನೆನಪು. ಅದೇ ತಾನೇ ಐಪಿಎಲ್ ಸ್ಛೂರ್ತಿಯಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಕೈಗೆತ್ತಿಕೊಂಡ ವಿಷ್ಣುವರ್ಧನ್ ಇಂದೂರಿ ಇದರ ಸ್ಥಾಪಕರಾದರು. ಈಗಲೂ ಅವರೇ ಅದನ್ನು ನಡೆಸುತ್ತಿದ್ದಾರೆ. ಮೊನ್ನೆ ದುಬೈಯಲ್ಲಿ ನಡೆದದ್ದು ೧೩ನೇ ಸೈಮಾ ಅವಾರ್ಡ್ ಕಾರ್ಯಕ್ರಮ ಅಭಿನಯಕ್ಕೆ ವಿಮರ್ಶಕರಿಂದ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದ ‘ದುನಿಯಾ’ ಖ್ಯಾತಿಯ ವಿಜಿ ವೇದಿಕೆ ಏರಿ ಪ್ರಶಸ್ತಿ ಸ್ವೀಕರಿಸುವ ವೇಳೆ ಸಭಾಂಗಣ ಬಹುತೇಕ ಖಾಲಿಯಾಗುತ್ತಿತ್ತು. ಕನ್ನಡ ಚಿತ್ರರಂಗವನ್ನು ಹೀಗೆ ಕಡೆಗಣಿಸಬೇಡಿ ಎಂದು ವೇದಿಕೆಯಿಂದ ಸಂಯೋಜಕರಿಗೆ ಹೇಳಿದ್ದೇ ಅಲ್ಲದೆ, ಇಂತಹ ಕಾರ್ಯಕ್ರಮಗಳಿಗೆ ಬರುವುದರ ಕುರಿತಂತೆ ಮರುಚಿಂತನೆ ಮಾಡಬೇಕು ಎನ್ನುವ ಮಾತು ಹೇಳಿದ್ದಾಗಿಯೂ ಕೇಳಿಬಂತು.

ಗೀತರಚನೆಕಾರ, ನಿರ್ದೇಶಕ ಕವಿರಾಜ್ ಅವರೂ ಈ ಸಾಲಿನ ಪ್ರಶಸ್ತಿ ಪುರಸ್ಕೃತರ ಸಾಲಿನಲ್ಲಿ ಇದ್ದವರು. ಅವರು ಸೈಮಾ ಹಾಗೂ ಅಂತಹ ಪ್ರಶಸ್ತಿಯ ಹಿಂದೆ ಏನಿದೆ ಎನ್ನುವುದನ್ನು ಸರಿಯಾಗಿ ಗಮನಿಸಿದ್ಧಾರೆ. ಅದನ್ನು ತಮ್ಮ ಸಾಮಾಜಿಕ ಪುಟದಲ್ಲಿ ಬರೆದುಕೊಂಡಿದ್ದಾರೆ ಕೂಡಾ. ಮೊದಲ ವರ್ಷ ಅವರಿಗೆ ಪ್ರಶಸ್ತಿ ಸಂದಿತ್ತು. ಸಂಘಟಕರೊಂದಿಗೆ ಆದ ಘರ್ಷಣೆಯ ನಂತರಅವರು ಹೇಳುತ್ತಾರೆ. ಆನಂತರ ಬಹುಶಃ ನನ್ನ ಹೆಸರು ಅವರ ಬ್ಲಾಕ್ ಲಿಸ್ಟ್ ಸೇರಿತು, ಅಲ್ಲಿಂದ ಸುಮಾರು ೧೨ ವರ್ಷಗಳಾದವು. ಅಪ್ಪಿತಪ್ಪಿಯೂ ಅವರು ನನ್ನನ್ನು ಸಮಾರಂಭಕ್ಕೆ ಕರೆದಿಲ್ಲ, ಈ ನಡುವೆ ನನಗೆ ಬೇರೆ ಹಲವು ಪ್ರಶಸ್ತಿಗಳು ಬಂದರೂ, ಇವರ ಸಂಸ್ಥೆಯಿಂದ ಪ್ರಶಸ್ತಿ ಬರುವುದಿರಲಿ, ಬಹುತೇಕ ನಾಮಿನೇಶನ್ ಕೂಡ ಮಾಡುವುದಿಲ್ಲ. ನಮಗೆ ಗೌರವ ಕೊಡದ ಸ್ಥಳದಲ್ಲಿ ನಮ್ಮ ಚಪ್ಪಲಿಯನ್ನು ಬಿಡಬಾರದು ಎಂಬ ನಿಲುವಿನ ನನಗೆ ಈ ಕುರಿತು ಸ್ವಲ್ಪವೂ ವಿಷಾದ ಕೂಡಾ ಇಲ್ಲ.

ಇಲ್ಲಿ ಅದಕ್ಕಿಂತಲೂ ಮುಖ್ಯವಾದ ಸಾಲುಗಳಿವೆ. ಅದು ಈ ಪ್ರಶಸ್ತಿಗಳ ಹಿಂದಿರುವ ಉದ್ದೇಶ. ಬಹುತೇಕ ಪ್ರಶಸ್ತಿ ಸಮಾರಂಭಗಳಲ್ಲಿ ಪ್ರತಿಭೆಗಳನ್ನು ಗೌರವಿಸುವ ಕಾರ್ಯ ಬರೀ ತೋರಿಕೆ ಅಷ್ಟೇ. ಇದೊಂದು ಸ್ಪಾನ್ಸರ್ಸ್, ಟೆಲಿಕಾಸ್ಟ್ ರೈಟ್ಸ್ ಮೂಲಕ ಭರ್ಜರಿ ಹಣ ಗಳಿಸುವ ಪಕ್ಕಾ ಬಿಸಿನೆಸ್ ಮಾಡೆಲ್. ಹಾಗಾಗಿ ಈ ರೀತಿ ಅಗೌರವ ತೋರುವ ಜಾಗಗಳಿಗೆ ಹೋಗದಿರುವ ದಿಟ್ಟ ನಿರ್ಧಾರವನ್ನು ನಮ್ಮ ಚಿತ್ರರಂಗ ತೆಗೆದುಕೊಳ್ಳಬೇಕು ಎನ್ನುವುದು ಅವರ ಮಾತು, ಸಲಹೆ.

ಪ್ರಶಸ್ತಿಗಳ ಸಂಯೋಜನೆ ಮಾತ್ರವಲ್ಲ, ಇತ್ತೀಚೆಗೆ ಅಂತಾರಾಷ್ಟ್ರೀಯ ಚಿತ್ರೋತ್ಸವಗಳ ಯೋಜನೆ ಕೂಡಾ ಲಾಭದಾಯಕ ಆಗತೊಡಗಿದೆ. ವಿಶ್ವದಾದ್ಯಂತ ಸಹಸ್ರಾರು ಇಂತಹ ಚಿತ್ರೋತ್ಸವಗಳಿವೆ. ಕೆಲವು ನಗರಗಳ ಹೆಸರಿನಲ್ಲಿ ಆದರೆ, ಕೆಲವು ಹೆಸರಾಂತ ಮಂದಿಯ ಹೆಸರಿನಲ್ಲಿ ನಡೆಯುತ್ತವೆ. ನೋಯ್ಡಾದ ವ್ಯಕ್ತಿಯೊಬ್ಬ ಎಂಟು ಚಿತ್ರೋತ್ಸವಗಳನ್ನು ಆಯೋಜಿಸುತ್ತಿದ್ದಾನೆ. ಪ್ರಶಸ್ತಿಗಳನ್ನು ಕೊಡುತ್ತಾನೆ. ‘ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಶನಲ್ ಫಿಲಂ ಫೆಸ್ಟಿವಲ್ ಅವಾರ್ಡ್’ ಹೆಸರಲ್ಲಿ ಆತ ನೀಡುವ ಪ್ರಶಸ್ತಿ, ಇಲ್ಲಿ ಕೇವಲ ‘ಫಾಲ್ಕೆ ಪ್ರಶಸ್ತಿ’ ಆಗಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾದದ್ದೂ ಇದೆ. ಅಂತಾರಾಷ್ಟ್ರೀಯ ಚಿತ್ರೋತ್ಸವಗಳನ್ನು ಹಮ್ಮಿಕೊಳ್ಳುವುದರಿಂದ ಸಂಘಟಕರಿಗೆ ಲಾಭ ಆಗುವುದು ಹೇಗೆ ಎನ್ನುವ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಸರ್ಕಾರದ, ಇಲ್ಲವೇ ಇತರ ಪ್ರತಿಷ್ಠಿತ ಚಿತ್ರೋತ್ಸವಗಳ ಹೊರತುಪಡಿಸಿದರೆ, ಉಳಿದ ಕಡೆ, ಪ್ರವೇಶ ಶುಲ್ಕ ಕೇವಲ ಚಿತ್ರಗಳಿಗೆ ಮಾತ್ರವಲ್ಲ, ವೈಯಕ್ತಿಕ ಪ್ರಶಸ್ತಿಗೆ ಪ್ರತ್ಯೇಕ ಇರುತ್ತದೆ. ನಟ, ನಟಿ, ಪೋಷಕ ನಟ/ನಟಿ, ನಿರ್ದೇಶಕ, ಚಿತ್ರಕಥಾ ಕರ್ತೃ, ಸಂಭಾಷಣೆ, ಗಾಯಕ, ಗಾಯಕಿ. ಹೀಗೆ ಯಾವೆಲ್ಲ ವಿಭಾಗಗಳಲ್ಲಿ ಪ್ರಶಸ್ತಿ ಬೇಕೋ ಅವಕ್ಕೆ ಬೇರೆಬೇರೆ ಶುಲ್ಕ ತೆರಬೇಕು. ಸಂಘಟಕರು ಪ್ರಮಾಣಪತ್ರ ಕಳುಹಿಸುತ್ತಾರೆ. ಅದು ಪ್ರಚಾರಕರ್ತರ ಮೂಲಕ ಸುದ್ದಿ ಕೂಡಾ ಆಗುವುದೇ ಹೆಚ್ಚು!

ಮಾನ್ಯತೆ ಪಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವಗಳು ಮತ್ತು ಇತರ ಕೆಲವು ಪ್ರತಿಷ್ಠಿತ ಚಿತ್ರೋತ್ಸವ ಹೊರತುಪಡಿಸಿದರೆ, ಬಹುತೇಕ ಇದೇ ಮಾದರಿಯವು.ಪಾಲ್ಗೊಳ್ಳಲು ಶುಲ್ಕ ತೆತ್ತು ಬಂದ ಎಲ್ಲ ಚಿತ್ರಗಳಿಗೂ ಒಂದಲ್ಲ ಒಂದು ಪ್ರಶಸ್ತಿ ನೀಡುವ ಚಿತ್ರೋತ್ಸವಗಳೂ ಇವೆ. ಇದನ್ನು ನೀವು ನಂಬಲೇ ಬೇಕು. ಗೂಗಲ್ನಲ್ಲಿ ಹುಡುಕಾಡಿದರೆ ಇಂತಹ ಚಿತ್ರೋತ್ಸವಗಳ ವಿವರಗಳು ಬೇಕಾದಷ್ಟು ಸಿಗುತ್ತವೆ. ಈ ಬೆಳವಣಿಗೆ ಡಿಜಿಟಲ್ ಕ್ರಾಂತಿಯ ನಂತರ ಆಯಿತು. ಈ ಬೆಳವಣಿಗೆಗೆ ಪೂರಕ ನೆರವು ನೀಡುವ ಸಂಸ್ಥೆಯೂ ಇದೆ. ಪ್ರಾಯೋಜಕರ ಪ್ರಚಾರದಾಹವನ್ನು ಸಮರ್ಥವಾಗಿ ಬಳಸಿಕೊಳ್ಳುವ ಸಂಸ್ಥೆಗಳು ಸಾಕಷ್ಟಿವೆ. ಸೈಮಾ ಇರಲಿ, ಐಫಾ ಇರಲಿ, ಆ ಕಾರ್ಯಕ್ರಮಗಳು ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುತ್ತವೆ. ಪ್ರಾಯೋಜಕರಿಗೆ ಪ್ರಚಾರ, ಅವರ ಸಂಸ್ಥೆಗಳಿಗೂ. ಹಾಗಾಗಿಯೇ ಪ್ರಶಸ್ತಿಗಳ ಆಯ್ಕೆಯ ವೇಳೆ ಅವರಿಗೆ ಜನಪ್ರಿಯ ನಟ ನಟಿಯರೇ ಪ್ರಶಸ್ತಿಭಾಜನರಾಗಬೇಕು; ಅಂಥವರಿಂದಲೇ ಮನರಂಜನಾ ಕಾರ್ಯಕ್ರಮಗಳಿರಬೇಕು. ಅದು ವಾಹಿನಿಗಳಿಗೂ ಜಾಹೀರಾತುದಾರರನ್ನು ಸೆಳೆಯಲು ರಹದಾರಿಯಾಗುತ್ತದೆ. ಸೃಜನಶೀಲತೆಯ ಪ್ರೋತ್ಸಾಹದ ಹೆಸರಲ್ಲಿ, ಕವಿರಾಜ್ ಹೇಳಿದಂತೆ ಪ್ರಾಯೋಜಕರ ಮೂಲಕ, ವಾಹಿನಿಗಳಲ್ಲಿ ಪ್ರಸಾರದ ಹಕ್ಕುಗಳನ್ನು ಮಾರುವ ಮೂಲಕ ಹಣ ಮಾಡುವುದಷ್ಟೇ ಗುರಿಯಾದಾಗ, ಅವರಿಗೆ ಆ ಕಾರ್ಯಕ್ರಮದ ಇತರ ಅಂಶಗಳು ಗೌಣವಾಗುತ್ತವೆ. ಸ್ವಾಭಿಮಾನಿ ಕಲಾವಿದರದು ಅರಣ್ಯರೋದನ ಆಗುತ್ತದೆ, ಅಲ್ಲವೇ?

” ಬಹುತೇಕ ಪ್ರಶಸ್ತಿ ಸಮಾರಂಭಗಳಲ್ಲಿ ಪ್ರತಿಭೆಗಳನ್ನು ಗೌರವಿಸುವ ಕಾರ್ಯ ಬರೀ ತೋರಿಕೆ ಅಷ್ಟೇ. ಇದೊಂದು ಸ್ಪಾನ್ಸರ್ಸ್, ಟೆಲಿಕಾಸ್ಟ್ ರೈಟ್ಸ್ ಮೂಲಕ ಭರ್ಜರಿ ಹಣ ಗಳಿಸುವ ಪಕ್ಕಾ ಬಿಸಿನೆಸ್ ಮಾಡೆಲ್.”

ವೈಡ್‌ ಆಂಗಲ್‌
-ಬಾ.ನಾ.ಸುಬ್ರಹ್ಮಣ್ಯ 

Tags:
error: Content is protected !!