Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮತ್ತೆ ಮತ್ತೆ ವಾಲ್ಮೀಕಿ

ಪ್ರೊ.ಎನ್.ಕೆ.ಲೋಲಾಕ್ಷಿ

ಜಗತ್ತಿನ ಮೊಟ್ಟಮೊದಲ ಕವಿ ಎನಿಸಿಕೊಂಡಿರುವ ವಾಲ್ಮೀಕಿ ಇಡೀ ಜಗತ್ತಿನಲ್ಲಿ ಮಹಾಕಾವ್ಯ ಪರಂಪರೆ ಸೃಷ್ಟಿಸಿದವರು. ರಾಮಾಯಣವೇ ಮೊದಲ ಮಹಾಕಾವ್ಯ ಅನ್ನಿ, ವಾಲ್ಮೀಕಿ ರಾಮಾಯಣದ ಮೂಲವನ್ನು ಆಧರಿಸಿ ಭಾರತದ ಎಲ್ಲ ಭಾಷೆಗಳಲ್ಲೂ ಇಂದು ಮಹರ್ಷಿ ವಾಲ್ಮೀಕಿ ಜಯಂತಿ ರಚನೆಯಾಗಿದೆ ಎಂಬುದು ಹೆಗ್ಗಳಿಕೆ. ಅವರವರ ಚಿಂತನೆಗಳಿಗೆ ಸಂಸ್ಕೃತಿಗೆ ಅನುಗುಣವಾಗಿ ನೂರಾರು ರಾಮಾಯಣಗಳನ್ನು ಕವಿಗಳು ಸೃಷ್ಟಿಸಿಕೊಂಡಿದ್ದಾರೆ.

ರಾಮಾಯಣ ರಚನೆಯಾಗಿ ಸಾವಿರಾರು ವರ್ಷಗಳು ಕಳೆದಿದ್ದರೂ ಆ ಕಾವ್ಯ ಕಟ್ಟಿಕೊಟ್ಟಿರುವ ಸಂಸ್ಕೃತಿ, ಸಮಾಜ ಮತ್ತು ಕಾವ್ಯ ಕಟ್ಟಿಕೊಟ್ಟಿರುವ ಸಂಸ್ಕೃತಿ, ಸಮಾಜ ಮತ್ತು ವ್ಯಕ್ತಿತ್ವಗಳು ಚರ್ಚಿತವಾಗುತ್ತಲೇ ಇವೆ. ಕಾರಣ ಸಮಾಜದ ಚಲನೆ, ಸಮಾಜವು ಸದಾಕಾಲ ಬದಲಾವಣೆಗೆ ಒಳಗಾಗುವ ಮೂಲಕ ಮರುಸೃಷ್ಟಿಗೊಳ್ಳುತ್ತಿರುತ್ತದೆ. ಹಾಗಾಗಿ ವಾಲ್ಮೀಕಿಯು ರಚಿಸಿರುವ ರಾಮಾಯಣ ಕೃತಿಯು ಎಲ್ಲ ಸಮಾಜಗಳ ಪ್ರತಿಬಿಂಬಕವಾಗಿ ಮರು ನಿರ್ವಚನಗೊಳ್ಳುತ್ತಲೇ ಇರುತ್ತದೆ. ವಾಲ್ಮೀಕಿಯು ಒಂದು ಯುಗದ ಚಿತ್ರಣವನ್ನು ಕೃತಿಯಲ್ಲಿ ಮೂಡಿಸಿದ್ದಾರೆ. ಇದು ಒಂದು ರೀತಿಯ ಲಿಖಿತ ಇತಿಹಾಸ ದಾಖಲೆಯಾಗಿದೆ. ಆ ಮೂಲಕವೇ ವಾಲ್ಮೀಕಿಯನ್ನು ರಾಮಾಯಣದ ಮೂಲಕ ಅರ್ಥಮಾಡಿಕೊಳ್ಳುವುದು ಔಚಿತ್ಯ ಪೂರ್ಣವಾದುದು.

ವಾಲ್ಮೀಕಿಯನ್ನು 3 ಆಯಾಮಗಳಲ್ಲಿ ನಿರ್ವಚಿಸಿಕೊಳ್ಳಬಹುದು.

1.ಕೌಟುಂಬಿಕ ಆಯಾಮ: ಸಮಾಜದಲ್ಲಿ ಅದರಲ್ಲೂ ಭಾರತೀಯ ಸಮಾಜದಲ್ಲಿ ಕುಟುಂಬ ವ್ಯವಸ್ಥೆ ಮುಖ್ಯವಾದುದು. ರಾಮಾಯಣ ಕೃತಿಯಲ್ಲಿ ಬರುವ ದಶರಥ ಮಹಾರಾಜನಿಗೆ 3 ಜನ ಮಡದಿಯರು. ಕೌಸಲ್ಯ, ಸುಮಿತ್ರೆ, ಕೈಕಸಿ, ಬಹುಪತ್ನಿತ್ವ ಕುಟುಂಬ ಪದ್ಧತಿಯು ಹೇಗೆ ರಾಜನ, ಮಡದಿಯರ, ಮಕ್ಕಳ ಹಾಗೇ ರಾಜ್ಯದ ನಾಶಕ್ಕೆ ಕಾರಣವಾಗುತ್ತದೆ ಎಂಬುದನ್ನು ವಾಲ್ಮೀಕಿ ರಾಮಾಯಣದಲ್ಲಿ ಚಿತ್ರಿಸಿದ್ದಾರೆ. ತನಗಿಂತ ಅತೀ ಚಿಕ್ಕವಯಸ್ಸಿನ ಕೈಕಸಿಯನ್ನು (ಕೈಕಯಿ) ಮದುವೆಯಾದ ರಾಜನ ಸ್ಥಿತಿಯನ್ನು ಇಲ್ಲಿ ವಾಲ್ಮೀಕಿ ಹೇಳುತ್ತಲೇ ಬಹುಪತ್ನಿತ್ವವನ್ನು ನಿರಾಕರಿಸುತ್ತಿರುವುದನ್ನೂ ಕಾಣಬಹುದು.

2. ಸ್ತ್ರೀವಾದಿ ಆಯಾಮ: ಜಗತ್ತಿನ ಅತ್ಯಂತ ಶ್ರೇಷ್ಠ ಹಾಗೂ ಮೊಟ್ಟಮೊದಲ ಸ್ತ್ರೀವಾದಿ ವಾಲ್ಮೀಕಿ, ಕಾರಣ ರಾಮ-ಸೀತೆಯನ್ನು ಕಾಡಿಗೆ ಕಳುಹಿಸಿದಾಗ ವಾಲ್ಮೀಕಿಯು ಸ್ವತಃ ತಾನೇ ಅಲ್ಲಿ ಪಾತ್ರವಾಗಿ ಸೀತೆಗೆ ತಂದೆಯ ಸ್ಥಾನದಲ್ಲಿ ನಿಂತು ರಕ್ಷಣೆ ನೀಡುತ್ತಾರೆ. ಪ್ರಸ್ತುತದ ದಿನಮಾನಗಳಲ್ಲಿ ಒಂಟಿ ಹೆಣ್ಣು ಸಿಕ್ಕರೇ
ಅವಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡುವ ಸಮಾಜಕ್ಕೆ ಸೀತೆಯಂತಹ ಗರ್ಭಿಣಿಯನ್ನು, ಸುಂದರಿಯನ್ನು, ರಾಣಿಯನ್ನು ತಂದೆಯಾಗಿ ಸಾಕುವ ಜತೆಗೆ ಅವಳ ಮಕ್ಕಳಾದ ಲವ-ಕುಶರನ್ನು ನೋಡಿಕೊಳ್ಳುವ ವಾಲ್ಮೀಕಿ ಶ್ರೇಷ್ಠ ಸ್ತ್ರೀವಾದಿಯಾಗಿ ಮಾದರಿಯಾಗಿ ಕಾಣುತ್ತಾರೆ.

3. ರಾಜಕೀಯ ಆಯಾಮ: ರಾಜರ ಆಡಳಿತದಲ್ಲಿ ಇದ್ದಂತಹ ಅಧಿಕಾರದ ಆಸೆಯ ಆತ್ಯಂತಿಕ ನೆಲೆಯನ್ನು ರಾಮಾಯಣವು ಅನಾವರಣ ಮಾಡಿದೆ. ಅಯೋಧ್ಯೆಯ ರಾಜನಾಗಬೇಕು ಎಂಬ ಜಿಜ್ಞಾಸೆಯೇ ರಾಮಾಯಣ. ರಾಮನೋ ಅಥವಾ ಭರತನೋ ಎಂಬ ಚರ್ಚೆ, ಸೀತೆಯಿಂದಲೇ ಮಾತ್ರ ರಾಮಾಯಣವಲ್ಲ. ಪಿತೃ ಪ್ರಧಾನ ವ್ಯವಸ್ಥೆಯ ಅಧಿಕಾರದ ದುರಾಸೆ ರಾಮಾಯಣದ ಮೂಲ ಧಾತುವಾಗಿದೆ.

ವಾಲ್ಮೀಕಿಯು ಕಂಡ ಜಗತ್ತು ವಿಶಾಲವಾದುದು. ಅಲ್ಲಿ ಕಾಡು, ನಾಡು ಎರಡೂ ಮಾನವೀಯ ಬದುಕು ಹೇಗಿರಬೇಕು? ಇಲ್ಲದಿದ್ದರೆ ಏನಾಗುತ್ತದೆ? ಎಂಬುದರ ಒಳಿತು ಕೆಡುಕುಗಳ ಚಿತ್ರಣವೇ ವಾಲ್ಮೀಕಿಯ ರಾಮಾಯಣ.
ಹಾಗಾಗಿ ವಾಲ್ಮೀಕಿ ಇಂದಿಗೂ ನಾಳೆಗೂ ಮತ್ತೆ ಮತ್ತೆ ಬೇಕಾಗಿರುವ ಕವಿ, ವಾಲ್ಮೀಕಿ ಎಂಬ ಮಹಾಕವಿ ರಾಮ ಹಾಗೂ ರಾಮಾಯಣ ಇರುವವರೆಗೂ ಶಾಶ್ವತವಾಗಿರುತ್ತಾರೆ.
(ಲೇಖಕರು: ನಿರ್ದೇಶಕರು ಮತ್ತು ಪ್ರಾಧ್ಯಾಪಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ)

ರಾಮಾಯಣ ರಚನೆಯಾಗಿ ಸಾವಿರಾರು ವರ್ಷಗಳು ಕಳೆದಿದ್ದರೂ ಆ ಕಾವ್ಯ ಕಟ್ಟಿಕೊಟ್ಟಿರುವ ಸಂಸ್ಕೃತಿ, ಸಮಾಜ ಮತ್ತು ಕಾವ್ಯ ಕಟ್ಟಿಕೊಟ್ಟಿರುವ ಸಂಸ್ಕೃತಿ, ಸಮಾಜ ಮತ್ತು ವ್ಯಕ್ತಿತ್ವಗಳು ಚರ್ಚಿತವಾಗುತ್ತಲೇ ಇವೆ. ಕಾರಣ ಸಮಾಜದ ಚಲನೆ, ಸಮಾಜವು ಸದಾಕಾಲ ಬದಲಾವಣೆಗೆ ಒಳಗಾಗುವ ಮೂಲಕ ಮರುಸೃಷ್ಟಿಗೊಳ್ಳುತ್ತಿರುತ್ತದೆ. ಹಾಗಾಗಿ ವಾಲ್ಮೀಕಿಯು ರಚಿಸಿರುವ ರಾಮಾಯಣ ಕೃತಿಯು ಎಲ್ಲ ಸಮಾಜಗಳ ಪ್ರತಿಬಿಂಬಕವಾಗಿ ಮರು ನಿರ್ವಚನಗೊಳ್ಳುತ್ತಲೇ ಇರುತ್ತದೆ.

 

Tags: