ನನಗೆ ಧ್ಯಾನಸ್ಥ ಸ್ಥಿತಿಯಲ್ಲಿ ಕವಿತೆಯೊಳಗೆ ಹೊಕ್ಕು ತನ್ಮಯಗೊಳ್ಳುವ ಸೂಕ್ಷ್ಮತೆ ತಾಳ್ಮೆ ಕಡಿಮೆ. ‘ಪದ್ಯಂ ವಧ್ಯಂ ಗದ್ಯಂ ಹೃದ್ಯಂ’ ಪಂಥಕ್ಕೆ ಸೇರಿದ ನಾನು, ಕತೆ-ಕಾದಂಬರಿಗಳನ್ನು ಕುದುರೆ ಹಿಂಡಿ ಮುಕ್ಕುವಂತೆ ಓದಬಲ್ಲೆ. ಇದಕ್ಕೆ ಕಾರಣ, ಬಾಲ್ಯದಲ್ಲಿ ನನಗೆ ಸಿಕ್ಕ ಕಥಾ ಪರಿಸರ. ಕೆಲವರು ‘ನೀವು ಲೇಖಕರಾಗಲು ಪ್ರೇರಣೆಯೇನು?’ ಎಂಬ ಸವೆದ ಪ್ರಶ್ನೆಯನ್ನು ಕೇಳುವುದುಂಟು. ಆಗೆಲ್ಲ ನಾನು ‘ಚಂದಮಾಮ, ಹರಿಕತೆ, ಕನ್ನಡ ಸಿನಿಮಾ’ ಎನ್ನುತ್ತೇನೆ. ಗಂಭೀರವಾದ ಮಹತ್ತಾದ ಉತ್ತರವನ್ನು ನಿರೀಕ್ಷಿಸುತ್ತಿದ್ದ ಅವರಿಗೆ, ಮುಖದಲ್ಲಿ ಕ್ಷಣಕಾಲ ನಿರಾಶೆಯ ನೆರಳು ಕವಿಯುವುದು; ಇಂತಹ ಕಲಾತ್ಮಕ ಪ್ರಶ್ನೆಯನ್ನು ಈ ಚಿಲ್ಲರೆ ಮನುಷ್ಯನಿಗೆ ಕೇಳಿದೆವಲ್ಲಾ ಎಂಬ ವಿಷಾದಭಾವವೂ ಮೂಡುವುದು. ಆದರೇನು ಮಾಡಲಿ, ಇದುವೇ ವಾಸ್ತವ. ನನ್ನಜ್ಜ ನಾಟಕದಲ್ಲಿ ಪಾತ್ರ ಮಾಡುತ್ತಿದ್ದನಂತೆ ಮತ್ತು ತಬಲ ಬಾರಿಸುತ್ತಿದ್ದನಂತೆ. ಈ ಆಧಾರದಲ್ಲಿ ನನ್ನ ಪೂರ್ವಿಕರ ಡಿಎನ್‌ಎಯ ಒಂದು ಅಂಶ ಕೆಲಸ ಮಾಡಿರಬಹುದು ಎಂದು ಹೇಳಬಹುದಿತ್ತು. ಆದರೆ ಇದು ಅಪ್ಪಟ ಊಹೆಯೇ. ಯಾವುದೇ ಕಲೆ ವಂಶದಿಂದ ಬರುವುದಿಲ್ಲ. ನಾವು ಹುಟ್ಟಿ ಬೆಳೆದ ಪರಿಸರವು ಬೆಳೆಸುವ ಪ್ರಜ್ಞೆಯಿಂದ ಬಂದಿರಲು ಸಾಧ್ಯವಿದೆ. ಈ ಲೆಕ್ಕದಲ್ಲಿ ನನ್ನ ಅಪ್ಪನಲ್ಲಂತೂ ಕಲಾಸಕ್ತಿ ಸೂಜಿಮೊನೆಯಷ್ಟೂ ಇರಲಿಲ್ಲ. ಅವನು ಮೈಮರೆತು ಸಂತೋಷದಿಂದ ಸಿನಿಮಾ ನೋಡಿದ್ದಾಗಲಿ, ಸಂಗೀತ ಕೇಳಿದ್ದಾಗಲಿ, ಕತೆ ಆಲಿಸಿದ್ದಾಗಲಿ ನಮಗೆ ನೆನಪಿಲ್ಲ. ಆದರೆ ಅಮ್ಮನಿಗೆ ಮಾತ್ರ ಸಿನಿಮಾ ನೋಡುವ ವ್ಯಸನವಿತ್ತು. ತಮಿಳು-ಕನ್ನಡ ಸಿನಿಮಾಗಳನ್ನು ಆಕೆ ಗೆಳತಿ ಪಟ್ಟಮ್ಮಾಳ್ ಜತೆಗೂಡಿ ನೋಡುತ್ತಿದ್ದಳು. ಇವರಿಬ್ಬರೂ, ಹಳ್ಳಿಯಿಂದ ಗಾಡಿ ಕಟ್ಟಿಸಿಕೊಂಡು ಸಿನಿಮಾ ನೋಡಲು ತರೀಕೆರೆಗೆ ಹೋಗುತ್ತಿದ್ದರು. ನಾವು ಸೊಕ್ಕೆಅಜ್ಜಿ ಎಂದು ಕರೆಯುತ್ತಿದ್ದ ಅಮ್ಮನ ಚಿಕ್ಕಮ್ಮನ ಮನೆತನದವರಂತೂ, ತರೀಕೆರೆಗೆ ಸಿನಿಮಾ ನೋಡಲು ಊರಿಂದ ಬಂದಾಗಲೆಲ್ಲ ನಮ್ಮಲ್ಲಿ ಉಳಿಯುತ್ತಿದ್ದರು. ಫಸ್ಟ್‌ಶೊಗೆ ಹೋಗುವುದಿದ್ದರೆ, ಬೇಗ ಅಡುಗೆ ಮಾಡಿ ಹಸಿಬಿಸಿಯಾದ್ದನ್ನು ಗಬಗಬನೆ ತಿಂದು, ಥಿಯೇಟರಿನತ್ತ ಓಡುತ್ತಿದ್ದರು. ಹೊಸ ಸಿನಿಮಾ ಬಂತೆಂದರೆ, ಮನೆ ದಸರೆಯಲ್ಲಿ ಮೈಸೂರಿನವರ ಮನೆಗಳಂತೆ ತುಂಬಿಹೋಗುತ್ತಿತ್ತು. ಸಿನಿಮಾಕ್ಕಾಗಿ ಕೆಲವರು ಸಾಲ ಮಾಡುವುದು, ಕೊಡಪಾನ ಬೆಂಡೋಲೆ ಅಡವಿಡುವುದು ಮಾಡುತ್ತಿದ್ದರು. ಸಿನಿಮಾ ನೋಡಿ ಬಂದ ಮೇಲೆ ಅರ್ಧದಿನ ಅದರದ್ದೇ ಚರ್ಚೆ.
ಹಿರಿಯರ ಈ ಚಾಳಿ ಚಿಕ್ಕತಲೆಮಾರಿನ ನಮಗೆಲ್ಲ ಸಾಂಗವಾಗಿ ವರ್ಗಾವಣೆಯಾಯಿತು. ನಮ್ಮನ್ನು ಬಿಟ್ಟು ಹಿರಿಯರು ಸಿನಿಮಾಕ್ಕೆ ಹೋದರೆ, ಅಳುತ್ತ ಹೊರಗೆ ಧರಣಿ ಕೂತಿರುತ್ತಿದ್ದೆವು. ಹೊಸ ಸಿನಿಮಾ ಬಂದರೆ, ದುಡ್ಡು ಹೊಂದಿಸುವುದು ಜೀವನದ ಏಕೈಕ ಪರಮೋದ್ದೇಶ ಆಗಿತ್ತು. ರಾತ್ರಿಯೂಟ ಮುಗಿಸಿ ಮೈಗೆ ಬೆಡ್‌ಶೀಟ್ ಸುತ್ತಿಕೊಂಡು ಸೆಕೆಂಡ್ ಶೋಗೆ ಅರ್ಧಗಂಟೆ ಮುಂಚೆಯೇ ಹೋಗಿ ಟಾಕೀಸಿನ ಬಳಿ ಠಳಾಯಿಸುತ್ತಿದ್ದೆವು. ಸಿನಿಮಾ ಗೀತೆಗಳನ್ನು ನಾನು ರಾಷ್ಟ್ರಗೀತೆಯಂತೆ ಹಾಡುತ್ತಿದ್ದೆ. ಕಲ್ಯಾಣ ಮಂಟಪಗಳಿಂದ ಮದುವೆ ಸೀಜನ್ನಿನಲ್ಲಿ ಮನೆಯೊಳಗೆ ಎಲ್ಲಿದ್ದರೂ ‘ಒಲವೇ ಜೀವನ ಸಾಕ್ಷಾತ್ಕಾರಾ’ ‘ಆಕಾಶವೇ ಬೀಳಲಿ ಮೇಲೆ’ ಕೇಳಿಬರುತ್ತಿದ್ದವು. ಬೀದಿಯಲ್ಲಿ ಯಾರದಾದರೂ ಮನೆಯಲ್ಲಿ ಶುಭಕಾರ್ಯವಿದ್ದರೆ, ಹಾಡಲು ಕರೆಯುವಷ್ಟು ಜನಪ್ರಿಯತೆಯನ್ನೂ ಗಳಿಸಿದ್ದೆ. ಈಗ ಮುದುಕಿಯರಾಗಿರುವ ನಮ್ಮ ಬೀದಿಯ ಕೆಲವು ಹುಡುಗಿಯರು ಸಿಕ್ಕಾಗ ‘ನಾನ ದೊಡ್ಡವಳಾದಾಗ ನೀನು ಬಂದು ಹಾಡಿದ್ದೆಯಲ್ಲವಾ’ ಎಂದು ಹೇಳುವುದುಂಟು. ಮಿಡ್ಲಸ್ಕೂಲಿನಲ್ಲಿ ಮೇಷ್ಟರುಗಳು ಪಾಠಮಾಡಲು ಬೇಸರವಾದ ‘ಏ ಸಾಬಿ, ಒಂದು ಹಾಡು ಹಾಡೊ’ ಎಂದು ಅಪ್ಪಣೆ ಮಾಡಲು, ಆನಂದದಲ್ಲಿ ಶಿರಸಾವಹಿಸಿ ನೆರವೇರಿಸುತ್ತಿದ್ದೆವು. ಥಿಯೇಟಿರಿನ ಎದುರಾ ಎದುರೇ ಶಾಲೆಯಿದ್ದರೆ ಮಕ್ಕಳಾದರೂ ಏನು ಕಲಿತಾರು? ‘ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ’ ‘ಶಿವಪ್ಪ ಕಾಯೋತಂದೆ’, ‘ಪ್ರೀತಿನೇ ಆ ದ್ಯಾವ್ರ ತಂದ ಆಸ್ತಿ ನಮ್ಮ ಬಾಳಿಗೆ’ ಮೊದಲಾದವು ನನ್ನ ಪೇವರಿಟ್ ಹಾಡುಗಳಾಗಿದ್ದವು.
ಅಕ್ಕನ ಗಂಡನ ಕಡೆಯವರು ಮನೆಗೆ ಬಂದರೆ, ನಾವೆಲ್ಲ ಅವರ ಮುಂದೆ ಒಬ್ಬೊಬ್ಬರಾಗಿ ಹೋಗಿ ಪರಿಚಯ ಮಾಡಿಕೊಳ್ಳುತ್ತಿದ್ದೆವು. ಅವರು ದೊಡ್ಡಸ್ತಿಕೆಯ ದನಿಯಲ್ಲಿ ನನಗೆ ‘ಎಷ್ಟನೇ ಕ್ಲಾಸ್ ಓದ್ತಿದ್ದೀಯ? ಎಲ್ಲಿ, ಇಂಗ್ಲೀಶ್ ಪಾಠ ಓದು, ಕನ್ನಡದ ಪದ್ಯ ಹಾಡು’ ಎಂದು ಪರೀಕ್ಷೆ ಮಾಡುತ್ತಿದ್ದರು. ಆಗ ನಾನು ಪಠ್ಯಪುಸ್ತಕದಲ್ಲಿದ್ದ ಪದ್ಯಗಳನ್ನು ಹಾಡುತ್ತಿದ್ದೆ. ಜತೆಗೆ ಸಿನಿಮಾಗಳನ್ನು ಹಾಡುತಿದ್ದೆ. ನಮಗೆ ಸಿನಿಮಾ ಹಾಡು, ರಾಜರತ್ನಂ ಪದ್ಯ, ಜನಪದ ಹಾಡುಗಳ ನಡುವೇ ವ್ಯತ್ಯಾಸವೇ ಇರಲಿಲ್ಲ. ನಾನು ಅಂತರಗಟ್ಟೆಯ ಜಾತ್ರೆಯಲ್ಲಿ ನಾಲ್ಕಾಣೆ ಕೊಟ್ಟು ತಂದಿದ್ದ-ನಾನು ಖರೀದಿಸಿದ ಮೊಟ್ಟಮೊದಲ ಪುಸ್ತಕವಿದು-‘ಜನಪದ ತ್ರಿಪದಿಗಳು’ನಲ್ಲಿದ್ದ ತ್ರಿಪದಿಗಳನ್ನು ರಾಗವಾಗಿ ಓದುತ್ತಿದ್ದೆ.
ಅಮ್ಮ, ಅಪ್ಪ ಮನೆಯಲ್ಲಿರದ ಮಧ್ಯಾಹ್ನಗಳಲ್ಲಿ, ತಾನು ನೋಡಿಬಂದ ಸಿನಿಮಾದ ಕಥೆಯನ್ನು ಹೆಂಗಸರ ಸಭೆಯಲ್ಲಿ ನಿರೂಪಿಸುತ್ತಿದ್ದಳು. ಈ ಮಹಿಳಾಮಂಡಳಿಯ ಕಲಾಪಗಳು ಮಧ್ಯಾಹ್ನದೂಟದ ಬಳಿಕ ಶುರುವಾದರೆ, ಸಂಜೆ ಹೊತ್ತಿಗೆ ಮುಗಿಯುತ್ತಿದ್ದವು. ಅಪ್ಪ ಆಕಸ್ಮಿಕವಾಗಿ ಚಿರತೆಯಂತೆ ನುಗ್ಗಿ ಬಂದರೆ ಟಾಕೀಸಿನಲ್ಲಿ ಕರೆಂಟು ಹೋದಂತೆ ಕಥೆ ನಿಲ್ಲುತ್ತಿತ್ತು. ಪ್ರೇಕ್ಷಕರು ಜಿಂಕೆಗಳಂತೆ ಧಡಧಡ ಮನೆಖಾಲಿ ಮಾಡುತ್ತಿದ್ದರು. ಈ ಮಹಿಳಾಗೋಷ್ಠಿಗಳಲ್ಲಿ ಚಿಕ್ಕವನಾದ ನನಗೆ ಪ್ರವೇಶವಿತ್ತು. ನಾನು ಸಭಿಕರಿಗೆ ಎಲೆಅಡಿಕೆ ತಂಬಾಕು, ಚಹ ಸರಬರಾಜು ಮಾಡಿಕೊಂಡು ಕತೆ ಕೇಳುತ್ತಿದ್ದೆ. ಅಮ್ಮನ ಕಥಾಪ್ರಸಂಗದಲ್ಲಿ ಶ್ರೋತೃಗಳು ಸಂದರ್ಭಾನುಸಾರ ಬಿದ್ದುಬಿದ್ದು ನಗುತ್ತಿದ್ದರು, ಇಲ್ಲವೇ ಕಣ್ಣೀರು ಸುರಿಸುತ್ತಿದ್ದರು. ಕೊನೆಯಲ್ಲಿ ‘ಬೂಮಾ, ನೀವು ಕತೆ ಹೇಳ್ತಿದ್ರೆ ನಿಜವಾಗಲೂ ಸಿನಿಮಾ ನೋಡಿದಂಗಾಗುತ್ತೆ ಕಂಡ್ರಿ’ ಎಂದು ಪ್ರಶಸ್ತಿಪತ್ರ ಕೊಡುತ್ತಿದ್ದರು. ಬರೆಹ ಮಾಡಿದ್ದರೆ, ಪ್ರಸಿದ್ಧ ಕತೆಗಾರ್ತಿಯಾಗಿರುತ್ತಿದ್ದಳು. ಪ್ರೇಕ್ಷಕರೆಲ್ಲ ಎದ್ದುಹೋದ ಬಳಿಕ ಅಕ್ಕ ಮನೆಗುಡಿಸಿ, ಮೊರದಷ್ಟು ಧೂಳನ್ನು ಹೊರಚೆಲ್ಲಿ, ನೀರು ಚಿಮುಕಿಸುತ್ತಿದ್ದಳು.
ಕತೆಗಾರ್ತಿಯಾದ ಅಮ್ಮ ಕತೆಗಳನ್ನು ಆಸ್ಥೆಯಿಂದ ಕೇಳುತ್ತಿದ್ದಳು. ಹೈಸ್ಕೂಲಿನಲ್ಲಿದ್ದಾಗ ಕ್ಲಾಸ್‌ಮೇಟ್ ಬಟಾಣಿ ರಾಘು, ದಿನವೊಂದಕ್ಕೆ ಐದು ಪೈಸೆ ಬಾಡಿಗೆಯ ಮೇಲೆ ಹಳೆಯ ‘ಚಂದಮಾಮ’ ಸಂಚಿಕೆಗಳನ್ನು ಕೊಡುತ್ತಿದ್ದ. ಎರಡನೇ ದಿನ ಇರಿಸಿಕೊಂಡರೆ ಐದುಪೈಸೆ ಹೆಚ್ಚು ಕೊಡಬೇಕಾಗಿತ್ತು. ಹೀಗಾಗಿ ರಾತ್ರಿಯೆಲ್ಲ ಚಂದಮಾಮವನ್ನು ಬುಡ್ಡಿಯ ಬೆಳಕಲ್ಲಿ ಓದಿ ಮುಗಿಸಬೇಕಾಗಿತ್ತು. ಪ್ರೌಢಶಾಲೆಗೆ ಹೋದಮೇಲೆ ಎದುರಿಗಿದ್ದ ಸಾರ್ವಜನಿಕ ಲೈಬ್ರರಿಯಲ್ಲಿ ಕಾದಂಬರಿ ಆತ್ಮಚರಿತ್ರೆ ಜೀವನಚರಿತ್ರೆ ತಂದು ಅಮ್ಮನ ಮುಂದೆ ಓದುತ್ತಿದ್ದೆ. ನನ್ನ ಓದುಗಾರಿಕೆ ಮುಗಿದ ಮೇಲೆ ಅಮ್ಮ ಕಥೆಯ ವಿಶ್ಲೇಷಣೆ ಮಾಡುತ್ತಿದ್ದಳು. ಅಮ್ಮನ ಕಥನಗುಣವು ಹಿರಿಯಕ್ಕನಲ್ಲಿ ಹರಿದುಬಂದಿದೆ. ಈಕೆ ಬೀದಿಯಲ್ಲಿ ನಡೆದ ಸಣ್ಣ ಘಟನೆಯನ್ನೂ ಸಜೀವಗೊಳಿಸಿ ಆಯಾ ಪಾತ್ರವು ತಾನೇ ಬಂದು ಡೈಲಾಗ್ ಹೇಳುತ್ತಿದೆ ಎಂಬಂತೆ ನಿರೂಪಿಸಬಲ್ಲ ಪ್ರತಿಭಾವಂತೆ. ಶತ್ರುವನ್ನು ಮಿತ್ರನಾಗಿಯೂ ಮಿತ್ರನನ್ನು ಶತ್ರುವಾಗಿಯೂ ಚಿತ್ರಿಸಬಲ್ಲ ಅವಳ ಕಥನಶಕ್ತಿಯಿಂದ, ಕುಟುಂಬದ ಸಂಬಂಧಗಳಲ್ಲಿ ಕೆಲವು ಒಳ್ಳೆಯ ಕೆಲಸಗಳೂ ಹಲವು ಅನಾಹುತಗಳೂ ಆಗಿವೆ. ಅಮ್ಮ ಅಕ್ಕ ಬಿಟ್ಟರೆ ನಮ್ಮ ಹೆಣ್ಣಜ್ಜಿ ಕೂಡ ಕನ್ನಡದಲ್ಲಿ ಅದ್ಭುತವಾಗಿ ಕತೆ ಹೇಳುತ್ತಿದ್ದಳು. ಅವಳ ಕತೆಗಳನ್ನು ನಾನು ಸಂಗ್ರಹಿಸಿ ಪ್ರಕಟಿಸಿದೆ. ಆದರೆ ನಾವು ಬುಡೇನಜ್ಜಿ ಎಂದು ಕರೆಯುತ್ತಿದ್ದ ಅಪ್ಪನ ದೊಡ್ಡಮ್ಮ ಮಾತ್ರ ಕತೆ ಹೇಳಲು ನಿರಾಕರಿಸುತ್ತಿದ್ದಳು. ಬಹಳ ಪೀಡಿಸಿದರೆ, ಮತ್ತೊಬ್ಬರ ಬದುಕನ್ನು ನಾವು ಕತೆ ಮಾಡಿ ಹೇಳಬಾರದಪ್ಪ, ನಮ್ಮ ಜೀವನವೂ ಇನ್ನೊಬ್ಬರ ಬಾಯಲ್ಲಿ ಕತೆಯಾಗುತ್ತೆ ಎಂದು ನಿರಾಕರಿಸುತ್ತಿದ್ದರು. ಚಿಕ್ಕವಯಸ್ಸಲ್ಲೇ ಗಂಡನನ್ನೂ ಏಕೈಕ ಪ್ರಾಯದ ಮಗನನ್ನೂ ಕಳೆದುಕೊಂಡಿದ್ದ ಆಕೆಗೆ ದುಃಖ ಸಾಯುವ ತನಕವೂ ಇತ್ತು.
ನನ್ನ ಬರೆಹದಲ್ಲಿ ಕಿಂಚಿತ್ ಕಥನದ ಗುಣವೇನಾದರೂ ಇದ್ದರೆ, ಅದಕ್ಕೆ ಬಾಲ್ಯದಲ್ಲಿ ಮಹಿಳಾ ಕತೆಗಾರರ ನಡುವೆ ಬೆಳೆದಿದ್ದೂ ಒಂದು ಕಾರಣವಿದ್ದೀತು. ಕತೆಗಾರಿಕೆಯೆಂದರೆ, ಯಾರಿಂದಲೊ ಕೇಳಿದ ಕತೆಯನ್ನು ಕಲ್ಪನಾಶಕ್ತಿಯಿಂದ ಮರುಹುಟ್ಟಿಸುವುದು. ನಾವು ನೋಡಿದ ಬೀದಿಯ ಘಟನೆಯನ್ನು ಅಲಂಕರಿಸಿ ಜೀವಕೊಟ್ಟು ಮಂಡಿಸುವುದು. ಆದರೆ ನನ್ನ ಹೆಂಡತಿ ಬಾನುವಿಗೆ, ನಡೆದ ಸ್ವಾರಸ್ಯಕರ ಘಟನೆಯನ್ನೂ ಸರಳವಾಗಿ ಆಕರ್ಷಕವಾಗಿ ನಿರೂಪಿಸಲು ಬರುವುದಿಲ್ಲ. ಅವಳು ನಮ್ಮ ಕುಟುಂಬದ ಪ್ರತಿಭಾವಂತ ಕಥಾಪ್ರತಿಭೆಗಳನ್ನೆಲ್ಲ ‘ಪಿಚ್ಚರ್ ಬಿಡುವವರು’, ‘ಗುಡಗೇರಿ ಕಂಪನಿಯವರು’ ‘ಬೆಂಕಿಹಚ್ಚುವವರು’ ಎಂದೆಲ್ಲ ಹೇಳಿ, ತನ್ನ ಸೋಲನ್ನೂ ಹೊಟ್ಟೆಯೊಳಗಿನ ಕಿಚ್ಚನ್ನು ಹೊರಚೆಲ್ಲುತ್ತಾಳೆ. ಸತ್ಯದ ತಲೆಯ ಮೇಲೆ ಹೊಡೆದಂತೆ ಕತೆ ಕಟ್ಟುವುದೂ ಒಂದು ಅಪೂರ್ವ ಪ್ರತಿಭೆ, ಎಂಬುದು ಗೊತ್ತಿಲ್ಲದ ಜನ ಇನ್ನೇನು ತಾನೇ ಮಾಡಬಲ್ಲರು?