Mysore
18
few clouds

Social Media

ಗುರುವಾರ, 16 ಜನವರಿ 2025
Light
Dark

ʻ777 ಚಾರ್ಲಿʼಗೆ ಜಿಎಸ್ ಟಿ ತೆರಿಗೆ ವಿನಾಯಿತಿ ಹಿಂದೆ ಮುಂದೆ

ಪ್ರೇಕ್ಷಕರಿಂದ ತೆರಿಗೆ ಸಂಗ್ರಹಿಸದೆ ಇದ್ದರೂ, ಪ್ರದರ್ಶಕರು ತಾವೇ ಪಾವತಿಸಿ, ನಂತರ ಹಿಂಪಾವತಿಗೆ ಅರ್ಜಿ ಸಲ್ಲಿಸಿ  ಪಡೆದುಕೊಳ್ಳಬೇಕು! 

ಪರಂವಃ ಸ್ಟುಡಿಯೊ ನಿರ್ಮಿಸಿರುವ ʻ777 ಚಾರ್ಲಿʼ ಚಿತ್ರಕ್ಕೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)ಯನ್ನು ದಿನಾಂಕ 19/06/2022ರಿಂದ ಆರು ತಿಂಗಳ ಕಾಲ ಪ್ರೇಕ್ಷಕರಿಗೆ ವಿನಾಯಿತಿ ಮಾಡುವ ಆದೇಶವನ್ನು ಕೆಲವು ಷರತ್ತುಗಳಿಗೆ ಒಳಪಟ್ಟು ಸರ್ಕಾರ ನೀಡಿದೆ. ಈ ಆದೇಶದ ಕುರಿತಂತೆ ಸಾಕಷ್ಟು ಚರ್ಚೆ, ಜಿಜ್ಞಾಸೆ ಆರಂಭ ಆಗಿದೆ.

ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬರುವ ಮೊದಲು, ಬೇರೆ ಬೇರೆ ರಾಜ್ಯಗಳಲ್ಲಿ ಮನರಂಜನಾ ತೆರಿಗೆ 30% ನಿಂದ 110% ವರೆಗೆ ವಿಧಿಸಲಾಗುತ್ತಿತ್ತು. ಕರ್ನಾಟಕದಲ್ಲಿ, ಮೊದಲು 110% ಇತ್ತು. ಅದು 55% ತೆರಿಗೆ ಮತ್ತು 55% ಸರ್ಚಾರ್ಜ್ ಸೇರಿದ ಶುಲ್ಕ. ರಾಜ್ಯದಲ್ಲಿ ಸಹಾಯಧನ ಯೋಜನೆ ಜಾರಿಗೆ ಬಂದಾಗ, ಪ್ರತಿ ಪ್ರವೇಶದ ಮೇಲೆ ಸರ್ಚಾರ್ಜ್ ವಿಧಿಸಿ, ಆ ಮೊತ್ತವನ್ನು ಉದ್ಯಮದ ಪ್ರಗತಿಗಾಗಿ ಮೀಸಲಿಡುವುದಾಗಿ ಸರ್ಕಾರ ಹೇಳಿತ್ತು. ಪ್ರೇಕ್ಷಕರಿಗೆ ಪ್ರವೇಶ ದರ ಮತ್ತು ಮನರಂಜನಾ ತೆರಿಗೆ ಮತ್ತು ಸರ್ಚಾರ್ಜ್ ಸೇರಿ ಪ್ರವೇಶ ಶುಲ್ಕ ದುಬಾರಿ ಆಗುತ್ತದೆ ಎನ್ನುವುದರಿಂದ ನಂತರ ಈ ತೆರಿಗೆ ಯನ್ನು 70%ಗೆ ಇಳಿಸಲಾಯಿತು. ಅಂತಿಮವಾಗಿ ಅದು 40% ಆಯಿತು. ಹತ್ತು ರೂ. ಪ್ರವೇಶ ದರ ಇದ್ದರೆ, ತೆರಿಗೆ ಸಮೇತ ಅದು 14 ರೂ. ಆಗುತ್ತಿತ್ತು.

ಆರಂಭದ ದಿನಗಳಲ್ಲಿ ಪ್ರಶಸ್ತಿ ವಿಜೇತ ಇಲ್ಲವೇ ವಿಶೇಷ ಅನುಮತಿ ನೀಡಿದ ಚಿತ್ರಗಳಿಗೆ ಮಾತ್ರ ನಿಗದಿತ ಅವಧಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತಿತ್ತು. ನಂತರ ರಿಮೇಕ್ ಮತ್ತು ಡಬ್ಬಿಂಗ್ ಹೊರತಾಗಿ ಕನ್ನಡ ಚಿತ್ರಗಳಿಗೆ 50% ತೆರಿಗೆ ವಿನಾಯಿತಿ ಘೋಷಿಸಲಾಯಿತು. ಆಯ್ದ ಚಿತ್ರಗಳಿಗೆ ಪೂರ್ಣ ತೆರಿಗೆ ವಿನಾಯಿತಿಯ ಅವಕಾಶವೂ ಇತ್ತು. ಮುಂದೆ ಎಲ್ಲ ಕನ್ನಡ ಚಿತ್ರಗಳಿಗೂ ಸಂಪೂರ್ಣ ಮನರಂಜನಾ ತೆರಿಗೆ ವಿನಾಯಿತಿ ನೀಡಲಾಯಿತು. ಹೇರಳವಾಗಿ ಬರುತ್ತಿದ್ದ ಪರಭಾಷಾ ಚಿತ್ರಗಳ ವಿರುದ್ಧ ಪೈಪೋಟಿಗೆ ಇದು ಸಹಕರಿಸುವುದರ ಜೊತೆಗೆ, ಕನ್ನಡ ಚಿತ್ರಗಳನ್ನು ಕಡಿಮೆ ಪ್ರವೇಶದರದಲ್ಲಿ ನೋಡುವ ಅವಕಾಶ ಪ್ರೇಕ್ಷಕನಿಗೆ ಸಿಗುತ್ತದೆ ಎನ್ನುವುದು ಆಶಯ ಆಗಿತ್ತು. ಆಗೆಲ್ಲ, ಪ್ರವೇಶದರ ಎರಡಂಕಿ ದಾಟಿದ್ದಿಲ್ಲ.

ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬರುತ್ತಲೇ ಎಲ್ಲ ಕಡೆ, ಏಕ ರೂಪದ ತೆರಿಗೆ ಜಾರಿಗೆ ಬಂತು. ಪ್ರವೇಶ ದರ ನೂರು ರೂಪಾಯಿಗಿಂತ ಕಡಿಮೆ ಇದ್ದರೆ, 18%, ಹೆಚ್ಚಿದ್ದರೆ 28% ರಾಜ್ಯ ಮತ್ತು ಕೇಂದ್ರದ್ದು ಸೇರಿದಂತೆ ತೆರಿಗೆ ನಿಗದಿಯಾಯಿತು. ತಲಾ 9% ಮತ್ತು 14% ರಾಜ್ಯ ಮತ್ತು ಕೇಂದ್ರಗಳ ಪಾಲು. ಮುಂದಿನ ದಿನಗಳಲ್ಲಿ ಅದು 12% ಮತ್ತು 18%ಗೆ ಇಳಿಯಿತು. ಅಂದರೆ ರಾಜ್ಯ ಸರ್ಕಾರದ ಪಾಲು ತಲಾ 6% ಮತ್ತು 9%. ಹೊಸ ಆದೇಶದಂತೆ ಈ ತೆರಿಗೆಯನ್ನು ಪ್ರದರ್ಶಕರು ಸಂಗ್ರಹಿಸುವಂತಿಲ್ಲ.

ಮಾತ್ರವಲ್ಲ, ರಾಜ್ಯಪತ್ರದಲ್ಲಿ, ʻಕರ್ನಾಟಕ ಸರ್ಕಾರದ ಆದೇಶದನ್ವಯ ರಾಜ್ಯ ಜಿಎಸ್‍ಟಿಯನ್ನು ಸಂಗ್ರಹಿಸಿರುವುದಿಲ್ಲʼಎಂಬ ಪದಗಳು ಎದ್ದು ಕಾಣುವಂತೆ ಇರತಕ್ಕದ್ದುʼ ಎನ್ನುವ ಸಾಲುಗಳಿವೆ. ಈ ದಿನಗಳಲ್ಲಿ ಎಲ್ಲವೂ ಆನ್‍ಲೈನ್ ಮುಂಗಡ ಬುಕಿಂಗ್‍ಗಳು. ಆದೇಶ ಹೊರಬಂದ ದಿನದಿಂದಲೇ, ಈ ಸಾಲುಗಳು ಟಿಕೆಟಿನಲ್ಲಿ ಇರುವುದಾದರೂ ಹೇಗೆ? ಬುಕ್ ಮೈ ಶೋ ಮೂಲಕ ದೇಶಾದ್ಯಂತ ಸಿನಿಮಾ ಟಿಕೆಟುಗಳ ಮುಂಗಡ ಕಾದಿರಿಸುವಿಕೆ ನಡೆಯುತ್ತದೆ. ಅಲ್ಲಿನ ಕೇಂದ್ರಕ್ಕೆ ತಿಳಿಸಿ, ಟಿಕೆಟಿನಲ್ಲಿ ಬದಲಾವಣೆ ಮಾಡಬೇಕು. ರಾತ್ರಿ ಬೆಳಗಾಗುವುದರ ಒಳಗೆ ಸಾಧ್ಯವೇ ಎನ್ನುವ ಪ್ರಶ್ನೆ ಪ್ರದರ್ಶಕರದು.

ಅಷ್ಟೇ ಅಲ್ಲ, ಪ್ರೇಕ್ಷಕರಿಂದ ಸಂಗ್ರಹಿಸದೆ ಇದ್ದರೂ, ಪ್ರದರ್ಶಕರು ತಮ್ಮ ಸಂಪನ್ಮೂಲದಿಂದ ಈ ತೆರಿಗೆಯನ್ನು ಪಾವತಿಸಿ, ನಂತರ ಹಿಂಪಾವತಿಗೆ ಅರ್ಜಿ ಸಲ್ಲಿಸಿ, ಅದನ್ನು ಪಡೆದುಕೊಳ್ಳಬೇಕು. ಈ ಮೊತ್ತವನ್ನು ಸರ್ಕಾರ, ಚಲನಚಿತ್ರ ನಿರ್ಮಾಣ 106 (ಸಹಾಯಧನ) ಲೆಕ್ಕಶೀರ್ಷಿಕೆಯಿಂದ ಪಡೆಯಬೇಕು. ಈಗಾಗಲೇ ʻದ ಕಾಶ್ಮೀರ್ ಫೈಲ್ಸ್ʼ ಚಿತ್ರಕ್ಕೆ ಸರ್ಕಾರ ಇದೇ ರೀತಿ ತೆರಿಗೆ ವಿನಾಯಿತಿ ನೀಡಿ ಪ್ರದರ್ಶಕರು ತಮ್ಮ ಸಂಪನ್ಮೂಲದಿಂದ ತುಂಬಿ ಮತ್ತೆ ಹಿಂಪಡೆಯುವಂತೆ ಹೇಳಿತ್ತು. ಆದರೆ ಈ ತನಕ ಆ ಮೊತ್ತ ಬಂದಿಲ್ಲ ಎನ್ನುತ್ತಾರೆ ಹಿರಿಯ ಪ್ರದರ್ಶಕರೊಬ್ಬರು.

ಹಿಂದೆ 40-70% ಮನರಂಜನಾ ತೆರಿಗೆ ಇದ್ದ ದಿನಗಳಲ್ಲಿ ತೆರಿಗೆ ವಿನಾಯಿತಿಯಿಂದ ಪ್ರೇಕ್ಷಕರಿಗೆ ಅನುಕೂಲ ಆಗುತ್ತಿತ್ತು. ಆದರೆ ಈಗ ಪ್ರವೇಶ ದರ ದುಬಾರಿ. ಜಿಎಸ್‍ಟಿಯಲ್ಲಿ ರಾಜ್ಯದ ಪಾಲು 6% ಇಲ್ಲವೇ 9%. ಪ್ರೇಕ್ಷಕ ಇದನ್ನು ಬಯಸುತ್ತಾನೆಯೇ ಎಂದು ಪ್ರಶ್ನಿಸುವವರೂ ಇದ್ದಾರೆ. ಪ್ರದರ್ಶಕರ ಪಾಲಿಗಂತೂ ಇದು ನುಂಗಲಾರದ ಬಿಸಿತುಪ್ಪ.

ʻ777 ಚಾರ್ಲಿʼ ಕನ್ನಡ ಚಿತ್ರಕ್ಕೆ ಈ ತೆರಿಗೆ ವಿನಾಯಿತಿಯ ಸೌಲಭ್ಯವನ್ನು ನೀಡಲಾಗಿದೆ. ಈ ಚಿತ್ರದ ಬೇರೆ ಭಾಷೆಯ ಆವೃತ್ತಿಗಳು ಕೂಡಾ ಕರ್ನಾಟಕದಲ್ಲಿ ತೆರೆಕಂಡಿವೆ. ಈ ರಿಯಾಯಿತಿ ಅವುಗಳಿಗೂ ಅನ್ವಯ ಆಗುತ್ತದೆಯೇ? ಡಬ್ಬಿಂಗ್ ಚಿತ್ರಗಳಿಗೆ ಇಂತಹ ಸೌಲಭ್ಯ ನೀಡುತ್ತಾರೆಯೇ? ಈ ಪ್ರಶ್ನೆ ಈಗ ಹಲವರದು.

ಹಿಂದೆ, ಕನ್ನಡ ಚಿತ್ರಗಳಿಗೆ ಸಂಪೂರ್ಣ ಮನರಂಜನಾ ತೆರಿಗೆ ವಿನಾಯಿತಿಯ ದಿನಗಳಲ್ಲಿ ಪ್ರದರ್ಶಕರಲ್ಲಿ ಕೆಲವರು, ಪರಭಾಷೆ ಚಿತ್ರಗಳನ್ನು ಪ್ರದರ್ಶಿಸಿ, ಕನ್ನಡ ಚಿತ್ರಗಳನ್ನು ಪ್ರದರ್ಶಿಸಿದ್ದಾಗಿ ದಾಖಲೆ ನೀಡಿದಂತೆ ಇಲ್ಲೂ ಮಾಡಬಹುದು ಎನ್ನುವ ಅನುಮಾನ ವ್ಯಕ್ತಪಡಿಸುವವರೂ ಇದ್ದಾರೆ.

ಕನ್ನಡ ಚಿತ್ರರಂಗ ಇದೀಗ ತಾನು ಉಳಿದ ಉದ್ಯಮಗಳಿಗಿಂತ ಕಡಿಮೆ ಏನಲ್ಲ ಎಂದು ಹೇಳುವಂತಹ ಚಿತ್ರಗಳನ್ನು ತಯಾರಿಸತೊಡಗಿದೆ. ಅದ್ದೂರಿ ವೆಚ್ಚದ ಚಿತ್ರಗಳ ಜೊತೆಜೊತೆಯಲ್ಲೇ ಕಡಿಮೆ ವೆಚ್ಚದ ಸದಭಿರುಚಿಯ ಚಿತ್ರಗಳೂ ತಯಾರಾಗುತ್ತಿವೆ. ಇವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಲು ಆಗದು. ಉತ್ತಮ ಗುಣಮಟ್ಟದ ಸದಭಿರುಚಿಯ, ಸಮಾಜಮುಖಿ ಚಿತ್ರಗಳಿಗೆ ಸರ್ಕಾರದ ನೆರವು ಬೇಕೇಬೇಕು. ಈ ಹಿಂದೆ ಇದ್ದಂತೆ ಎಲ್ಲ ಕನ್ನಡ ಚಿತ್ರಗಳಿಗೂ ತೆರಿಗೆ ವಿನಾಯಿತಿ ನೀಡಬೇಕು ಎನ್ನುವವರಿದ್ದಾರೆ. ಇನ್ನೊಂದು ವರ್ಗ ತಮ್ಮಿಂದ ಸಂಗ್ರಹಿಸಿದ ರಾಜ್ಯ ಸರಕು ಮತ್ತು ಸೇವಾ ತೆರಿಗೆ ವಾಪಾಸಾದಾಗ ಅದನ್ನು ತಮಗೆ ಹಿಂದಿರುಗಿಸಬೇಕು ಎನ್ನುವ ಬೇಡಿಕೆ ಇಟ್ಟಿದೆ. ಸರ್ಕಾರದ ಸಹಾಯಹಸ್ತದ ನಿರೀಕ್ಷೆಯಲ್ಲಿ ಚಿತ್ರರಂಗ ಇದೆ.

Tags: