Mysore
20
overcast clouds
Light
Dark

ರಸ್ತೆ ಸಾರಿಗೆ ಸುರಕ್ಷತೆ ಒಂದು ಸಾಮಾಜಿಕ ಜವಾಬ್ದಾರಿ

  • ಪ್ರೊ.ಆರ್.ಎಂ.ಚಿಂತಾಮಣಿ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೈವೇಸ್ ಮಂತ್ರಾಲಯವು ಕಳೆದ ವಾರ ‘ಭಾರತದಲ್ಲಿ ರಸ್ತೆ ಅಪಘಾತಗಳು 2022’ ವರದಿ ಪ್ರಕಟಿಸಿದೆ. ಭಾರತ ಜಗತ್ತಿನಲ್ಲಿಯೇ ಅಮೆರಿಕ ನಂತರ ಅತಿ ಹೆಚ್ಚು ರಸ್ತೆ ಜಾಲ ಹೊಂದಿರುವ ಎರಡನೇ ದೊಡ್ಡ ದೇಶವಾಗಿದೆ. ಸ್ವಾಭಾವಿಕವಾಗಿಯೇ ಸರಕು ಸಾಗಾಣಿಕೆ ಮತ್ತು ಜನರ ಸಂಚಾರ ರಸ್ತೆ ಮೂಲಕವೇ ಅತಿ ಹೆಚ್ಚು ನಡೆಯುತ್ತಿದೆ. ಶೇ.90ಕ್ಕಿಂತ ಹೆಚ್ಚು ಎಂದರೂ ಸರಿಯೇ (ರೈಲ್ವೆ ಸಾರಿಗೆಯೂ ಸೇರಿದಂತೆ). ವಿಮಾನಯಾನ ಸೌಲಭ್ಯ ತೀರ ಕಡಿಮೆ ಮತ್ತು ಬಹಳ ತುಟ್ಟಿ. ಜಲಸಾರಿಗೆ ಕರಾವಳಿಯಲ್ಲಿ ಮತ್ತು ದೊಡ್ಡ ನದಿಗಳಿದ್ದಲ್ಲಿ ಅಲ್ಪಸ್ವಲ್ಪ ಇದೆ. ಆದ್ದರಿಂದ ಸಾಮಾನ್ಯವಾಗಿ ಜನ ಭೂ ಸಾರಿಗೆಯನ್ನೇ (ರಸ್ತೆ ಮತ್ತು ರೈಲು) ಅವಲಂಬಿಸುವುದು ಹೆಚ್ಚು. ಇದು ಅನಿವಾರ್ಯವೂ ಕೂಡ. ಇಷ್ಟು ಮಹತ್ವದ ಸೇವೆ ಒದಗಿಸುವ ಇವೆರಡೂ ಸುರಕ್ಷಿತವಾಗಿರಬೇಕಲ್ಲವೆ?

ವರದಿಯ ಒಳಹೊಕ್ಕು ನೋಡಿದಾಗ ಆಘಾತಕಾರಿ ಮಾಹಿತಿಗಳು ತೆರೆದುಕೊಳ್ಳುತ್ತವೆ. ಸರ್ಕಾರವೇನೊ ‘ರಸ್ತೆ ಸುರಕ್ಷತೆ’ಯನ್ನು ಮುಖ್ಯ ಗುರಿಯಾಗಿಟ್ಟುಕೊಂಡು ಹೈವೇ ಮತ್ತು ಇತರ ರಸ್ತೆಗಳ ಜಾಲ ವಿಸ್ತರಣೆಯನ್ನು ವಿವರಿಸುತ್ತ ಸಾಧನೆಗಳನ್ನು, ತಪ್ಪುಒಪ್ಪುಗಳನ್ನು ಮತ್ತು ಸವಾಲುಗಳನ್ನು ವಿವರಿಸುತ್ತ ಹೋಗಿದೆ. ಆದರೆ ಅಪಘಾತಗಳ ಸಂಖ್ಯೆ ಮತ್ತು ಪರಿಣಾಮಗಳಲ್ಲಿ ಹೆಚ್ಚುತ್ತಿರುವುದು ಕಣ್ಣಿಗೆ ರಾಚುತ್ತದೆ. ಇದಕ್ಕೆ ಕಾರಣಗಳನ್ನೂ ಪಟ್ಟಿ ಮಾಡಲಾಗಿದೆ.

2022ರಲ್ಲಿ ದೇಶದಲ್ಲಿ ಒಟ್ಟು4,61,312ರಸ್ತೆ ಅಪಘಾತಗಳಾಗಿದ್ದು, 1,68,491 ಜನರು ಜೀವ ಕಳೆದುಕೊಂಡಿದ್ದಾರೆ. ಗಾಯಗೊಂಡವರ ಸಂಖ್ಯೆಯನ್ನು ಬೇರೆ ಹೇಳಬೇಕಿಲ್ಲ. ಊಹಿಸಬಹುದು. ಕಳೆದ ವರ್ಷಕ್ಕೆ (2021) ಹೋಲಿಸಿದರೆ ಶೇ.11.9 ಮತ್ತು ಜೀವಹಾನಿ ಶೇ.9.4 ಹೆಚ್ಚಾಗಿರುವುದು ಕಂಡುಬರುತ್ತದೆ. ಇತ್ತೀಚಿನ ದಶಕಗಳಲ್ಲೇ ಇದು ಹೆಚ್ಚು. ಗಂಟೆಗಳ ಆಧಾರದಲ್ಲಿ ಲೆಕ್ಕ ಹಾಕಿದರೆ 2022ರಲ್ಲಿ ಸರಾಸರಿ ಪ್ರತಿ ಗಂಟೆಗೆ 53 ರಸ್ತೆ ಅವಘಡಗಳಾಗಿದ್ದು, 19 ಜನರು ಸತ್ತಿದ್ದಾರೆ. ಇದರಿಂದ ಜನರನ್ನು (ಅಮೂಲ್ಯ ಜೀವಗಳನ್ನು) ಕಳೆದುಕೊಂಡಿದ್ದಷ್ಟೇ ಅಲ್ಲ ಆರ್ಥಿಕವಾಗಿ ಮಾನವ ಸಂಪನ್ಮೂಲವೂ ನಷ್ಟ.

ಇನ್ನೊಂದು ಮಾನದಂಡದಂತೆ ಸತ್ತವರಲ್ಲಿ 18 ರಿಂದ 60 ವರ್ಷ ವಯಸ್ಸಿನವರ ಪ್ರಮಾಣ ಶೇ83.4 ಉಳಿದವರು ಮಕ್ಕಳು ಮತ್ತು ಹಿರಿಯ ಜೀವಗಳು. ಈ ಮಕ್ಕಳು ಮುಂದೆ ಏನಾಗಬಹುದಿತ್ತೊ. ಹಿರಿಯರ ಅನುಭವ ಅಲ್ಲಿಗೆ ಸತ್ತಿತು. ಇಷ್ಟೇ ಅಲ್ಲ ವರದಿಯ ಪ್ರಕಾರ ದುಡಿಯುವ ವಯಸ್ಸಿನಲ್ಲಿ ಏರು ಮುಖವಿರುವಾಗಲೇ (45 ವರ್ಷ ವಯಸ್ಸಿನ ಒಳಗಿನವರು) ಸತ್ತವರ ಪ್ರಮಾಣ ಶೇ.66.5

ವರದಿಯ ವಿವರಗಳ ಪ್ರಕಾರ ರಸ್ತೆಯಲ್ಲಿ ಮುಂದಿನ ವಾಹನಕ್ಕೆ ಹಿಂದಿನಿಂದ ಇನ್ನೊಂದು ವಾಹನ ವೇಗವಾಗಿ ಬಂದು ಗುದ್ದುವುದು ಮತ್ತು ಎರಡು ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆಯುವುದು ಈ ಎರಡು ರೀತಿಯ ಅಪಘಾತಗಳೇ ಹೆಚ್ಚು. ಉಳಿದಂತೆ ನಿಂತ ವಾಹನಕ್ಕೆ ಇನ್ನೊಂದು ವಾಹನ ಗುದ್ದುವುದು, ಸಣ್ಣ ವಾಹನಗಳೊಡನೆ ದೊಡ್ಡ ವಾಹನಗಳ ಡಿಕ್ಕಿ, ಪಾದಚಾರಿಯ ಮೇಲೆ ವಾಹನ ಹರಿಯುವುದು, ರಸ್ತೆ ಬದಿಯ ಕಲ್ಲು ಅಥವಾ ಮರಕ್ಕೆ ಗುದ್ದುವುದು, ಆಯತಪ್ಪಿ ಹಳ್ಳಕ್ಕೆ ಬೀಳುವುದು, ರಾತ್ರಿ ವೇಳೆ ಎದುರಿನ ವಾಹನದ ಪ್ರಖರವಾದ ಲೈಟಿನಿಂದುಂಟಾದ ಅಪಘಾತ ಹೀಗೆ ಹಲವು ರೀತಿಯ ಅಪಘಾತಗಳು ಉಂಟಾಗುತ್ತವೆ. ಆಕಸ್ಮಿಕವಾಗಿ ಅಪಘಾತಗಳಾಗಿ ಸಣ್ಣಪುಟ್ಟ ಗಾಯಗಳೋ, ಸಣ್ಣ ಪ್ರಮಾಣದ ನಷ್ಟಗಳೋ ಉಂಟಾಗುವುದು ಬೇರೆ. ಎಲ್ಲ ನಿಯಮ ಪಾಲನೆಯಾಗಿಯೂ ಕೈಮೀರಿ ಉಂಟಾಗುವ ಅಪಘಾತಗಳನ್ನು ತಡೆಯಬಹುದು. ಪರಿಹಾರ ಉಂಟು. ಆದರೆ ಅಜಾಗರೂಕತೆಯಿಂದ ದೊಡ್ಡ ಸಂಖ್ಯೆಯಲ್ಲಿ ಜೀವ ಹಾನಿ ಆಗುತ್ತಿರುವುದು ಆತಂಕಕಾರಿ. ಇಂತಹವುಗಳನ್ನು ತಪ್ಪಿಸಲೇಬೇಕು. ತಪ್ಪೆಸಗಿದವರಿಗೆ ವಿಳಂಬ ಮಾಡದೆ ಕಠಿಣ ಶಿಕ್ಷೆಯಾಗಬೇಕು.

ಕಾರಣಗಳನ್ನು ಹುಡುಕುತ್ತಾ ಹೋದರೆ ಹೈವೇಗಳಲ್ಲಿ ಸೂಚನೆ ಕೊಡದೆ ಟ್ರ್ಯಾಕ್ ಬದಲಿಸುವುದು, ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದು, ಅತಿ ವೇಗದಲ್ಲಿ ವಾಹನ ಚಲಾವಣೆ, ಮಾದಕ ವಸ್ತುಗಳನ್ನು ಸೇವಿಸಿ ವಾಹನ ಚಲಾಯಿಸುವುದು, ಓವರ್ ಲೋಡ್ ವಾಹನ (ದ್ವಿಚಕ್ರ ವಾಹನದಲ್ಲಿ 3-4 ಜನ ಸಂಚರಿಸುವುದು, ಸಾಮರ್ಥ್ಯಕ್ಕಿಂತ ಹೆಚ್ಚು ಸರಕು ಅಥವಾ ಜನರನ್ನು ತುಂಬಿಕೊಳ್ಳುವುದು), ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳದೆ ಇರುವುದು (ಹೆಲ್ಮೆಟ್ ಧರಿಸದಿರುವುದು, ಸೀಟ್‌ಬೆಲ್ಟ್ ಹಾಕದಿರುವುದು ಮುಂ.), ರಸ್ತೆ ನಿಯಮ ಪಾಲಿಸದಿರುವುದು ಮತ್ತು ಪಾದಚಾರಿಗಳು ಎಲ್ಲೆಂದರಲ್ಲಿ ಯಾವಾಗ ಬೇಕಾದಾಗ ರಸ್ತೆ ದಾಟುವುದು ಮುಂತಾದವುಗಳನ್ನು ಪ್ರಮುಖವಾಗಿ ಹೇಳಬಹುದು. ಇವುಗಳೊಡನೆ ರಸ್ತೆಗಳಲ್ಲಿಯ ದೋಷಗಳು ಮತ್ತು ಹವಾಮಾನದಲ್ಲಿನ ಬದಲಾವಣೆಗಳೂ ಕಾರಣವಾಗುತ್ತವೆ. ಇವೆಲ್ಲದಕ್ಕೂ ಪರಿಹಾರ ಸರ್ಕಾರವೂ ಸೇರಿದಂತೆ ಸಂಬಂಧಪಟ್ಟ ಎಲ್ಲರ ಜವಾಬ್ದಾರಿಯುತ ನಡವಳಿಕೆಯಲ್ಲಿದೆ. ಇದು ಎಲ್ಲರ ಸಾಮಾಜಿಕ ಹೊಣೆ

ಸರ್ಕಾರ ಮೂಲ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿಯನ್ನು ನಿರ್ವಹಿಸಲು ರಸ್ತೆಗಳನ್ನು ನಿರ್ಮಿಸುತ್ತದೆ ಮತ್ತು ನಿರ್ವಹಿಸುತ್ತದೆ. ನಾವು ಸಾರ್ವಜನಿಕರು (ಎಲ್ಲರೂ ನಮ್ಮ ಅನುಕೂಲಕ್ಕೆ ತಕ್ಕಂತೆ) ರಸ್ತೆಗಳನ್ನು ಉಪಯೋಗಿಸುತ್ತೇವೆ. ಕಾಯ್ದೆ ಸುವ್ಯವಸ್ಥೆ ಕಾಪಾಡಲು ಸರ್ಕಾರ ರಸ್ತೆ ನಿಯಮಗಳನ್ನೊಳಗೊಂಡ ಕಾನೂನುಗಳನ್ನು ಮಾಡಿದೆ. ನಮ್ಮಲ್ಲಿ ಇತರೆ ದೇಶಗಳಿಗಿಂತ ಉತ್ತಮವಾದ ಕಠಿಣವಾದ ಕಾನೂನುಗಳಿವೆ. ಅವುಗಳ ಕಟ್ಟು ನಿಟ್ಟಾದ ಜಾರಿ (ಅನುಷ್ಠಾನ) ಮತ್ತು ಪಾಲನೆ ಅತ್ಯವಶ್ಯ. ನಾವು ಎಡವಿದ್ದೇ ಇಲ್ಲಿ.

ಮೊದಲು ಪಾದಚಾರಿಗಳನ್ನೇ ಗಮನಿಸೋಣ. ನಾವು ರಸ್ತೆ ನಮ್ಮದಾದ್ದರಿಂದ ಎಲ್ಲಿ ಬೇಕಲ್ಲಿ ಹೇಗೆ ಬೇಕೋ ಹಾಗೆ ರಸ್ತೆ ತುಂಬಾ ನಡೆಯುತ್ತೇವೆ. ಪಾದಚಾರಿಗಳ ರಸ್ತೆ (ಫುಟ್‌ಪಾತ್) ಮೇಲೆ ನಡೆಯುವವರು ಕಡಿಮೆ. ಆ ಫುಟ್‌ಪಾತ್‌ಅನ್ನು ಅಲ್ಲಿಯ ಅಂಗಡಿಯವರು ಆಕ್ರಮಿಸಿಕೊಂಡಿರುತ್ತಾರೆ. ಅದು ಒಂದು ನೆಪ ಮಾತ್ರ. ಜನ ಮತ್ತು ವಾಹನ ದಟ್ಟಣೆ ಇರುವ ವೃತ್ತಗಳಲ್ಲಿ ಸಿಗ್ನಲ್ ಲೈಟ್ ಅಳವಡಿಸಿರುತ್ತಾರೆ. ಅಲ್ಲಿ ಪೊಲೀಸ್ ಬೇಕಿಲ್ಲ. ಆದರೆ ಪಾದಚಾರಿಗಳ ನಡವಳಿಕೆ ಹೇಗೆ ಇರುತ್ತದೆ ಅಂದರೆ ಪೊಲೀಸ್ ಇದ್ದರೂ ಪಾದಚಾರಿಗಳು ಮನಬಂದಂತೆ ರಸ್ತೆ ದಾಟುತ್ತಾರೆ.

ಮೈಸೂರಿನ ಕೇಂದ್ರ ಬಿಂದು ಕೆ.ಆರ್.ಸರ್ಕಲ್‌ನಲ್ಲಿ ಗಮನಿಸಬೇಕು. ತಮಗೆ ಕೆಂಪು ಲೈಟ್ ಇರುವಾಗಲೇ ರಸ್ತೆಗೆ ನಗ್ಗುತ್ತಾರೆ. ಪೊಲೀಸರಿದ್ದರೂ ಲೆಕ್ಕಕ್ಕಿಲ್ಲ. ಇದೆಲ್ಲ ತಪ್ಪಬೇಕು. ಮೊದಲು ಪಾದಚಾರಿಗಳು ನಿಯಮಗಳನ್ನು ಪಾಲಿಸಬೇಕು. ಏಕೆಂದರೆ ವಾಹನ ಚಾಲಕರೂ ಮೂಲತಃ ಪಾದಚಾರಿಗಳೇ. ರಸ್ತೆ ಕಾಯ್ದೆ ಪಾಲನೆ ಎಲ್ಲರ ಸಾಮಾಜಿಕ ಕರ್ತವ್ಯ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ರಸ್ತೆ ನಿರ್ಮಾಣ ಮಾಡಿದರಷ್ಟೇ ಸಾಲದು. ಅವುಗಳನ್ನು ಸುಸ್ಥಿತಿಯಲ್ಲಿಡಬೇಕು. ಹೈವೇಗಳಲ್ಲಿ ಸಾಕಷ್ಟು ಟೋಲ್ ವಸೂಲಾಗುತ್ತಿದೆ. ವೈಜ್ಞಾನಿಕವಾಗಿ ಸುಸ್ಥಿರ ರಸ್ತೆ ನಿರ್ಮಿಸಬೇಕು. ತಳದಲ್ಲಿಯ ಮೃದುತ್ವದಿಂದ ರಸ್ತೆ ಕುಸಿಯುವುದು ಮತ್ತು ಹಳ್ಳ ಬೀಳುವುದು ಆಗಬಾರದು. ನಿರಂತರ ನಿಗಾ ಇರಬೇಕು. ಅವಶ್ಯವಿರುವಾಗ ಎಲ್ಲ ಕಡೆ (ತಿರುವು ಮುಂತಾದೆಡೆ) ಎಚ್ಚರಿಕೆಯ ಸಂಕೇತಗಳು ಜನರಿಗೆ ತಿಳಿಯುವ ಭಾಷೆಯಲ್ಲಿ ದೂರದಿಂದಲೇ ಕಾಣುವಂತೆ ಯಾವಾಗಲೂ ಇರಬೇಕು. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಮತ್ತು ವೇಗ ಸೆನ್ಸಾರ್‌ಗಳನ್ನು ಅಳವಡಿಸಿರಬೇಕು.

ನಗರಗಳಲ್ಲಿ ಒಂದು ಕಡೆಯಿಂದ ರಿಪೇರಿ ಮಾಡಲಾಗುತ್ತಿದ್ದರೆ ಇನ್ನೊಂದು ಕಡೆಯಿಂದ ಬೇರೆ ಕಾರಣಕ್ಕೆ ಅಗೆಯುತ್ತ ಬರುತ್ತಿರುತ್ತಾರೆ. ನೀರು ಮತ್ತು ಒಳಚರಂಡಿ ಪೈಪುಗಳು ಗುಣಮಟ್ಟದಿಂದಿರಬೇಕು. ಇಷ್ಟೆಲ್ಲ ಮಾಡಿದರೆ ಎಷ್ಟೋ ಅಪಘಾತಗಳು ತಪ್ಪುತ್ತವೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ