ಜನವರಿ 19ರಂದು ಆರಂಭವಾಗಿದ್ದ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಗೆ ತೆರೆಬಿದ್ದಿದ್ದು, ಇಂದು ( ಫೆಬ್ರವರಿ 11 ) ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭಾರತ ತಂಡವನ್ನು 79 ರನ್‌ಗಳಿಂದ ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿದೆ.
ದಕ್ಷಿಣ ಆಫ್ರಿಕಾದ ಬೆನೊನಿಯ ವಿಲ್ಲೋಮೋರ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿ ಭಾರತಕ್ಕೆ ಗೆಲ್ಲಲು 254 ರನ್‌ಗಳ ಸವಾಲಿನ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಟೀಮ್ ಇಂಡಿಯಾ 43.5 ಓವರ್‌ಗಳಲ್ಲಿ 174 ರನ್‌ಗಳಿಗೆ ಆಲ್‌ಔಟ್ ಆಗಿದೆ.
ಭಾರತದ ಪರ ಆರಂಭಿಕ ಆಟಗಾರ ಆದರ್ಶ್ ಸಿಂಗ್ ಹಾಗೂ ಮುರುಗನ್ ಅಭಿಷೇಕ್ ಹೊರತುಪಡಿಸಿ ಉಳಿದ ಯಾವ ಬ್ಯಾಟ್ಸ್‌ಮನ್ ಸಹ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಕಳೆದ ಪಂದ್ಯಗಳಲ್ಲಿ ಉತ್ತಮ ಆಟವನ್ನಾಡಿದ್ದ ನಾಯಕ ಉದಯ್ ಸಹರಣ್ ಹಾಗೂ ಸಚಿನ್ ದಾಸ್ ಈ ಪಂದ್ಯದಲ್ಲಿ ಎರಡಂಕಿ ಮುಟ್ಟುವಲ್ಲಿಯೂ ಯಶಸ್ವಿಯಾಗಲಿಲ್ಲ.
ಆದರ್ಶ್ ಸಿಂಗ್ 47, ಅರ್ಶಿನ್ ಕುಲ್ಕರ್ಣಿ 3, ಮುಶೀರ್ ಖಾನ್ 22, ಉದಯ್ ಸಹರಣ್ 8, ಸಚಿನ್ ದಾಸ್ 9, ಪ್ರಿಯಂಶು ಮೊಲಿಯಾ 9, ಅವಿನಾಶ್ ಅರವೆಳ್ಳಿ ಡಕ್‌ಔಟ್, ಮುರುಗನ್ ಅಭಿಷೇಕ್ 42, ರಾಜ್ ಲಿಂಬಾನಿ ಡಕ್‌ಔಟ್, ನಮನ್ ತಿವಾರಿ ಅಜೇಯ 14 ರನ್ ಹಾಗೂ ಸೌಮಿ ಪಾಂಡೆ 2 ರನ್ ಗಳಿಸಿದರು.
ಆಸ್ಟ್ರೇಲಿಯಾ ಪರ ಮಲಿ ಬಿಯರ್ಡ್‌ಮನ್ ಹಾಗೂ ರಾಫ್ ಮೆಕ್‌ಮಿಲನ್ ತಲಾ 3 ವಿಕೆಟ್ ಪಡೆದರೆ, ಕ್ಯಾಲಂ ವಿಡ್ಲೆರ್ 2 ವಿಕೆಟ್, ಚಾರ್ಲಿ ಆಂಡರ್‌ಸನ್ ಹಾಗೂ ಟಾಮ್ ಸ್ಟಾರ್ಕರ್ ತಲಾ ಒಂದೊಂದು ವಿಕೆಟ್ ಪಡೆದರು.





