ಹೈದರಾಬಾದ್ : ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆಗಳಲ್ಲಿ ತಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ವೈಎಸ್‌ಆರ್ ತೆಲಂಗಾಣ ಪಾರ್ಟಿ ಅಧ್ಯಕ್ಷೆ ವೈ ಎಸ್ ಶರ್ಮಿಳಾ ಇಂದು ಘೋಷಿಸಿದ್ದಾರೆ. ರಾಜ್ಯದ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಸರಕಾರವನ್ನು ಸೋಲಿಸಲು ಈ ನಿರ್ಧಾರ ಕೈಗೊಂಡು ಕಾಂಗ್ರೆಸ್ ಪಕ್ಷಕ್ಕೆ ಬೇಷರತ್ ಬೆಂಬಲ ಘೋಷಿಸುತ್ತಿರುವುದಾಗಿಯೂ ಅವರು ತಿಳಿಸಿದ್ದಾರೆ.
ಆಂಧ್ರ ಪ್ರದೇಶದ ಮಾಜಿ ಸಿಎಂ ಆಗಿದ್ದ ದಿವಂಗತ ವೈ ಎಸ್ ರಾಜಶೇಖರ ರೆಡ್ಡಿ ಅವರ ಪುತ್ರಿಯಾಗಿರುವ ಶರ್ಮಿಳಾ, ತಮಗೆ ಆಡಳಿತ ಭಾರತ್ ರಾಷ್ಟ್ರ ಸಮಿತಿಯ ವಿರುದ್ಧದ ಮತ ಹಂಚಿ ಹೋಗುವುದು ಬೇಕಿಲ್ಲ ಎಂದಿದ್ದಾರೆ.
ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್‌ಮೋಹನ್ ರೆಡ್ಡಿ ಅವರ ಸೋದರಿಯೂ ಆಗಿರುವ ಶರ್ಮಿಳಾ ತೆಲಂಗಾಣದಲ್ಲಿ ಕೆಸಿಆರ್ ವಿರೋಧಿ ಅಲೆ ಇದೆ ಎಂದು ಹೇಳಿದರು.
ತೆಲಂಗಾಣ ಜನರ ಹಿತದೃಷ್ಟಿಯಿಂದ ತಾವು ಚುನಾವಣೆಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ ಶರ್ಮಿಳಾ “ನಾನು ತಪ್ಪು ನಿರ್ಧಾರ ಕೈಗೊಂಡಿದ್ದೇನೆ ಎಂದು ನಿಮಗನಿಸಿದ್ದರೆ ವೈಎಸ್‌ಆರ್‌ಟಿಪಿ ನಾಯಕಿಯಾಗಿ ಹಾಗೂ ವೈಎಸ್‌ಆರ್ ಮಗಳಾಗಿ ನಿಮ್ಮಿಂದ ಕ್ಷಮೆಯಾಚಿಸುತ್ತೇನೆ,” ಎಂದು ಅವರು ಹೇಳಿದರು.
ಕಾಂಗ್ರೆಸ್ ಜೊತೆಗೆ ವಿಲೀನಗೊಳ್ಳುವ ನಿಟ್ಟಿನಲ್ಲಿ ಮಾತುಕತೆ ಫಲಪ್ರದವಾಗದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಶರ್ಮಿಳಾ ಹೇಳಿಕೆ ನೀಡಿ ತಮ್ಮ ಪಕ್ಷ ವಿಧಾನಸಭಾ ಚುನಾವಣೆ ಸ್ಪರ್ಧಿಸಲಿದೆ ಎಂದು ತಿಳಿಸಿದ್ದರು.