ನವದೆಹಲಿ : ದೆಹಲಿ ವಿಮಾನ ನಿಲ್ದಾಣದಲ್ಲಿ ಬುಧವಾರ ಮಧ್ಯಾಹ್ನ ವಿಸ್ತಾರ ಕಂಪೆನಿಯ ಎರಡು ವಿಮಾನಗಳು ಒಂದೇ ರನ್ ವೇಯಲ್ಲಿ ಇಳಿದಿದ್ದು ಅಹಮದಾಬಾದ್-ದಿಲ್ಲಿ ವಿಮಾನದ ಪೈಲಟ್ ಕ್ಯಾಪ್ಟನ್ ಸೋನು ಗಿಲ್ ಅವರ ಸಮಯಪ್ರಜ್ಞೆಯಿಂದ ದುರಂತವೊಂದು ತಪ್ಪಿದೆ.
ಈ ಎರಡು ವಿಮಾನಗಳು ಒಟ್ಟು 300 ಜನರನ್ನು ಹೊತ್ತು ಸಾಗುತ್ತಿದ್ದು, ಮಹಿಳಾ ಪೈಲಟ್ ಸಮಯೋಚಿತ ಕಾರ್ಯಕ್ಕೆ ಎಲ್ಲರೂ ಧನ್ಯವಾದ ಹೇಳಿದ್ದಾರೆ.
ಅಹಮದಾಬಾದ್-ದಿಲ್ಲಿ ವಿಮಾನವು ಈಗಷ್ಟೇ ಇಳಿದಿತ್ತು ಹಾಗೂ ಪಾರ್ಕಿಂಗ್ ವೇ ತಲುಪಲು ಸಕ್ರಿಯ ರನ್ ವೇ ದಾಟಲು ಏರ್ ಟ್ರಾಫಿಕ್ ಕಂಟ್ರೋಲ್ ನಿಂದ ಸೂಚನೆ ನೀಡಲಾಗಿತ್ತು. ಈ ಮಧ್ಯೆ, ವಿಸ್ತಾರಾ ಏರ್ಲೈನ್ಸ್ ನ ದಿಲ್ಲಿ-ಬಾಗ್ಡೋಗ್ರಾ ವಿಮಾನವನ್ನು ಅದೇ ರನ್ವೇಯಲ್ಲಿ ಟೇಕ್-ಆಫ್ ಮಾಡಲು ಅನುಮತಿ ನೀಡಲಾಯಿತು. ಅಹಮದಾಬಾದ್- ದಿಲ್ಲಿ ವಿಮಾನದ 45 ವರ್ಷದ ಕ್ಯಾಪ್ಟನ್ ಸೋನು ಗಿಲ್ ಅವರ ಸಮಯ ಪ್ರಜ್ಞೆಯಿಂದ ದುರಂತ ತಪ್ಪಿತು.
ವಿಮಾನಗಳು 1.8 ಕಿಮೀ ಅಥವಾ 1,800 ಮೀಟರ್ ದೂರದಲ್ಲಿದ್ದವು ಎಂದು ಮೂಲಗಳು ತಿಳಿಸಿವೆ, ಪೈಲಟ್ ಎಟಿಸಿಗೆ ಇತರ ವಿಮಾನದ ಇರುವ ಬಗ್ಗೆ ಎಚ್ಚರಿಕೆ ನೀಡದೇ ಇರುತ್ತಿದ್ದರೆ, ಫಲಿತಾಂಶವು ವಿನಾಶಕಾರಿಯಾಗಬಹುದಿತ್ತು ಎಂದು ತಿಳಿದುಬಂದಿದೆ.





