ನವದೆಹಲಿ : ಫ್ಲೈಯಿಂಗ್ ಕಿಸ್ ಕುರಿತಂತೆ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ಗುರುವಾರ ಕೇಂದ್ರ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಶನ್ ನ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೆಸರನ್ನು ಉಲ್ಲೇಖಿಸದೆ ಮೊಯಿತ್ರಾ, ನಮ್ಮ ಕುಸ್ತಿಪಟುಗಳು ಬಿಜೆಪಿ ಸಂಸದನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದಾಗ, ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಒಂದು ಪದವನ್ನೂ ಆಡಿರುವುದನ್ನು ಕೇಳಿಲ್ಲ.
ಈಗ ಅವರು ಫ್ಲೈಯಿಂಗ್ ಕಿಸ್ ಬಗ್ಗೆ ಮಾತನಾಡುತ್ತಿದ್ದಾರೆ. ನಿಮ್ಮ ಆದ್ಯತೆಗಳು ಎಲ್ಲಿದೆ ಮೇಡಂ? ಎಂದು ಪ್ರಶ್ನಿಸಿದ್ದಾರೆ. ಲೋಕಸಭೆಯಲ್ಲಿ ಬುಧವಾರ ಮೋದಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯದ ಕುರಿತ ಚರ್ಚೆಯ ಸಂದರ್ಭ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಬಿಜೆಪಿಯ ಮಹಿಳಾ ಸಂಸದೆಯರೆಡೆಗೆ ಪ್ಲೈಯಿಂಗ್ ಕಿಸ್ ಮಾಡಿದ್ದಾರೆಂದು ಆರೋಪ ವ್ಯಕ್ತವಾದ ಒಂದು ದಿನದ ಬಳಿಕ ಮೊಯಿತ್ರಾ ಅವರು ಈ ಹೇಳಿಕೆ ನೀಡಿದ್ದಾರೆ.