Mysore
22
overcast clouds

Social Media

ಭಾನುವಾರ, 13 ಜುಲೈ 2025
Light
Dark

ನಂದಿನಿ ಹಾಲಿನ ದರ 5 ರೂ. ಹೆಚ್ಚಳ ಸಾಧ್ಯತೆ : ಕೆಎಂಎಫ್ ನೂತನ ಅಧ್ಯಕ್ಷ ಭೀಮಾ ನಾಯ್ಕ್ ಸುಳಿವು

ಬೆಂಗಳೂರು : ಕರ್ನಾಟಕ ಹಾಲು ಮಾರಾಟ ಮಹಾಮಂಡಳದ (KMF) ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಭೀಮಾ ನಾಯ್ಕ್ ಅವರು ನಂದಿನಿ ಹಾಲಿನ ದರ ಹೆಚ್ಚಳದ ಸುಳಿವು ನೀಡಿದ್ದಾರೆ. ನಂದಿನಿ ಹಾಲಿನ ದರ 5 ರೂ. ಏರಿಕೆಗೆ ಬೇಡಿಕೆ ಇಟ್ಟಿದ್ದೇವೆ ಎಂದು ಅವರು ಬೆಂಗಳೂರಿನಲ್ಲಿ ಬುಧವಾರ ತಿಳಿಸಿದ್ದಾರೆ. ಹಾಲಿನ ದರ ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚಿಸುತ್ತೇವೆ. ನಂತರ ತೀರ್ಮಾನ ಕೈಗೊಳ್ಳುತ್ತೇವೆ. ಎಲ್ಲಾ ಹಾಲು ಒಕ್ಕೂಟಗಳು 5 ರೂ. ದರ ಹೆಚ್ಚಳಕ್ಕೆ ಬೇಡಿಕೆ ಇಟ್ಟಿವೆ. ದರ ಹೆಚ್ಚಿಸುವುದಲ್ಲದೆ, ಗುಣಮಟ್ಟದ ಹಾಲು, ಮೊಸರು, ತುಪ್ಪ ಗ್ರಾಹಕರಿಗೆ ಒದಗಿಸಲು ಆದ್ಯತೆ ನೀಡಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ, ಹಾಲು ಉತ್ಪಾದಕರಿಗೆ ನೀಡುವ ಮೊತ್ತ ಏರಿಕೆಗೆ ಚಿಂತನೆ ನಡೆಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಬೆಂಗಳೂರಿನಲ್ಲಿ ಹೇಳಿದ್ದಾರೆ. ರೈತರಿಂದ ಖರೀದಿಸುವ ಹಾಲಿನ ದರ ಏರಿಕೆ ಬಗ್ಗೆ ಚಿಂತನೆ ನಡೆಸಲಾಗಿದೆ. ನಮ್ಮ ರಾಜ್ಯದಲ್ಲಿಯೂ ಉತ್ತಮವಾದ ಹೈನುಗಾರಿಕೆ ಇದೆ. ರೈತರಿಗೆ ಹೆಚ್ಚಿನ ಲಾಭ ನೀಡುವ ಕಡೆ ಗಮನ ಹರಿಸುತ್ತೇವೆ. ಮುಖ್ಯಮಂತ್ರಿಗಳ ಜತೆ ಚರ್ಚಿಸಿ ರೈತರಿಗೆ ಅನುಕೂಲವಾಗುವಂತೆ ಮಾಡುತ್ತೇವೆ. ನಂದಿನಿ ಹಾಲಿನ ದರ ಏರಿಕೆ ಬಗ್ಗೆಯೂ ಚರ್ಚೆ ಆಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಬಾಲಚಂದ್ರ ಜಾರಕಿಹೊಳಿ ಅವರ ಕೆಎಂಎಫ್ ಅಧ್ಯಕ್ಷ ಸ್ಥಾನ ಕೊನೆಗೊಂಡ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ ದೊರೆತಿತ್ತು. ಈ ಸ್ಥಾನಕ್ಕೆ ಕಾಂಗ್ರೆಸ್ ಶಾಸಕ ಭೀಮಾ ನಾಯ್ಕ್ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಅಧ್ಯಕ್ಷ ಸ್ಥಾನಕ್ಕಾಗಿ ಯಾರೂ ನಾಮಪತ್ರ ಸಲ್ಲಿಸದಿರುವುದರಿಂದ ಭೀಮಾ ನಾಯ್ಕ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರೈತರಿಗೆ ಕೊಡುತ್ತಿದ್ದ ಹಾಲಿನ ಪ್ರೋತ್ಸಾಹ ಧನ ಕಡಿತಗೊಳಿಸಲು ಇತ್ತೀಚೆಗೆ ಒಕ್ಕೂಟ ಮುಂದಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಹಾಲಿನ ಪ್ರೋತ್ಸಾಹ ಧನ ಮುಂದುವರೆಸಲು ನಿರ್ಧರಿಸಿತ್ತು. ಆದರೆ, ಗ್ರಾಹಕರಿಗೆ ದರ ಹೆಚ್ಚಳದ ಶಾಕ್ ನೀಡುವ ಸುಳಿವು ನೀಡಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!