ಪಾಂಡವಪುರ : ಸಾರಿಗೆ ಬಸ್‌ನಿಂದ ಕೆಳಗೆ ಬಿದ್ದು ಪ್ರಯಾಣಿಕರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಜಕ್ಕನಹಳ್ಳಿ ಬಳಿಯ ಹೇಮಾವತಿ ನಾಲೆಯ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ತಾಲ್ಲೂಕಿನ ಅರಕನಕೆರೆ ಗ್ರಾಮದ ನಿವಾಸಿ ಚಲುವೇಗೌಡ(65) ಮೃತ ವ್ಯಕ್ತಿ.
ಜಕ್ಕನಹಳ್ಳಿ ಸರ್ಕಲ್‌ನಲ್ಲಿ ನಡೆಯುತ್ತಿದ್ದ ಸೋಮವಾರದ ಸಂತೆಗೆ ಬಂದಿದ್ದ ಮೃತ ಚಲುವೇಗೌಡರು, ಸಂತೆ ಮುಗಿಸಿ ವಾಪಸ್ಸು ಸಾರಿಗೆ ಬಸ್‌ನಲ್ಲಿ ಅರಕನಕೆರೆ ಗ್ರಾಮಕ್ಕೆ ತೆರಳುತ್ತಿದ್ದರು. ಸಾರಿಗೆ ಬಸ್ ತುಂಬಾ ರಶ್ ಇದ್ದ ಕಾರಣ ಚಲುವೇಗೌಡ ಡೋರ್ ಬಳಿಯೇ ನಿಂತಿದ್ದರು ಎನ್ನಲಾಗಿದೆ. ಸಾರಿಗೆ ಬಸ್‌ಗೆ ಡೋರ್ ಇಲ್ಲದ ಕಾರಣ ಬಸ್ ಚಲಿಸುವ ಸಂದರ್ಭದಲ್ಲಿ ರಸ್ತೆಯಲ್ಲಿದ್ದ ಗುಂಡಿಗೆ ಬಸ್‌ನ ಚಕ್ರ ಇಳಿದ ತಕ್ಷಣ ಆಯತಪ್ಪಿ ಚಲುವೇಗೌಡ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಸ್ಥಳೀಯರಿಂದ ಪ್ರತಿಭಟನೆ : ಘಟನೆಗೆ ಸಾರಿಗೆ ಬಸ್ ಚಾಲಕ ಹಾಗೂ ನಿರ್ವಾಹಕರ ಬೇಜವಬ್ದಾರಿಯೇ ಕಾರಣ ಎಂದು ಆರೋಪಿಸಿ ಸ್ಥಳೀಯರು, ಗ್ರಾಮಸ್ಥರು ಹಾಗೂ ಸಂಬಂಧಿಕರು ಮಂಡ್ಯ-ಜಕ್ಕನಹಳ್ಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಸಾರಿಗೆ ಬಸ್‌ಗೆ ಡೋರ್ ಇಲ್ಲದೆ ಇರುವುದೇ ಘಟನೆಗೆ ಕಾರಣವಾಗಿದೆ. ಬಸ್‌ಗೆ ಡೋರ್ ಇದಿದ್ದರೆ ಇಂತಹ ಘಟನೆಗಳು ಸಂಭವಿಸುತ್ತಿರಲಿಲ್ಲ ಎಂದು ಸಾರಿಗೆ ಅಧಿಕಾರಿಗಳ ವಿರುದ್ದ ಘೋಷಣೆಕೂಗಿ ಆಕ್ರೋಶ ಹೊರಹಾಕಿದರು.
ಸಾರಿಗೆ ಅಧಿಕಾರಿಗಳು ಸ್ಥಳಕ್ಕೆ ಬಂದು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಪಟ್ಟುಹಿಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಸಾರಿಗೆ ವ್ಯವಸ್ಥಾಪಕ ನಾಗರಾಜು, ಅಧಿಕಾರಿಗಳಾದ ದಿನೇಶ್, ಚುಂಚಯ್ಯ ಅವರನ್ನು ಪ್ರತಿಭಟನಕಾರರು ತರಾಟೆಗೆ ತೆಗೆದುಕೊಂಡು, ಡೋರ್ ಇಲ್ಲದ ಬಸ್‌ಗಳನ್ನು ರಸ್ತೆಗೆ ಏಕೆ ಇಳಿಸಿದ್ದೀರಿ? ಡೋರ್ ಇಲ್ಲದ ಬಸ್‌ಗಳನ್ನು ಸಂಚರಿಸಲು ನೀವು ಆರ್‌ಟಿಒ ಅಧಿಕಾರಿಗಳಿಂದ ಅನುಮತಿ ಪಡೆದುಕೊಂಡಿದ್ದೀರಾ? ಈ ಘಟನೆಗೆ ಯಾರು ಹೊಣೆ? ಎಂದು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.
ಬಳಿಕ ಸಾರಿಗೆ ಅಧಿಕಾರಿ ಮಾತನಾಡಿ, ಘಟನೆಗೆ ಸಾರಿಗೆ ನಿಗಮವೇ ಹೊಣೆ ಎಂದು ತಪ್ಪು ಒಪ್ಪಿಕೊಂಡು ಪರಿಹಾರ ನೀಡುವ ಭರವಸೆ ನೀಡಿದ ಹಿನ್ನೆಯಲ್ಲಿ ಸ್ಥಳೀಯರ ಪ್ರತಿಭಟನೆ ವಾಪಸ್ ಪಡೆದರು. ಬಳಿಕ ಸಾರಿಗೆ ಅಧಿಕಾರಿಗಳು ಶವಸಂಸ್ಕಾರಕ್ಕಾಗಿ ಸ್ಥಳದಲ್ಲಿಯೇ 25 ಸಾವಿರ ಹಣ ನೀಡಿ, 2.50 ಲಕ್ಷ ಪರಿಹಾರವನ್ನು ನೀಡುವುದಾಗಿ ಭರವಸೆ ನೀಡಿದರು.
ಬಳಿಕ ಮೃತದೇಹವನ್ನು ಪಾಂಡವಪುರ ಪಟ್ಟಣದ ಸಾರ್ವಜನಿಕ ಶವಾಗಾರದಲ್ಲಿ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು. ಘಟನೆ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.