Mysore
21
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಮೂರು ಹೊಸ ಮಸೂದೆಗಳ ಹೆಸರು ಹಿಂದಿಯಲ್ಲಿವೆ : ಡಿಎಂಕೆ ವಿರೋಧ

ಚೆನ್ನೈ: ಬ್ರಿಟಿಷರ ಕಾಲದ ಅಪರಾಧ ಕಾನೂನುಗಳಿಗೆ ಪರ್ಯಾಯವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್‌ನಲ್ಲಿ ಶುಕ್ರವಾರ ಮಂಡಿಸಿದ ಮೂರು ಹೊಸ ವಿಧೇಯಕಗಳ ಹಿಂದಿ ಹೆಸರುಗಳನ್ನು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ವಿರೋಧಿಸಿದೆ.

ಇತ್ತೀಚೆಗೆ ಮಂಡಿಸಲಾದ ಮಸೂದೆಗಳನ್ನು ಹಿಂದಿಯಲ್ಲಿ ಪರಿಚಯಿಸಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರವು ಭಾರತದಾದ್ಯಂತ ಹಿಂದಿಯನ್ನು ಬಲವಂತವಾಗಿ ತುರುಕುತ್ತಿದೆ ಎಂದು ದ್ರಾವಿಡ ಮುನ್ನತ್ರ ಕಳಗಂ (ಡಿಎಂಕೆ) ಸಂಸದ ವಿಲ್ಸನ್ ಆರೋಪಿಸಿದ್ದಾರೆ.
“ಲೋಕಸಭೆಯಲ್ಲಿ ಮಂಡಿಸಿದ ಮೂರು ಮಸೂದೆಗಳ ಹೆಸರುಗಳನ್ನು ಇಂಗ್ಲಿಷ್‌ಗೆ ಬದಲಿಸಬೇಕು. ಕಡ್ಡಾಯ ಹಿಂದಿಯನ್ನು ಜಾರಿಗೊಳಿಸಬಾರದು. ಇದರ ಅರ್ಥ ಹೇರಿಕೆಯಾಗುತ್ತದೆ ಮತ್ತು ಇದು ಅಸಾಂವಿಧಾನಿಕ” ಎಂದು ವಿಲ್ಸನ್ ಕಿಡಿಕಾರಿದ್ದಾರೆ.

ಸಂಸತ್‌ನ ಮುಂಗಾರು ಅಧಿವೇಶನ ಅಂತ್ಯಗೊಂಡ ಬಳಿಕ ದಿಲ್ಲಿಯಿಂದ ಮರಳಿದ ಡಿಎಂಕೆ ಸಂಸದ ವಿಲ್ಸನ್, ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು. “ಭಾರತವು ಅನೇಕ ವಿಭಿನ್ನ ಭಾಷೆಗಳನ್ನು ಹೊಂದಿರುವುದರಿಂದ ಇಂಗ್ಲಿಷ್ ಸಾಮಾನ್ಯ ಬಳಕೆಯ ಭಾಷೆಯಾಗಿದೆ. ಎಲ್ಲಾ ಮೂರು ವಿಧೇಯಕಗಳು ಹಿಂದಿಯಲ್ಲಿವೆ. ಹೀಗಾಗಿ ಅದು ಯಾವ ಮಸೂದೆ ಎನ್ನುವುದು ಜನರಿಗೆ ಅರ್ಥವಾಗುವುದಿಲ್ಲ. ಈ ಹೆಸರುಗಳನ್ನು ಉಚ್ಛರಿಸುವುದು ಬಹಳ ಕಷ್ಟವಾಗುತ್ತಿದೆ. ಇದು ಭಾರತದಾದ್ಯಂತ ಹಿಂದಿಯನ್ನು ಬಲವಂತವಾಗಿ ತುರುಕುವುದಕ್ಕೆ ಎಡೆಮಾಡಿಕೊಡಲಿದೆ” ಎಂದು ಆರೋಪಿಸಿದರು.

ಈ ನಡೆಯು ಸಂವಿಧಾನ ವಿರೋಧಿ ಎಂದು ವಿಲ್ಸನ್ ಟೀಕಿಸಿದರು. “ಮೂರೂ ಮಸೂದೆಗಳ ಶೀರ್ಷಿಕೆಗಳು ಹಿಂದಿಯಲ್ಲಿವೆ. ಕಾನೂನುಗಳ ಶೀರ್ಷಿಕೆ ಹಿಂದಿಯಲ್ಲಿ ಇರುವುದು ಸಂವಿಧಾನದ ನಿಯಮಕ್ಕೆ ವಿರುದ್ಧವಾಗಿದೆ. ಮಸೂದೆ ಸೇರಿದಂತೆ ಏನೇ ರೂಪಿಸಿದರೂ ಅದು ಇಂಗ್ಲಿಷ್‌ನಲ್ಲಿ ಇರಬೇಕು ಎಂದು ಸಂವಿಧಾನದಲ್ಲಿ ಹೇಳಲಾಗಿದೆ” ಎಂಬುದಾಗಿ ಹೇಳಿದರು.

ಕೇಂದ್ರದ ನಡೆಯನ್ನು ತಮಿಳುನಾಡು ಸಿಎಂ ಹಾಗೂ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ಶುಕ್ರವಾರ ಟೀಕಿಸಿದ್ದರು.

ಕೇಂದ್ರ ಸರ್ಕಾರವು ಮಸೂದೆಗಳನ್ನು ಹಿಂದಿಯಲ್ಲಿ ಪ್ರಸ್ತುತಪಡಿಸಿರುವುದು ‘ಭಾಷಾ ಸಾಮ್ರಾಜ್ಯಶಾಹಿ’ ಸರಣಿಯ ಭಾಗವಾಗಿದೆ ಮತ್ತು ಇದು ವಸಾಹತು ವಿಮೋಚನೆಯ ಹೆಸರಿನಲ್ಲಿ ವಸಾಹತು ಮರು ಸ್ಥಾಪನೆಯ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದರು.

“ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ಮೊಂಡುತನದ ಪ್ರಯತ್ನವು ಒಟ್ಟಾರೆ ಬದಲಾವಣೆಯ ಮೂಲಕ ಭಾರತೀಯ ವೈವಿಧ್ಯತೆಯ ಸತ್ವವನ್ನು ಹಾಳುಮಾಡುವಂತಿದೆ- ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ವಿಧೇಯಕಗಳು ಭಾಷಾ ಸಾಮ್ರಾಜ್ಯಶಾಹಿಯ ಭಾಗವಾಗಿದೆ. ಇದು ಭಾರತದ ಏಕತೆಯ ಮೂಲ ನೆಲಗಟ್ಟಿಗೆ ವಿರುದ್ಧವಾಗಿದೆ. ಇನ್ನು ಮುಂದೆ ಒಂದೇ ಒಂದು ತಮಿಳು ಪದವನ್ನು ಉಚ್ಚರಿಸುವ ನೈತಿಕ ಹಕ್ಕೂ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಲ್ಲ” ಎಂದು ಸ್ಟಾಲಿನ್ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು.

“ನಮ್ಮ ಅಸ್ಮಿತೆಯನ್ನು ಹಿಂದಿಯ ಮೂಲಕ ಅತಿಕ್ರಮಿಸುವಂತೆ ಬಿಜೆಪಿಯ ಮೊಂಡಾಟದ ಪ್ರಯತ್ನವನ್ನು ಸತತವಾಗಿ ವಿರೋಧಿಸಲಾಗುತ್ತದೆ” ಎಂದು ಹಿಂದಿ ಹೇರಿಕೆ ಟ್ಯಾಗ್‌ನೊಂದಿಗೆ ಸ್ಟಾಲಿನ್ ಎಚ್ಚರಿಕೆ ನೀಡಿದ್ದರು.
ಮೂರು ಪುರಾತನ ಕಾಯ್ದೆಗಳನ್ನು ಬದಲಿಸುವ ಮೂರು ಹೊಸ ವಿಧೇಯಕಗಳನ್ನು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದ್ದ ಗೃಹ ಸಚಿವ ಅಮಿತ್ ಶಾ, ಈ ಮೂರು ಮಸೂದೆಗಳು ಸಂವಿಧಾನವು ಭಾರತದ ನಾಗರಿಕರಿಗೆ ನೀಡಿದ ಹಕ್ಕುಗಳನ್ನು ರಕ್ಷಿಸಲು ಹಾಗೂ ನ್ಯಾಯದಾನವನ್ನು ನೀಡುವ ಗುರಿ ಹೊಂದಿವೆ ಎಂದಿದ್ದರು.
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ