ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಕೇಂದ್ರ ಕಚೇರಿಯ ಆವರಣದಲ್ಲಿರುವ ಗುಣಮಟ್ಟ ನಿಯಂತ್ರಣ ವಿಭಾಗದ ಲ್ಯಾಬ್ ಮತ್ತು ಕಚೇರಿ ಕಟ್ಟಡಕ್ಕೆ ಬೆಂಕಿ ಬಿದ್ದಿರುವುದು ಆಕಸ್ಮಿಕವಲ್ಲ. ಇದು ಷಡ್ಯಂತ್ರ ಎಂದು ಆಡಳಿತರೂಢ ಕಾಂಗ್ರೆಸ್ ಆರೋಪಿಸಿದೆ.
ಅಗ್ನಿ ಅವಘಡ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಬಿಎಂಪಿ ಕಚೇರಿಯ ಕಾಮಗಾರಿಗಳ ಗುಣಮಟ್ಟ ನಿಯಂತ್ರಣ ಪ್ರಯೋಗಲಯದಲ್ಲಿ ಕಾಮಗಾರಿಗಳ ದಾಖಲೆ ಇದ್ದಂತಹ ಕೊಠಡಿಗೆ ಬೆಂಕಿ ಬಿದ್ದಿರುವುದು ಆಕಸ್ಮಿಕವಲ್ಲ, ಷಡ್ಯಂತ್ರ ಎಂದು ದೂರಿದೆ.
40 ಪರ್ಸೆಂಟ್ ಕಮಿಷನ್ನಿನ ಕಳಪೆ ಕಾಮಗಾರಿಗಳ ಬಗ್ಗೆ ನ್ಯಾಯಾಂಗ ತನಿಖೆಗೆ ವಹಿಸಿದ ಬೆನ್ನಲ್ಲೇ ದಾಖಲೆಗಳಿದ್ದ ಕೊಠಡಿಗೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳನ್ನು ಮತ್ತು ಇದರ ಹಿಂದಿರುವ ಬಿಜೆಪಿಯ ಭ್ರಷ್ಟರನ್ನು ಹೆಡೆಮುರಿ ಕಟ್ಟುವುದು ನಿಶ್ಚಿತ ಎಂದು ಕಾಂಗ್ರೆಸ್ ಗುಡುಗಿದೆ.
ಬಿಜೆಪಿ ತಾನು ಮಾಡಿದ ಭ್ರಷ್ಟಾಚಾರದ ಸಾಕ್ಷ್ಯಗಳಿಗೆ ಬೆಂಕಿ ಇಟ್ಟು ಬಚಾವಾಗಿಬಿಡುವ ಹುನ್ನಾರ ನಡೆಸಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಬಿಬಿಎಂಪಿ ಕಚೇರಿಗೆ ದುಷ್ಕರ್ಮಿಗಳು ಬೆಂಕಿ ಹೊತ್ತಿಸಿದ ಪರಿಣಾಮ ಎಂಟು ನೌಕರರಿಗೆ ಗಾಯವಾಗಿದೆ, ಮೂರು ಜನರ ಸ್ಥಿತಿ ಗಂಭೀರವಾಗಿದೆ, ಇವರೆಲ್ಲರಿಗೂ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ.
ತನಿಖೆಗೆ ಹೆದರಿದ ಭ್ರಷ್ಟರು ನಡೆಸಿದ ಇಂತಹ ಹೀನ ಕೃತ್ಯದ ಹಿಂದಿರುವ ಕೈಗಳಿಗೆ ಕೊಳ ತೊಡಿಸುವುದು ಖಚಿತ.
ಈ ಹಿಂದೆ ಬಿಜೆಪಿ ಆಡಳಿತವಧಿಯಲ್ಲಿ ಬಿಬಿಎಂಪಿಗೆ ಬೆಂಕಿ ಇಟ್ಟವರೇ ಇಂದೂ ಸಹ ಇಟ್ಟಿದ್ದಾರೆ ಎಂಬ ಗುಮಾನಿ ಹೆಚ್ಚಿದೆ.
ಇದನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ತನಿಖೆ ನಡೆಸಿ ತೆರೆಮರೆಯಲ್ಲಿರುವ ಭ್ರಷ್ಟರನ್ನು ಬಯಲಿಗೆಳೆಯುತ್ತೇವೆ ಎಂದು ಮತ್ತೊಂದು ಟ್ವೀಟ್ ಮಾಡಿದೆ.