ಹೊಸದಿಲ್ಲಿ : ಪಶ್ಚಿಮ ಬಂಗಾಳದ ಶಾಲಿಮರ್‌ನಿಂದ ತಮಿಳುನಾಡಿನ ಚೆನ್ನೈ ಕಡೆಗೆ ಪ್ರಯಾಣಿಸುತ್ತಿದ್ದ ಶಾಲಿಮರ್- ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಅಪಘಾತ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಇತ್ತೀಚಿನ ವರ್ಷಗಳಲ್ಲಿಯೇ ಕಂಡ ಅತ್ಯಂತ ಘೋರ ರೈಲು ಅಪಘಾತವಿದು.
ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಗೂಡ್ಸ್ ರೈಲು ನಿಂತಿದ್ದ ಹಳಿಯಲ್ಲಿಯೇ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ತೆರಳಿದ್ದರಿಂದ ಅಪಘಾತ ಸಂಭವಿಸಿದೆ. ಅದರ ವೇಗಕ್ಕೆ ಕೋಚ್‌ಗಳು ಹಳಿ ತಪ್ಪಿ ಅಕ್ಕಪಕ್ಕದ ಹಳಿಗಳ ಮೇಲೆ ಉರುಳಿವೆ. ಕೆಲವೇ ಹೊತ್ತಿನಲ್ಲಿ ಮತ್ತೊಂದು ಹಳಿಯಲ್ಲಿ ಬಂದ ಬೆಂಗಳೂರು- ಹೌರಾ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು, ಹಳಿಗಳ ಮೇಲೆ ಬಿದ್ದಿದ್ದ ಬೋಗಿಗಳಿಗೆ ಡಿಕ್ಕಿ ಹೊಡೆದಿದ್ದರಿಂದಾಗಿ ಅಪಘಾತದ ಅನಾಹುತ ಮತ್ತಷ್ಟು ಹೆಚ್ಚಿದೆ.
ಇತಿಹಾಸದ ಪುಟಗಳನ್ನು ತೆರೆದರೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ದುರಂತಗಳ ಕರಾಳ ಪಟ್ಟಿಯನ್ನೇ ಹೊಂದಿರುವುದು ಕಾಣಿಸುತ್ತದೆ. ಎರಡು ದಶಕಗಳ ಹಿಂದೆಯೂ ಇದು ಅಪಘಾತಕ್ಕೆ ಒಳಗಾಗಿತ್ತು.
2002ರ ಮಾರ್ಚ್ 15ರಂದು ಹೌರಾ- ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಸುಮಾರು ಏಳು ಕೋಚ್‌ಗಳು ನೆಲ್ಲೂರು ಜಿಲ್ಲೆಯ ಕೋವುರು ಮಂಡಲದ ಪಡುಗುಪಾಡು ರೋಡ್ ಓವರ್ ಬ್ರಿಡ್ಜ್‌ನಲ್ಲಿ ಹಳಿ ತಪ್ಪಿದ್ದವು. ಇದರಿಂದ 100 ಪ್ರಯಾಣಿಕರು ಗಾಯಗೊಂಡಿದ್ದರು. ವಿಜಯವಾಡ- ಚೆನ್ನೈ ನಡುವಿನ ಮುಖ್ಯ ರೈಲು ಮಾರ್ಗದ ಕಳಪೆ ಸ್ಥಿತಿ ಅಪಘಾತಕ್ಕೆ ಕಾರಣ ಎನ್ನಲಾಗಿತ್ತು.
2009ರ ಫೆ 13ರಂದು ಒಡಿಶಾದ ಭುವನೇಶ್ವರದಿಂದ ಸುಮಾರು 100 ಕಿಮೀ ದೂರದಲ್ಲಿನ ಜಾಜ್ಪುರ ಕಿಯೋಂಝಾರ್ ರಸ್ತೆ ಸಮೀಪ ರೈಲು ಹಳಿ ತಪ್ಪಿದ್ದರಿಂದ 15 ಜನ ಮೃತಪಟ್ಟು, ಅನೇಕರು ಗಾಯಗೊಂಡಿದ್ದರು. ಈ ವೇಳೆ ರೈಲು 115 ಕಿಮೀ ವೇಗದಲ್ಲಿ ಸಾಗುತ್ತಿತ್ತು.
ಒಡಿಶಾದ ಗಂಜಾಂ ಜಿಲ್ಲೆಯಲ್ಲಿ 2012ರ ಡಿ 30ರಂದು ನಸುಕಿನಲ್ಲಿ ಹಳಿ ದಾಟುತ್ತಿದ್ದ ಆನೆಗಳಿಗೆ ಕೋರಮಂಡಲ್ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿತ್ತು. ಎರಡು ಮರಿಗಳು ಸೇರಿದಂತೆ ಆರು ಆನೆಗಳು ಮೃತಪಟ್ಟಿದ್ದವು. ರೈಲಿನ ಸಹಾಯಕ ಕೂಡ ಮೃತಪಟ್ಟಿದ್ದ. ಆದರೆ ಆತನ ಸಾವಿಗೆ ಕಾರಣ ಸ್ಪಷ್ಟವಾಗಿರಲಿಲ್ಲ.
2012ರ ಜನವರಿ 14ರಂದು ಇದೇ ರೈಲಿನ ಜನರಲ್ ಕಂಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಲಿಂಗರಾಜು ರೈಲ್ವೆ ನಿಲ್ದಾಣದ ಸಮೀಪ ಎರಡನೇ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. 20 ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸಲಾಗಿತ್ತು. ಇದರಿಂದ ಯಾರಿಗೂ ಗಾಯಗಳಾಗಿರಲಿಲ್ಲ.
2015ರ ಏಪ್ರಿಲ್ 18ರಂದು ನಿಡದವೊಲು ಜಂಕ್ಷನ್‌ನಲ್ಲಿ ರೈಲಿಗೆ ಬೆಂಕಿ ಹೊತ್ತಿಕೊಂಡಿತ್ತು. ಎರಡು ಬೋಗಿಗಳಿಗೆ ಹಾನಿಯಾಗಿತ್ತು. ಅದೃಷ್ಟವಶಾತ್ ಈ ಘಟನೆಯಲ್ಲಿ ಕೂಡ ಯಾರಿಗೂ ಅಪಾಯ ಉಂಟಾಗಿರಲಿಲ್ಲ.
2022ರ ಜೂನ್ 2ರಂದು ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಸರಣಿ ಅಪಘಾತಗಳಿಗೆ ಕಾರಣವಾಗಿದೆ. ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಹೌರಾ- ಚೆನ್ನೈ ರೈಲಿನ ಬೋಗಿಗಳು ಅಕ್ಕಪಕ್ಕದ ಹಳಿಗಳ ಮೇಲೆ ಬಿದ್ದಿದ್ದವು. ಬೆಂಗಳೂರಿನಿಂದ ಹೌರಾಕ್ಕೆ ತೆರಳುತ್ತಿದ್ದ ರೈಲು, ಈ ಬೋಗಿಗಳಿಗೆ ಡಿಕ್ಕಿ ಹೊಡೆದಿದ್ದರಿಂದ ದುರಂತದ ತೀವ್ರತೆ ಹೆಚ್ಚಾಗಿದೆ.