Mysore
21
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ನಮ್ಮ ಪಕ್ಷದ ವರಿಷ್ಠರು ಮತ್ತು ದೇವೇಗೌಡರ ಮಧ್ಯೆ ಮಾತುಕತೆ ನಡೆಯುತ್ತಿದೆ: ಬೊಮ್ಮಾಯಿ

ಹುಬ್ಬಳ್ಳಿ: ಕರ್ನಾಟಕ ರಾಜಕೀಯ ಅಂಗಳದಲ್ಲಿ ಈಗ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಬಹಳ ಚರ್ಚೆಯಾಗುತ್ತಿದೆ. ನಾಡಿದ್ದು ಜುಲೈ 18ರಂದು ದೆಹಲಿಯಲ್ಲಿ ಎನ್ ಡಿಎ ಸಭೆಯಿದ್ದು ಅದಕ್ಕೆ ಮುನ್ನ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ದೆಹಲಿಗೆ ಹೋಗಿ ಬಿಜೆಪಿ ವರಿಷ್ಠರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

2024ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ-ಜೆಡಿಎಸ್ ಮೈತ್ರಿಗೆ ವೇದಿಕೆ ಸಿದ್ಧವಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಪೂರಕವಾಗಿ ಇಂದು ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ನಮ್ಮ ಬಿಜೆಪಿ ವರಿಷ್ಠರು ಮತ್ತು ಜೆಡಿಎಸ್ ವರಿಷ್ಠರಾದ ದೇವೇಗೌಡರ ನಡುವೆ ಮಾತುಕತೆ ನಡೆಯುತ್ತಿದೆ. ಈಗಾಗಲೇ ಕುಮಾರಸ್ವಾಮಿಯವರು ಕೂಡ ಕೆಲವು ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಆ ದಿಕ್ಕಿನಲ್ಲಿ ಮಾತುಕತೆ ಮುಂದುವರಿಯುತ್ತದೆ. ಮಾತುಕತೆಯ ಫಲಶೃತಿ ಆಧಾರದ ಮೇಲೆ ಮುಂದಿನ ರಾಜಕೀಯ ಬೆಳವಣಿಗೆಯಿದೆ.

ಜುಲೈ 18ರ ನಂತರ ವಿರೋಧ ಪಕ್ಷ ನಾಯಕ: ಬಹುತೇಕವಾಗಿ ಜುಲೈ 18ರ ನಂತರ ವಿರೋಧ ಪಕ್ಷದ ನಾಯಕರ ಆಯ್ಕೆ ನಡೆಯಲಿದೆ ಎಂದರು.

ಮೋದಿ ಮಣಿಸುವುದು ವಿಪಕ್ಷಗಳ ಏಕೈಕ ಉದ್ದೇಶ: ಪ್ರಧಾನಿ ಮೋದಿಯವರನ್ನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮಣಿಸುವ ಏಕೈಕ ಉದ್ದೇಶದಿಂದ ಪ್ರತಿಪಕ್ಷಗಳು ಒಂದಾಗುತ್ತಿವೆ, ಸಭೆ ಸೇರುವುದರಲ್ಲಿ ವಿಪಕ್ಷಗಳ ಪ್ರಮುಖ ವಿಷಯವೇ ಇಲ್ಲ, ಬಿಜೆಪಿ ಸೋಲಿಸುವುದೊಂದೇ ಅವರ ಸಭೆಯ ಅಜೆಂಡಾವಾಗಿದೆ ಎಂದು ಇದೇ ಸಂದರ್ಭದಲ್ಲಿ  ಟೀಕಿಸಿದರು.

ನಾಳೆಯಿಂದ ಬೆಂಗಳೂರಿನಲ್ಲಿ 2 ದಿನ ಪ್ರತಿಪಕ್ಷ ನಾಯಕರು ಸಭೆ ಮಾಡುತ್ತಿದ್ದಾರೆ. ಆದರೆ, ದೇಶದಲ್ಲಿ ಪ್ರತಿಪಕ್ಷಗಳು ಶಕ್ತಿಯುತವಾಗಿಲ್ಲ. ಪ್ರತಿಪಕ್ಷಗಳ ಸಭೆಯಿಂದ ಯಾವುದೇ ರಾಜಕೀಯ ಲಾಭ ಆಗಲ್ಲ, ಮೋದಿ ಸೋಲಿಸಲು ಒಟ್ಟಾಗಿದ್ದಾರೆ, ಅದು ಸಾಧ್ಯವಿಲ್ಲದ ಮಾತು ಎಂದಿದ್ದಾರೆ.

ಹೆಣ್ಣುಮಕ್ಕಳಿಗೆ ಗೃಹಲಕ್ಷ್ಮಿಯಿಂದ ಭ್ರಮನಿರಸನ: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಾದ ಗೃಹ ಲಕ್ಷ್ಮಿ ಯೋಜನೆಗೆ ಸ್ಪಷ್ಟತೆಯಿಲ್ಲ, ಸಂಪೂರ್ಣವಾಗಿ ಅದನ್ನು ಅನುಷ್ಠಾನ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ. ಇದು ತಾಯಂದಿರಿಗೆ ರಾಜ್ಯದ ಎಲ್ಲಾ ಹೆಣ್ಣುಮಕ್ಕಳಿಗೆ ಆಗಸ್ಟ್ 16ರಂದು ಭ್ರಮನಿರಸನವಾಗುತ್ತದೆ ಎಂದು ಟೀಕಿಸಿದರು. ಬಜೆಟ್ ಮೇಲಿನ ಚರ್ಚೆಗೆ ಮುಂದಿನ ವಾರ ಸದನದಲ್ಲಿ ಬಹಳ ಗಂಭೀರವಾದ ಚರ್ಚೆಯಾಗಲಿದೆ ಎಂದರು.

ವಿ ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ಊಹಾಪೋಹವಷ್ಟೆ, ಯಾರೂ ಕಾಂಗ್ರೆಸ್ ಸೇರುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ