ಬೆಂಗಳೂರು : ಅನ್ನಭಾಗ್ಯ ಯೋಜನೆಯ ಅಕ್ಕಿ ರಾಜಕೀಯ ಹಾದಿರಂಪ-ಬೀದಿರಂಪವಾಗಿದ್ದು, ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಈ ನಡುವೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸುವ ಚರ್ಚೆಗಳು ನಡೆಯುತ್ತಿವೆ. ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದು, ಬಹುತೇಕ ಎಲ್ಲರೂ ತಮ್ಮ ಬಳಿ ದಾಸ್ತಾನಿರುವ ಅಕ್ಕಿಯನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಜತೆಗೆ ಭತ್ತ ಬೆಳೆಯುವ ಇತರ ರಾಜ್ಯಗಳಾದ ಛತ್ತೀಸ್‍ಗಢ, ಒಡಿಸ್ಸಾ, ಪಂಜಾಬ್, ಹರಿಯಾಣ, ಪಶ್ಚಿಮಬಂಗಾಳ ಸೇರಿದಂತೆ ಹಲವು ರಾಜ್ಯಗಳೊಂದಿಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಚರ್ಚೆ ನಡೆಸುತ್ತಿದ್ದು, ಅಕ್ಕಿ ಖರೀದಿಗೆ ಮುಂದಾಗಿದ್ದಾರೆ.
ಕೇಂದ್ರದ ಬಳಿ ಮತ್ತೆ ಪ್ರಸ್ತಾವನೆ ಸಲ್ಲಿಸಿ ಅಕ್ಕಿ ಪಡೆದುಕೊಳ್ಳಲು ಪ್ರಯತ್ನಿಸಬೇಕು ಎಂಬ ಸಲಹೆಯನ್ನು ರಾಜ್ಯ ಸರ್ಕಾರ ತಳ್ಳಿ ಹಾಕಿದ್ದು, ಅಕ್ಕಿ ಕೊಡುವುದಿಲ್ಲ ಎಂಬ ಧೋರಣೆಯನ್ನು ಸವಾಲಾಗಿ ಸ್ವೀಕರಿಸಿ ಇತರೆಡೆಗಳಿಂದ ಅಕ್ಕಿ ಸಂಗ್ರಹಿಸಿ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ಬಿಜೆಪಿ ಹಾಗೂ ಕೇಂದ್ರ ಸರ್ಕಾರಕ್ಕೆ ಸವಾಲೊಡ್ಡಲು ಮುಂದಾಗಿದೆ.
ಮೊದಲ ಹಂತದಲ್ಲಿ ದಕ್ಷಿಣ ಭಾರತದ ರಾಜ್ಯಗಳ ನಡುವೆ ಹೊಂದಾಣಿಕೆ ಕಂಡುಬರುತ್ತಿದ್ದು, ನಂತರದ ಬೆಳವಣಿಗೆಯಲ್ಲಿ ಬಿಜೆಪಿಯೇತರ ಸರ್ಕಾರಗಳಿರುವ 15ಕ್ಕೂ ಹೆಚ್ಚು ರಾಜ್ಯಗಳ ಜತೆ ರಾಜ್ಯ ಸರ್ಕಾರ ಚರ್ಚೆ ನಡೆಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಅಕ್ಕಿ ರಾಜಕೀಯವನ್ನು ಕರ್ನಾಟಕಕ್ಕೆ ಸೀಮಿತಗೊಳಿಸದೆ, ರಾಷ್ಟ್ರೀಯ ವಿಷಯವನ್ನಾಗಿ ಪರಿವರ್ತಿಸಲು ಮುಂದಾಗಿದೆ.
ಈಗಾಗಲೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಬಿಜೆಪಿಯೇತರ ಆಡಳಿತವಿರುವ ರಾಜ್ಯ ಸರ್ಕಾರಗಳ ಮೇಲೆ ದ್ವೇಷ ಹಾಗೂ ದಬ್ಬಾಳಿಕೆ ರಾಜಕಾರಣ ಮಾಡುತ್ತಿದೆ ಎಂಬ ಆರೋಪಗಳಿವೆ. ಈ ಆಕ್ರೋಶಕ್ಕಾಗಿಯೇ ರಾಷ್ಟ್ರಮಟ್ಟದಲ್ಲಿ ಬಿಜಪಿಯೇತರ ರಾಜಕೀಯ ಸಂಘಟನೆ ಚುರುಕು ಪಡೆದುಕೊಂಡಿದೆ. ಅದರ ಬೆನ್ನಲ್ಲೇ ತಮಿಳುನಾಡಿನಲ್ಲಿ ಸಚಿವ ಸೆಂಥಿಲ್ ಬಾಲಾಜಿ ಬಂಧನ ಮತ್ತು ಕರ್ನಾಟಕಕ್ಕೆ ಅಕ್ಕಿ ನೀಡುವುದಿಲ್ಲ ಎಂಬ ಕೇಂದ್ರದ ಧೋರಣೆ ಬಿಜೆಪಿಯೇತರ ಪಕ್ಷಗಳನ್ನು ಕೆರಳಿಸಿವೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದವರೇ ಆಗಿರುವುದರಿಂದ ಅಕ್ಕಿ ರಾಜಕೀಯವನ್ನು ಮುಂದಿಟ್ಟುಕೊಂಡು ಇತರ ರಾಜ್ಯಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ಅನ್ನಭಾಗ್ಯ ಯೋಜನೆಗೆ ಸುಮಾರು 10 ಸಾವಿರ ಕೋಟಿ ರೂ.ಗಳು ವೆಚ್ಚವಾಗಬಹುದು ಎಂಬ ನಿರೀಕ್ಷೆ ಇತ್ತು. ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್‍ಗೆ ಮೂರೂವರೆ ಸಾವಿರ ರೂ.ನಂತೆ ಅಕ್ಕಿ ಒದಗಿಸಿದ್ದರೆ ಪೂರ್ವ ನಿಗದಿತ ವೆಚ್ಚದಲ್ಲೇ ಯೋಜನೆ ಅನುಷ್ಠಾನವಾಗುವ ಸಾಧ್ಯತೆ ಇತ್ತು. ಆದರೆ, ಈಗ ಬೇರೆ ಬೇರೆ ರಾಜ್ಯಗಳಿಂದ ಹಾಗೂ ಖಾಸಗಿ ವಲಯದಿಂದ ಅಕ್ಕಿ ಖರೀದಿಸಬೇಕಾಗಿರುವುದರಿಂದ ಅನ್ನಭಾಗ್ಯ ಯೋಜನೆಯ ವೆಚ್ಚ ಮತ್ತಷ್ಟು ದುಬಾರಿಯಾಗುವ ನಿರೀಕ್ಷೆ ಇದೆ.
ಅಕ್ಕಿ ರಾಜಕೀಯ ಈಗ ಬೀದಿ ರಂಪವಾಗಿ ಮಾರ್ಪಟ್ಟಿದೆ. ಬಿಜೆಪಿ , ಕೇಂದ್ರ ಸರ್ಕಾರ ಅಕ್ಕಿ ನೀಡದೇ ಇರುವ ಬಗ್ಗೆ ಸಮರ್ಥನೆಗಿಳಿದಿದ್ದು, ವಿಧಾನಸಭೆ ಚುನಾವಣೆಗೂ ಮೊದಲು ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ಜತೆ ಚರ್ಚೆ ಮಾಡಿ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿರಲಿಲ್ಲ. ಈಗ ಅಕ್ಕಿ ಕೊಡುತ್ತಿಲ್ಲ ಎಂದು ಕೇಂದ್ರದ ಮೇಲೆ ಗೂಬೆ ಕೂರಿಸಿ ಪಂಚಖಾತ್ರಿ ಭರವಸೆ ಈಡೇರಿಸದೇ ನುಣುಚಿಕೊಳ್ಳಲು ಅವಕಾಶವಿಲ್ಲ ಎಂದು ಎಚ್ಚರಿಸಿದೆ.
ಅಕ್ಕಿ ನೀಡಲಾಗದಿದ್ದರೆ ಇದಕ್ಕೆ ತಗಲುವ ವೆಚ್ಚವನ್ನು ಫಲಾನುಭವಿಗಳ ಖಾತೆಗೆ ಹಾಕಬೇಕು ಎಂಬ ಒತ್ತಡ ಹೇರಲಾಗುತ್ತದೆ. ಈ ಮೊದಲು ಶಕ್ತಿ, ಗೃಹಲಕ್ಷ್ಮಿ ಹಾಗೂ ಗೃಹ ಜ್ಯೋತಿ ಯೋಜನೆಗಳ ಜಾರಿ ವಿಷಯವಾಗಿ ವ್ಯಾಪಕ ಚರ್ಚೆ ಮಾಡಿದ ಬಿಜೆಪಿ, ಈಗ ಅನ್ನಭಾಗ್ಯದ ವಿಷಯವನ್ನು ಕೈಗೆತ್ತಿಕೊಂಡಿದೆ. ಕಾಂಗ್ರೆಸ್ ಸರ್ಕಾರ ಯೋಜನೆ ಜಾರಿಗೊಳಿಸದೇ ಇದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಬಿಜೆಪಿ ಹೇಳುತ್ತಿದೆ.
ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಬಿಜೆಪಿ ವಿರುದ್ಧ ಕಿಡಿಕಾರುತ್ತಿದ್ದು, ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರಿ ಅಕ್ಕಿ ಕೊಡಿಸಲಿ ಎಂದು ಒತ್ತಾಯಿಸುತ್ತಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ಜಿಎಸ್‍ಟಿ ಪಾವತಿಸುವ ಸ್ಥಾನದಲ್ಲಿ ಕರ್ನಾಟಕ ಎರಡನೆಯದಾಗಿದೆ. ಆದರೆ, ಜಿಎಸ್‍ಟಿ ಮರುಪಾವತಿಯಲ್ಲಿ 10ನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರ ಮೊದಲಿನಿಂದಲೂ ಮಲತಾಯಿ ಧೋರಣೆ ಅನುಸರಿಸುತ್ತಿದೆ.
ಒಂದೆಡೆ ಬಿಜೆಪಿ ನಾಯಕರು ಅನ್ನಭಾಗ್ಯ ಜಾರಿಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ. ಮತ್ತೊಂದೆಡೆ ಅವರದ್ದೇ ಪಕ್ಷ ಅಕಾರದಲ್ಲಿರುವ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಬಿಜೆಪಿ ನಾಯಕರ ನಿಲುವುಗಳೇ ಗೊಂದಲಗಳಾಗಿವೆ ಎಂದು ಕಾಂಗ್ರೆಸ್ ಕಿಡಿಕಾರುತ್ತಿದೆ.