ಜೈಪುರ: ಐಎಎಸ್ ಮತ್ತು ಆರ್‌ಎಎಸ್ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಆಕಾಂಕ್ಷಿಗಳಿಗೆ ಉಚಿತ ತರಬೇತಿ ನೀಡುವ ಯೋಜನೆಗೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಚಾಲನೆ ನೀಡಿದ್ದಾರೆ.
ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘ(ಎನ್‌ಎಸ್‌ಯುಐ) ಸಂಸ್ಥಾಪನ ದಿನದ ಅಂಗವಾಗಿ ವಿಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜಸ್ಥಾನ ವಿಶ್ವವಿದ್ಯಾಲಯದಲ್ಲಿ ಉಚಿತ ತರಬೇತಿ ನೀಡಲಾಗುವುದು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಾಸ ನಡೆಸಲು ಆಸಕ್ತಿ ಹೊಂದಿರುವವರಿಗೆ ಅನುಕೂಲವಾಗಲೇಂದು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು.
ರಕ್ಷಾಬಂಧನ ಹಬ್ಬದ ಭಾಗವಾಗಿ 40 ಲಕ್ಷ ಕುಟುಂಬಗಳ ಹೆಣ್ಣು ಮಕ್ಕಳಿಗೆ, ಮೂರು ವರ್ಷಗಳ ಉಚಿತ ಇಂಟರ್ನೆಟ್ ಸೇವೆಯೊಂದಿಗೆ ಮೊಬೈಲ್ ಫೋನ್‌ಗಳನ್ನು ವಿತರಿಸಲಾಗುವುದು ಎಂದು ಗೆಹಲೋತ್ ತಿಳಿಸಿದ್ದಾರೆ.
ಸರ್ಕಾರದ ಯೋಜನೆಗಳು ಗ್ರಾಮೀಣ ಭಾಗದ ಜನರಿಗೆ ತಲುಪುತ್ತಿಲ್ಲ. ಗ್ರಾಮೀಣ ಜನರಿಗೆ ಮಾಹಿತಿ ನೀಡುವ ಕೆಲಸ ಎನ್‌ಎಸ್‌ಯುಐ ಮಾಡಬೇಕಾಗಿದೆ ಎಂದು ಕರೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಮಿಕರಿಗೆ (ಸ್ವಿಗ್ಗಿ, ಜೊಮ್ಯಾಟೊ, ಓಲಾ, ಉಬರ್ ಮುಂತಾದ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ) ಕ್ಷೇಮಾಭಿವೃದ್ಧಿ ನಿಗಮ ಸ್ಥಾಪಿಸಿ,200 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದೂ ಅವರು ಮಾಹಿತಿ ನೀಡಿದ್ದಾರೆ.