ಬೆಂಗಳೂರು : ಪುನೀತ್ ರಾಜ್ಕುಮಾರ್ ಅವರ ದೊಡ್ಡ ಅಭಿಮಾನಿಗಳಲ್ಲಿ ಒಬ್ಬರು ಸ್ವತಃ ಅವರ ಅಣ್ಣ ರಾಘವೇಂದ್ರ ರಾಜ್ಕುಮಾರ್. ಇಷ್ಟು ದಿನ ಎದೆಯ ಒಳಗೆ ಇಟ್ಟುಕೊಂಡಿದ್ದ ಅಪ್ಪುವಿನ ಹೆಸರನ್ನು ಈಗ ಎದೆಯ ಮೇಲೆ ಹಚ್ಚೆಯಾಗಿ ಹಾಕಿಸಿಕೊಂಡಿದ್ದಾರೆ.
ಪುನೀತ್ ರಾಜ್ಕುಮಾರ್ ಅಗಲಿ ಒಂದು ವರ್ಷಕ್ಕೂ ಹೆಚ್ಚು ಸಮಯವಾಗಿದ್ದರೂ ಅವರ ಅಗಲಿಕೆಯನ್ನು ಇಂದಿಗೂ ಎಷ್ಟೋ ಜನರಿಗೆ ಅರಗಿಸಿಕೊಳ್ಳಲಾಗಿಲ್ಲ. ಪುನೀತ್ ಅಗಲಿಕೆ ಬಳಿಕ ರಾಜ್ಯದಾದ್ಯಂತ ಬೀದಿ ಬೀದಿಯಲ್ಲಿ ಅವರ ಕಟೌಟ್ಗಳು ರಾರಾಜಿಸಿವೆ. ಪುತ್ಥಳಿಗಳ ಉದ್ಘಾಟನೆ ಆಗಿದೆ. ಕೆಲವರಂತೂ ದೇವಾಲಯವನ್ನೇ ಕಟ್ಟಿಬಿಟ್ಟಿದ್ದಾರೆ. ಪುನೀತ್ ಅವರ ನೆನಪನ್ನು ತ್ಯಜಿಸಿ ಬಾಳುವುದು ಅವರ ಕೋಟ್ಯಂತರ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಅಂಥಹವರಲ್ಲಿ ಪುನೀತ್ ರಾಜ್ಕುಮಾರ್ ಅವರ ಅಣ್ಣ ರಾಘವೇಂದ್ರ ರಾಜ್ಕುಮಾರ್ ಸಹ ಒಬ್ಬರು.
ಪುನೀತ್ ರಾಜ್ಕುಮಾರ್ ಕಾಲವಾಗುವ ವೇಳೆಗೆ ಆರೋಗ್ಯ ಸಮಸ್ಯೆಯಿಂದ ದೈಹಿಕ ಸಾಮರ್ಥ್ಯಗಳನ್ನು ತುಸು ಮಟ್ಟಿಗೆ ಕಳೆದುಕೊಂಡಿದ್ದ ರಾಘವೇಂದ್ರ ರಾಜ್ಕುಮಾರ್ ಮಾನಸಿಕ ಆರೋಗ್ಯವನ್ನು ಗಟ್ಟಿಯಾಗಿ ಕಾಪಾಡಿಕೊಂಡಿದ್ದರು. ಅಪ್ಪು ಬಗ್ಗೆ ಅಪಾರ ಪ್ರೀತಿ ಗೌರವ ಹೊಂದಿರುವ ರಾಘವೇಂದ್ರ ರಾಜ್ಕುಮಾರ್, ಅಪ್ಪು ಅಗಲಿಕೆಯಿಂದ ಶೋಕಸಾಗರದಲ್ಲಿ ಮುಳುಗಿದ್ದ ಅವರ ಅಭಿಮಾನಿಗಳಿಗೆ, ಅವರ ಕುಟುಂಬದವರಿಗೆ ಆಪ್ತೇಷ್ಟರಿಗೆ ಸಾಂತ್ವಾನ ಹೇಳು ಕಾರ್ಯ ಮಾಡಿದರು. ಅದಾದ ನಂತರ ಅಪ್ಪು ಅಭಿಮಾನಿಗಳ ಗುಂಪಿನ ನಾಯಕನಂತೆ ಅಭಿಮಾನಿಗಳನ್ನು ಸರಿದಾರಿಯಲ್ಲಿ ನಡೆಸುವ ಯತ್ನವನ್ನು ಮಾಡುತ್ತಿದ್ದಾರೆ.
ಅಭಿಮಾನಿ ಆಗಿರುವ ರಾಘವೇಂದ್ರ ರಾಜ್ಕುಮಾರ್, ಪ್ರತಿದಿನವೂ ಅಪ್ಪುವಿನ ಭಾವಚಿತ್ರವನ್ನು ಶರ್ಟ್ಗೆ ಸಿಕ್ಕಿಸಿಕೊಂಡು ಓಡಾಡುತ್ತಿದ್ದರು. ಯಾವುದೇ ಕಾರ್ಯಕ್ರಮಕ್ಕೆ ಹೋದರು ಎದೆಯ ಮೇಲೆ ಅಪ್ಪು ಚಿತ್ರವೊಂದು ಇದ್ದೇ ಇರುತ್ತಿತ್ತು. ಆದರೆ ಈಗ ರಾಘವೇಂದ್ರ ರಾಜ್ಕುಮಾರ್ ಅವರು ತಮ್ಮ ಈ ವಯಸ್ಸಿನಲ್ಲಿ, ಆರೋಗ್ಯ ಸಮಸ್ಯೆಗಳ ನಡುವೆ ಸಹೋದರ ಪುನೀತ್ ರಾಜ್ಕುಮಾರ್ ಹಾಗೂ ಅವರ ಮಕ್ಕಳ ಹೆಸರನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.
ಅಪ್ಪು, ಟೊಟೊ ಮತ್ತು ನುಕ್ಕಿ ಎಂದು ಮೂರು ಹೆಸರುಗಳನ್ನು ರಾಘವೇಂದ್ರ ರಾಜ್ಕುಮಾರ್ ತಮ್ಮ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಹೆಸರುಗಳನ್ನು ಹಚ್ಚೆ ಹಾಕಿಸಿಕೊಂಡಿರುವ ರಾಘವೇಂದ್ರ ರಾಜ್ಕುಮಾರ್ ಅವರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ತಮಗೆ ಹಚ್ಚೆ ಹಾಕಿದ ಯುವ ಟ್ಯಾಟೂ ಆರ್ಟಿಸ್ಟ್ ಜೊತೆಗೂ ರಾಘವೇಂದ್ರ ರಾಜ್ಕುಮಾರ್ ಫೊಟೊ ತೆಗೆಸಿಕೊಂಡಿದ್ದಾರೆ. ಈ ವಯಸ್ಸಿನಲ್ಲಿ, ಆರೋಗ್ಯ ಸಮಸ್ಯೆಗಳ ನಡುವೆ ಸಹೋದರ ಹಾಗೂ ಅವರ ಮಕ್ಕಳ ಹೆಸರನ್ನು ಹಚ್ಚೆ ಹಾಕಿಸಿಕೊಂಡ ರಾಘವೇಂದ್ರ ಅವರ ಪ್ರೀತಿಯನ್ನು ಅಪ್ಪು ಅಭಿಮಾನಿಗಳು ಕೊಂಡಾಡಿದ್ದಾರೆ. ಅಂದಹಾಗೆ, ಟೊಟೊ ಹಾಗೂ ನುಕ್ಕಿ ಎಂಬುದು ಅಪ್ಪು ಅವರ ಇಬ್ಬರು ಹೆಣ್ಣು ಮಕ್ಕಳ ನಿಕ್ ನೇಮ್.
ಪುನೀತ್ ರಾಜ್ಕುಮಾರ್ ಕಾಲವಾದ ಬಳಿಕ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಅಭೂತಪೂರ್ವ ಬೆಂಬಲವನ್ನು ರಾಘವೇಂದ್ರ ರಾಜ್ಕುಮಾರ್ ಹಾಗೂ ಅವರ ಮಕ್ಕಳು ನೀಡುತ್ತಿದ್ದಾರೆ. ಅಪ್ಪು ಅವರ ಇಬ್ಬರು ಹೆಣ್ಣು ಮಕ್ಕಳ ಬಗ್ಗೆಯಂತೂ ರಾಘವೇಂದ್ರ ರಾಜ್ಕುಮಾರ್ ಅವರಿಗೆ ಮೊದಲಿನಿಂದಲೂ ಬಹಳ ಮಮಕಾರ. ಅಪ್ಪು ಕಾಲವಾದ ಸಂದರ್ಭದಲ್ಲಿ ಅವರ ಮಕ್ಕಳನ್ನು ನೆನೆದು ರಾಘವೇಂದ್ರ ರಾಜ್ಕುಮಾರ್ ಬಹಳ ದುಖಃ ವ್ಯಕ್ತಪಡಿಸಿದ್ದರು.