ನವದೆಹಲಿ : ಮಣಿಪುರ ವಿಚಾರವಾಗಿ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಮಂಡನೆ ಮಾಡಿರುವ ಅವಿಶ್ವಾಸ ನಿರ್ಣಯದ ವಿಚಾರವಾಗಿ ಉತ್ತರ ನೀಡಿದ ಪ್ರಧಾನಿ ಮೋದಿ, ವಿಪಕ್ಷಗಳ ಇಂಡಿಯಾ ಮೈತ್ರಿ ಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅದರಲ್ಲೂ ವಿಪಕ್ಷಗಳ ನೇತೃತ್ವ ವಹಿಸಿರುವ ಕಾಂಗ್ರೆಸ್ ಪಕ್ಷ ಹಾಗೂ ಗಾಂಧಿ ಪರಿವಾರವನ್ನೇ ಗುರಿಯಾಗಿಸಿ ಪ್ರಧಾನಿ ಮೋದಿ ಅಬ್ಬರಿಸಿದರು.
ಗಾಂಧಿ ಪರಿವಾರದ ವಿರುದ್ಧ ಪ್ರಧಾನಿ ಮೋದಿ ನಡೆಸಿದ ವಾಗ್ದಾಳಿಯ ಪ್ರಮುಖಾಂಶಗಳು ಇಂತಿವೆ:
ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ ಸೇರಿದಂತೆ ಕ್ರೀಡೆವರೆಗೂ ಎಲ್ಲೆಡೆ ಗಾಂಧಿ ಕುಟುಂಬದ ಹೆಸರನ್ನೇ ಈವರೆಗೂ ಇಡಲಾಗಿತ್ತು
ಚುನಾವಣೆಯಲ್ಲಿ ದೇಶದಮತದಾರರ ಗಮನ ಸೆಳೆಯಲು ‘ಗಾಂಧಿ’ ಹೆಸರನ್ನು ದುರ್ಬಳಕೆ ಮಾಡಿಕೊಂಡರು
ಹುಟ್ಟುಹಬ್ಬ ಹಾಗೂ ತಮ್ಮ ಬಟ್ಟೆಗಳನ್ನು ಒಗೆದು ಇಸ್ತ್ರಿ ಮಾಡಿಸಲು ವಿಮಾನ ಬಳಸುತ್ತಿದ್ದರು. ನಾವು ಬಡವರಿಗೆಔಷಧ ಹಾಗೂ ಅಗತ್ಯ ವಸ್ತು ರವಾನೆಗೆ ವಿಮಾನ ಬಳಸುತ್ತಿದ್ದೇವೆ
ದೇಶದ ಸಂಸತ್‌ನಲ್ಲಿ ಗಾಂಧಿ ಪರಿವಾರ ಬಿಟ್ಟರೆ ಬೇರೆಯವರ ಫೋಟೋ, ಪ್ರತಿಮೆಗಳನ್ನು ಸ್ಥಾಪಿಸಲು ಸಿದ್ದರಿರಲಿಲ್ಲ
ಕಾಂಗ್ರೆಸ್ ಪಕ್ಷವು ವಿಫಲವಾದ ಉತ್ಪನ್ನವನ್ನೇ ಪದೇ ಪದೇ ‘ಲಾಂಚ್’ ಮಾಡಲು ಪ್ರಯತ್ನ ಪಡುತ್ತಿದೆ (ರಾಹುಲ್ ಗಾಂಧಿ ವಿರುದ್ಧ ಪರೋಕ್ಷ ವಾಗ್ದಾಳಿ)
ಕಾಂಗ್ರೆಸ್ ಪಕ್ಷವು ‘ಪರಿವಾರವಾದ’ ಹಾಗೂ ‘ದರ್ಬಾರ್ ವಾದ’ದ ಪದ್ದತಿಯಲ್ಲಿ ನಂಬಿಕೆ ಇರಿಸಿದೆ
ಕಾಂಗ್ರೆಸ್ ಪಕ್ಷದ ಪರಿವಾರ ರಾಜಕಾರಣವು ಡಾ. ಬಿ. ಆರ್. ಅಂಬೇಡ್ಕರ್, ಬಾಬು ಜಗಜೀವನ ರಾಂ ಹಾಗೂ ಚಂದ್ರಶೇರ್ ಅವರ ಹಕ್ಕುಗಳನ್ನು ಕಿತ್ತುಕೊಂಡರು. ಅಂಬೇಡ್ಕರ್ ಅವರ ವೇಷ ಭೂಷಣದ ಬಗ್ಗೆ ಕಾಂಗ್ರೆಸ್ಸಿಗರು ಗೇಲಿ ಮಾಡಿದರು
ಕಾಂಗ್ರೆಸ್‌ನ ಕುಟುಂಬ ರಾಜಕಾರಣದ ಪಾಪಗಳೇ ಅವರ ಇಂದಿನ ಕುಸಿತಕ್ಕೆ ಕಾರಣ
ನಮ್ಮ ಸಂವಿಧಾನವು ಕುಟುಂಬ ರಾಜಕಾರಣವನ್ನು ವಿರೋಧಿಸುತ್ತದೆ. ಇದು ಸಾಮಾನ್ಯ ಜನರ ಹಕ್ಕುಗಳಿಗೆ ಹಾನಿ ಉಂಟು ಮಾಡುತ್ತದೆ
ಭಾರತ ಮಾತೆಯ ಸಾವನ್ನು ವಿರೋಧ ಪಕ್ಷಗಳು ಬಯಸುತ್ತಿವೆ. ಇವರ ಮನಸ್ಸಿನಲ್ಲಿ ಪ್ರಜಾಪ್ರಭುತ್ವದ ಹತ್ಯೆಯ ಕಲ್ಪನೆ ಇದೆ. ಅದೇ ಮಾತುಗಳನ್ನು ಆಡುತ್ತಿದ್ದಾರೆ (ರಾಹುಲ್ ಗಾಂಧಿ ಭಾಷಣಕ್ಕೆ ತಿರುಗೇಟು)
ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ವೇಳೆ ದೇಶದ ಒಳಗೇ ಹಲವೆಡೆ ವಾಯು ದಾಳಿ ನಡೆದಿವೆ. 1966ರಲ್ಲಿ ಮಿಜೋರಾಂನಲ್ಲಿ ವಾಯು ದಾಳಿ ನಡೆಸಿದ್ದರು, ಅಕಾಲ್ ತಕ್ತ್ ಮೇಲೆ ದಾಳಿ ನಡೆಸಿದ್ದರು ಎಂದು ಇತಿಹಾಸ ಸ್ಮರಿಸಿದ ಪ್ರಧಾನಿ ಮೋದಿ
ಪಂಡಿತ್ ಜವಹರಲಾಲ್ ನೆಹರೂ ಅವರು ಚೀನಾ ವಿರುದ್ಧದ ಸಮರದ ವೇಳೆ ಮಾಡಿದ ಆಕ್ಷೇಪಾರ್ಹ ರೇಡಿಯೋ ಭಾಷಣ ಸ್ಮರಿಸಿದ ಪ್ರಧಾನಿ ಮೋದಿ
ಲೋಹಿಯಾ ಅವರು ನೆಹರೂ ವಿರುದ್ಧ ಮಾಡಿದ್ದ ಆರೋಪ ಸ್ಮರಿಸಿದ ಪ್ರಧಾನಿ ಮೋದಿ – ಈಶಾನ್ಯ ರಾಜ್ಯಗಳ ಅಭಿವೃದ್ದಿಯನ್ನು ನೆಹರೂ ಅವರು ಬೇಕಂತಲೇ ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದ ಲೋಹಿಯಾ.
ಇದಲ್ಲದೆ ಕಾಂಗ್ರೆಸ್ ಪಕ್ಷದ ಸಂಸ್ಥಾಪಕರೂ ಕೂಡಾ ವಿದೇಶೀಯರು ಎಂದು ಇತಿಹಾಸ ನೆನಪಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷವು ದೇಶದ ತ್ರಿವರ್ಣ ಧ್ವಜವನ್ನು ತನ್ನದನ್ನಾಗಿ ಮಾಡಿಕೊಳ್ತು ಎಂದು ಕಿಡಿ ಕಾರಿದರು. ಇದೇ ವೇಳೆ, ವಿಪಕ್ಷಗಳ ಇಂಡಿಯಾ ಮೈತ್ರಿ ಕೂಟದ ವಿರುದ್ಧವೂ ಹರಿಹಾಯ್ದ ಪ್ರಧಾನಿ ಮೋದಿ, ಮೈತ್ರಿ ಕೂಟದ ಹೆಸರು ಇಂಡಿಯಾ ಅಲ್ಲ, ಘಮಂಡಿಯಾ ಎಂದು ಹೇಳಿದರು.
ಮಣಿಪುರದ ಜನತೆ ಜೊತೆಗೆ ಇಡೀ ದೇಶ ಹಾಗೂ ಸರ್ಕಾರ ಎಂದೆಂದಿಗೂ ಇರುತ್ತದೆ ಎಂದು ಹೇಳಿದ ಪ್ರಧಾನಿ ಮೋದಿ, ಶೀಘ್ರದಲ್ಲೇ ಇಲ್ಲಿ ಶಾಂತಿ ನೆಲೆಸುತ್ತದೆ ಎಂದು ಆಶ್ವಾಸನೆ ನೀಡಿದರು. ದೇಶದ ಪ್ರಜಾಪ್ರಭುತ್ವ ಹಾಗೂ ಭಾರತ ಮಾತೆಯ ವಿರುದ್ದ ಮಾತುಗಳನ್ನು ಆಡುವವರಿಗೆ ದೇಶದ ಜನರೇ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು. ಮಣಿಪುರ ವಿಚಾರವಾಗಿ ಕೇಂದ್ರ ಗೃಹ ಸಚಿವರು ಸದನಕ್ಕೆ ಸಮಗ್ರ ಮಾಹಿತಿ ನೀಡಿದ್ದಾರೆ. ಭಾರತವನ್ನು ವಿಭಜಿಸುವ ಶಕ್ತಿಗಳ ವಿರುದ್ಧ ಸರ್ಕಾರ ಎಂದೆಂದಿಗೂ ಕಠಿಣವಾಗಿ ವರ್ತಿಸುತ್ತದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.