ಬೆಂಗಳೂರು : ಬಹುನಿರೀಕ್ಷಿತ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿಯುವುದನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಈ ಚಂದ್ರಯಾನ-3 ವಿಚಾರವಾಗಿ ನಟ ಪ್ರಕಾಶ್ ರಾಜ್ ಮಾಡಿದ ಕಾರ್ಟೂನ್ ಟ್ವೀಟ್ ದೇಶವ್ಯಾಪಿ ಸಾಕಷ್ಟು ಚರ್ಚೆಯಾಗುತ್ತಿದೆ. ಪ್ರಕಾಶ್ ರಾಜ್ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಕುರಿತು ಬಿಜೆಪಿ ಶಾಸಕ ಆರ್ ಅಶೋಕ್ ಮಾತನಾಡಿ ಪ್ರಕಾಶ್ ರೈ ಒಬ್ಬ ವಿಕೃತ ಮನುಷ್ಯ. ನಾನು ಕೂಡ ಕಾರ್ಟೂನ್ ನೋಡಿದ್ದೇನೆ. ಟೀ ಮಾರುವ ಮೂಲಕ ವಿಜ್ಞಾನಿಗಳನ್ನು ಟೀಕೆ ಮಾಡುವುದನ್ನು ನೋಡಿದರೇ ಇದು ಕೀಳು ಪ್ರವೃತ್ತಿ ಅನಿಸುತ್ತೆ ಎಂದು ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸಾಕಷ್ಟು ಕಲಾವಿದರನ್ನು ನೋಡಿದ್ದೇನೆ. ಇತನೂ ಸಹ ಕಲಾವಿದ. ಆದರೆ ಡಾ.ರಾಜಕುಮಾರ್ ಹಾಗೂ ರಜನಿಕಾಂತ್ ಅವರೆಲ್ಲಾ ಉತ್ತಮ ಕಲಾವಿದರು. ಆದರೆ ಇವರನ್ನು ಕಲಾವಿದ ಅಂತ ಕರೆಯೋಕೆ ಆಗಲ್ಲ. ಸಿನಿಮಾ ರೀತಿಯಲ್ಲೇ ನಿಜ ಜೀವನದಲ್ಲೂ ಪ್ರಕಾಶ್ ರೈ ವಿಲನ್ ಆಗಿದ್ದಾನೆ ಎಂದು ವಾಗ್ದಾಳಿ ಮಾಡಿದರು.
ಇನ್ನು ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ಸರ್ಕಾರ ಸರ್ವ ಪಕ್ಷ ಸಭೆ ಕರೆದ ವಿಚಾರವಾಗಿ ಮಾತನಾಡಿದ ಅವರು ಕೊನೆಗೂ ಸಭೆ ಕರೆದಿದ್ದಾರೆ. ಸ್ಟಾಲಿನ್ ಜೊತೆಗೆ ಒಳ ಒಪ್ಪಂದ ಇದು. ನೀರು ಬಿಟ್ಟ ಮೇಲೆ ಸಭೆ ಕರೆದಿದ್ದಾರೆ. ಮೇಕೆ ದಾಟು ವಿಚಾರವಾಗಿ ಪ್ರತಿಭಟನೆ ಮಾಡಿದರು. ಅಧಿಕಾರ ಬಂದ ಮೇಲೆ ಕಾವೇರಿನೂ ಇಲ್ಲ ಮೇಕೆದಾಟು ಇಲ್ಲ. ಸರ್ಕಾರ ನೀರು ಬಿಟ್ಟು ಕರ್ನಾಟಕದ ರೈತರಿಗೆ ಸರ್ಕಾರ ಅನ್ಯಾಯ ಮಾಡಿದೆ ಎಂದು ಗರಂ ಆದರು.