Mysore
25
few clouds

Social Media

ಮಂಗಳವಾರ, 27 ಜನವರಿ 2026
Light
Dark

ಸಂಸತ್‌ಗೆ ನುಗ್ಗಿದ ಮೈಸೂರು ಮೂಲದ ಮನೋರಂಜನ್ ಯಾರು?

ಮೈಸೂರು: ಸಂಸತ್ ಭವನಕ್ಕೆ ನುಗ್ಗಿ ಬಣ್ಣದ ಹೊಗೆ ಸಿಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಅಧಿಕಾರಿಗಳು ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮೈಸೂರಿನ ಮನೋರಂಜನ್, ಸಾಗರ್ ಶರ್ಮಾ, ಅಮೋಲ್ ಶಿಂಧೆ, ನೀಲಮ್ ಸೇರಿದಂತೆ ಒಟ್ಟು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಇಬ್ಬರು ಯುವಕರಲ್ಲಿ ಇಬ್ಬರು ಕರ್ನಾಟಕದವರಾಗಿದ್ದು, ಈ ಪೈಕಿ ಮನೋರಂಜನ್ ಎಂಬಾತ ಮೈಸೂರು ಮೂಲದ ಇಂಜಿನಿಯರ್ ಪದವೀಧರನಾಗಿದ್ದು, ಇನ್ನೊಬ್ಬ ಸಾಗರ್ ಶರ್ಮಾ ಎಂದು ಗುರುತಿಸಲಾಗಿದೆ. 

ಮೈಸೂರಿನ ಸೇಂಟ್ ಜೋಸೆಫ್‌ನಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಮಾಡಿದ್ದ ಮನೋರಂಜನ್‌ ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯಸಿ ವ್ಯಾಸಂಗ ಮಾಡಿದ್ದ ಹಾಗೂ ಬಿಐಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ವಿದ್ಯಾಭ್ಯಾಸವನ್ನು ಪೂರೈಸಿದ್ದ. 

ಇನ್ನು ಮನೆಯಲ್ಲಿ ವಿಚಾರಣೆ ನಡೆಸಿದ ಬಳಿಕ ಮನೋರಂಜನ್‌ ಬೆಂಗಳೂರಿಗೆ ತೆರಳುತ್ತಿದ್ದೇನೆ, ಮೂರು ದಿನಗಳ ಬಳಿಕ ಮನೆಗೆ ಬರುತ್ತೇನೆ ಎಂದು ಹೇಳಿ ತೆರಳಿದ್ದನಂತೆ. ತನಿಖಾಧಿಕಾರಿಗಳು ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಆತ ಕ್ರಾಂತಿಕಾರಿಗಳ ವಿಚಾರಧಾರೆ ಇರುವ ಪುಸ್ತಕಗಳನ್ನು ಓದುತ್ತಿದ್ದ ಎಂಬುದು ತಿಳಿದುಬಂದಿದೆ.  ದ ಫರ್ಗಟನ್‌ ಆರ್ಮಿ, ಐ ಆಮ್‌ ಎ ಟ್ರೋಲ್‌ ಹಾಗೂ ಸುಭಾಷ್‌ ಚಂದ್ರ ಬೋಸ್‌ರ ದ ಇಂಡಿಯನ್‌ ಸ್ಟ್ರಗಲ್‌ ಪುಸ್ತಕಗಳು ಲಭ್ಯವಾಗಿರುವ ನೂರಾರು ಪುಸ್ತಕಗಳ ಪೈಕಿ ಪ್ರಮುಖದ್ದಾಗಿವೆ. 

ಮನೋರಂಜನ್ ತಂದೆ ಹೇಳೋದೇನು?
ಸಂಸತ್ ಭವನಕ್ಕೆ ನುಗ್ಗಿ ಗೊಂದಲ ಸೃಷ್ಟಿಸಿದ ಪ್ರಕರಣ ವರದಿಯಾಗುತ್ತಿದ್ದಂತೆ ಮೈಸೂರಿನಲ್ಲಿರುವ ಮನೋರಂಜನ್ ಮನೆಗೆ ಎಸಿಪಿ ಗಜೇಂದ್ರ ಪ್ರಸಾದ್, ವಿಜಯನಗರ ಇನ್ಸ್ ಪೆಕ್ಟರ್ ಸುರೇಶ್ ಭೇಟಿ ನೀಡಿ ಮನೋರಂಜನ್ ತಂದೆ ದೇವರಾಜೇಗೌಡ ಅವರಿಂದ ಮಾಹಿತಿ ಪಡೆದಿದ್ದಾರೆ. “ನನ್ನ ಮಗ ಬಿಇ ಓದಿದ್ದು, ದೆಹಲಿ-ಬೆಂಗಳೂರು ಅಂತ ಓಡಾಡುತ್ತಿರುತ್ತಾನೆ. ಆದರೆ ಆತ ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಎಂಬುದು ಗೊತ್ತಿಲ್ಲ. ಮನೋರಂಜನ್ ಯಾವ ಪಕ್ಷದಲ್ಲೂ ಗುರುತಿಸಿಕೊಂಡಿಲ್ಲ. ಆತ 2014ರಲ್ಲಿ ಬಿಇ ಮುಗಿಸಿದ್ದ. ನಾನೊಬ್ಬ ರೈತ, ಆತ ಯಾಕಾಗಿ ಈ ರೀತಿ ಮಾಡಿದ್ದಾನೆ ಎಂಬುದು ಗೊತ್ತಿಲ್ಲ. ಆತ ತಪ್ಪು ಮಾಡಿದ್ದರೆ ಆತನನ್ನು ಗಲ್ಲಿಗೇರಿಸಲಿ” ಎಂದು ತಂದೆ ಪ್ರತಿಕ್ರಿಯೆ ನೀಡಿದ್ದಾರೆ.
ಸಂಸತ್ ಗೆ ನುಗ್ಗಿದ ಇಬ್ಬರು ಮೈಸೂರು ಮೂಲದವರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇಬ್ಬರೂ ಸಂಸದ ಪ್ರತಾಪ್ ಸಿಂಹ ಅವರ ಹೆಸರಿನಲ್ಲಿ ಸಂಸತ್ ವೀಕ್ಷಕರ ಗ್ಯಾಲರಿ ಪಾಸ್ ಪಡೆದಿದ್ದಾರೆನ್ನಲಾಗಿದೆ. ಮನೋರಂಜನ್‌ ಕುಟುಂಬ ಮೂಲತಃ ಹಾಸನದವರಾಗಿದ್ದು, ಹಲವು ವರ್ಷಗಳಿಂದ ಮೈಸೂರಿನ ವಿಜಯನಗರದಲ್ಲಿ ವಾಸವಿದ್ದಾರೆ ಎಂದು ತಿಳಿದುಬಂದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!