ನವದೆಹಲಿ: 292 ಮಂದಿಯ ಸಾವಿಗೆ ಕಾರಣವಾಗಿದ್ದ ಒಡಿಶಾ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮೂವರು ರೈಲ್ವೇ ಅಧಿಕಾರಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಒಡಿಶಾದ ಬಾಲಸೋರ್ ರೈಲು ದುರಂತಕ್ಕೆ ಸಂಬಂಧಿಸಿದಂತೆ ಮೂವರು ರೈಲ್ವೆ ಅಧಿಕಾರಿಗಳನ್ನ ಸಿಬಿಐ ಬಂಧಿಸಿದ್ದು, ಹಿರಿಯ ಸೆಕ್ಷನ್ ಎಂಜಿನಿಯರ್ ಅರುಣ್ ಕುಮಾರ್ ಮಹಾಂತ, ಮೊಹಮ್ಮದ್ ಅಮೀರ್ ಖಾನ್, ಸೆಕ್ಷನ್ ಎಂಜಿನಿಯರ್ ಮತ್ತು ತಂತ್ರಜ್ಞ ಪಪ್ಪು ಕುಮಾರ್’ನನ್ನ ಸಿಬಿಐ ಬಂಧಿಸಿದೆ ಎಂದು ಹೇಳಲಾಗಿದೆ.
#WATCH | Bhubaneswar: Three Railways officials arrested in connection with the Balasore train accident- Senior Section Engineer Arun Kumar Mohanta, Section Engineer Mohammad Amir Khan and Technician Pappu Kumar have been sent to CBI custody for 5 days. pic.twitter.com/W2FoF0SfBf
— ANI (@ANI) July 7, 2023
ಈ ಹಿಂದೆ ಈ ಭೀಕರ ಅಪಘಾತದ ಕುರಿತು ತನಿಖಾ ವರದಿ ತಯಾರಿಸಿದ್ದ ಅಧಿಕಾರಿಗಳು ದುರಂತದಲ್ಲಿ ಸಿಬ್ಬಂದಿ ಲೋಪದೋಷವೇ ದುರಂತಕ್ಕೆ ಕಾರಣ ಎಂದು ಉಲ್ಲೇಖಿಸಿದ್ದರು. ಈ ವರದಿ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಈ ವರದಿ ಬಗ್ಗೆ ಅಧಿಕಾರಿಗಳು ಪ್ರತಿಕ್ರಿಯೆ ಕೂಡ ನೀಡಿರಲಿಲ್ಲ. ಆದರೆ ಇದೀಗ ಮೂವರು ಅಧಿಕಾರಿಗಳನ್ನು ಬಂಧಿಸುವ ಮೂಲಕ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗೆ ಮತ್ತಷ್ಟು ಇಂಬು ದೊರೆತಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಐಪಿಸಿ ಸೆಕ್ಷನ್ 304ರ ಅಡಿಯಲ್ಲಿ ತಪ್ಪಿತಸ್ಥ ನರಹತ್ಯೆಯ ಪ್ರಕರಣವನ್ನ ದಾಖಲಿಸಲಾಗಿದೆ. ಶಿಕ್ಷೆಯು ಅಪರಾಧದ ಗುರುತ್ವಾಕರ್ಷಣೆಗೆ ಅನುಗುಣವಾಗಿ ಜೀವಾವಧಿ ಶಿಕ್ಷೆ ಮತ್ತು ದಂಡ ಅಥವಾ ಕಠಿಣ ಸೆರೆವಾಸವನ್ನ ಒಳಗೊಂಡಿರುತ್ತದೆ ಎಂದು ಕೇಂದ್ರ ತನಿಖಾ ಸಂಸ್ಥೆ ತಿಳಿಸಿದೆ.
ಜೂನ್ 2 ರಂದು ಒಡಿಶಾದ ಬಾಲೇಶ್ವರ್ ಜಿಲ್ಲೆಯ ಬಹನಾಗ್ ರೈಲು ನಿಲ್ದಾಣದ ಬಳಿ ಕೊಲ್ಕತ್ತದಿಂದ ಚೆನ್ನೈಗೆ ಹೊರಟಿದ್ದ ಕೊರೋಮಂಡಲ್ ಎಕ್ಸ್‌ಪ್ರೆಸ್ ರೈಲು ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಇದೇ ಮಾರ್ಗದ ಪಕ್ಕದ ಟ್ರ್ಯಾಕ್‌ನಲ್ಲಿ ಸಂಚರಿಸುತ್ತಿದ್ದ ಬೆಂಗಳೂರು– ಹೌರಾ ಎಕ್ಸ್‌ಪ್ರೆಸ್ ರೈಲಿಗೂ ಡಿಕ್ಕಿಯಾಗಿತ್ತು. ಘಟನೆಯಲ್ಲಿ 291 ಪ್ರಯಾಣಿಕರು ಮೃತಪಟ್ಟು, ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.
ಘಟನೆಯಾದ ಮೂರು ದಿನಗಳ ನಂತರ ಈ ಪ್ರಕರಣದ ತನಿಖೆಯನ್ನು ರೈಲ್ವೆ ಮಂಡಳಿ ಸಿಬಿಐಗೆ ವಹಿಸಿತ್ತು. ಮಾನವ ಲೋಪವೇ ಈ ಭೀಕರ ದುರಂತಕ್ಕೆ ಕಾರಣ ಎಂದು ಸಿಬಿಐನ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.