Mysore
21
overcast clouds
Light
Dark

ವರುಣಾರ್ಭಟಕ್ಕೆ ತತ್ತರಿಸಿದ ಉತ್ತರ ಭಾರತ

ಹೊಸದಿಲ್ಲಿ : ಉತ್ತರ ಭಾರತದ ಹಲವು ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಮುಂದಿನ ಕೆಲವು ದಿನ ವರುಣನ ಆರ್ಭಟ ಮತ್ತಷ್ಟು ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ದೆಹಲಿ, ಹರ್ಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿಯಿಂದ ವಿಪರೀತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಡಿ) ಹೇಳಿದೆ.
ಉತ್ತರ ಭಾರತದ ಮೇಲೆ ಪಶ್ಚಿಮ ಮಾರುತಗಳು ವ್ಯಾಪಿಸಿದ್ದು, ರಾಜಧಾನಿ ದಿಲ್ಲಿ ಸೇರಿದಂತೆ ಅನೇಕ ಭಾಗಗಳಲ್ಲಿ ಶನಿವಾರ ತೀವ್ರ ಮಳೆಗೆ ಕಾರಣವಾಗಿದೆ. ಈ ಮುಂಗಾರು ಅವಧಿಯ ಮೊದಲ ಭಾರಿ ಮಳೆ ಇದಾಗಿದೆ.

ರಾಷ್ಟ್ರ ರಾಜಧಾನಿಯ ಅನೇಕ ಭಾಗಗಳಲ್ಲಿ ರಸ್ತೆಗಳು ಜಲಾವೃತವಾಗಿರುವುದರಿಂದ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ. ನಗರದಲ್ಲಿ ಕಳೆದ 24 ಗಂಟೆಗಳಲ್ಲಿ 153 ಮಿಮೀ ಮಳೆ ಸುರಿದಿದೆ. 41 ವರ್ಷಗಳ ಬಳಿಕ, 1982ರ ಜುಲೈ ನಂತರ ದಿನವೊಂದರಲ್ಲಿ ದಾಖಲಾದ ಅತ್ಯಧಿಕ ಮಳೆ ಪ್ರಮಾಣ ಇದಾಗಿದೆ. 2003ರ ಜುಲೈ 10ರಂದು ನಗರದಲ್ಲಿ 133.4 ಮಿಮೀ ಮಳೆ ಸುರಿದಿತ್ತು. 1958ರ ಜುಲೈ 21ರಂದು ಸುರಿದಿದ್ದ 266.2 ಮಿಮೀ ಸಾರ್ವಕಾಲಿಕ ದಾಖಲೆಯಾಗಿದೆ. ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಪಾರ್ಕ್‌, ಅಂಡರ್‌ಪಾಸ್, ಮಾರುಕಟ್ಟೆಗಳು ಮಾತ್ರವಲ್ಲದೆ, ಆಸ್ಪತ್ರೆ ಆವರಣಗಳೂ ನದಿಯಂತಾಗಿವೆ.

ರಸ್ತೆಯಲ್ಲಿ ಮೊಣಕಾಲುದ್ದದ ನೀರಿನಲ್ಲಿ ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡುವುದು ಕಂಡುಬಂತು. ನಗರದ ಚರಂಡಿ ಮೂಲಸೌಕರ್ಯದ ಬಗ್ಗೆ ಇದು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಗುರುಗ್ರಾಮದ ಕೆಲವು ಪ್ರದೇಶಗಳಲ್ಲಿ ಕೂಡ ನೀರು ತುಂಬಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇಲ್ಲಿ ಕೂಡ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ