Mysore
17
broken clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಎಂಎಲ್ಎ, ಎಂಎಲ್‌ಸಿ ಏನೂ ಅಲ್ಲದ ಬೋಸರಾಜುಗೆ ಸಚಿವ ಸ್ಥಾನ

ಬೆಂಗಳೂರು : ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಿದಕ್ಕಿಂತ ಕಷ್ಟದ ಕೆಲಸವೆಂದರೆ ಸಚಿವ ಸ್ಥಾನ ನೀಡುವುದು, ಯಾರನ್ನು ಸಂಪುಟದಲ್ಲಿ ಸೇರಿಸಿಕೊಳ್ಳಬೇಕು, ಯಾರನ್ನು ಬಿಡಬೇಕು ಎಂಬ ಗೊಂದಲದ ನಡುವೆಯೇ ಅಚ್ಚರಿಯ ಬೆಳವಣಿಗೆಯೊಂದು ಕಾಂಗ್ರೆಸ್‌ನಲ್ಲಿ ನಡೆದಿದೆ. ಕಾಂಗ್ರೆಸ್ ಶುಕ್ರವಾರ ರಾತ್ರಿ ಬಿಡುಗಡೆ ಮಾಡಿರುವ ಸಚಿವರ ಪಟ್ಟಿಯಲ್ಲಿನ ಹೆಸರೊಂದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಅದೇ ಎನ್‌ಎಸ್ ಬೋಸರಾಜು!.

ರಾಯಚೂರು ಜಿಲ್ಲೆಯ ಮಾನ್ವಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ರಾಜು ಕ್ಷತ್ರಿಯ ಸಮುದಾಯದ ನಾಯಕ ಎನ್‌ಎಸ್ ಬೋಸರಾಜು ಈ ಬಾರಿಯ ಸಿದ್ದರಾಮಯ್ಯ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಇದರಲ್ಲಿ ಆಶ್ವರ್ಯ ಪಡುವುದು ಏನು ಎಂದು ಕೇಳುವುದಾದರೆ. ಇವರು ಶಾಸಕರು ಅಲ್ಲ, ಎಂಎಲ್‌ಸಿ ಕೂಡ ಅಲ್ಲ. ಚುನಾವಣೆಯಲ್ಲಿ ಗೆದ್ದು ಸಚಿವ ಸ್ಥಾನಕ್ಕಾಗಿ ಪೈಪೋಟಿ ನೀಡುತ್ತಿದ್ದವರ ಮಧ್ಯೆ ಅದೃಷ್ಟ ಇವರನ್ನು ಹುಡುಕಿ ಬಂದಿದೆ.

ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದ್ದು, 24 ಸಚಿವರು ಶನಿವಾರ ಬೆಳಗ್ಗೆ 11.45ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸರ್ಕಾರದ ಮನವಿಯಂತೆ ಪ್ರಮಾಣವಚನ ಕಾರ್ಯಕ್ರಮಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಸದ್ಯ ರಾಜಭವನಕ್ಕೆ ನೂತನ ಸಚಿವರ ಪಟ್ಟಿ ರವಾನೆಯಾಗಿದೆ. ಈ ಪಟ್ಟಿಯಲ್ಲಿ ಮಾಜಿ ಎಂಎಲ್‌ಸಿ, ಎಐಸಿಸಿಯ ಹಾಲಿ ಕಾರ್ಯದರ್ಶಿ ಬೋಸರಾಜು ಅವರ ಹೆಸರು ಸೇರಿದೆ.

ವಿಧಾನಸಭಾ ಚುನಾವಣೆ ವೇಳೆ ರಾಯಚೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್ ಆಕಾಂಕ್ಷಿ ಆಗಿದ್ದ ಎನ್​.ಎಸ್​. ಬೋಸರಾಜು ಅವರು ಟಿಕೆಟ್ ಸಿಗದ ಬಗ್ಗೆ ತಿಳಿದು ತಮ್ಮ ಮಗ ರವಿ ಬೋಸರಾಜು ಟಿಕೆಟ್ ನೀಡಬೇಕು ಎಂಬ ಬೇಡಿಕೆಯಿಟ್ಟಿದ್ದರು. ಆದರೆ, ಹೈಕಮಾಂಡ್ ಆದೇಶದ ಮೇಲೆ ಸುಮ್ಮನಾಗಿದ್ದರು. ಇವರ ಮೇಲೆ ಹೈಕಮಾಂಡ್‌ಗೆ ಅನುಕಂಪವಿದ್ದು, ಸಚಿವ ಸ್ಥಾನ ನಿಡುವ ಬಗ್ಗೆ ವದಂತಿಗಳು ಹರಡಿದ್ದವು. ಅದಕ್ಕೆ ಕಾಂಗ್ರೆಸ್ ನಾಯಕರೆ ಅಸಮಾಧಾನ ಕೂಡ ಹೊರಹಾಕಿದ್ದರು.

ರಾಯಚೂರು ಜಿಲ್ಲೆಯ ಸಿಂಧನೂರು ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ, ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಹಾಗೂ ಇನ್ನಿಬ್ಬರು ಮುಖಂಡರಾದ ಎ.ವಸಂತ್ ಕುಮಾರ್, ಅಸ್ಲಂ ಪಾಷಾ ಇವರಿಗೆ ಸಚಿವ ಸ್ಥಾನ ಸಿಗಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಪತ್ರ ಬರೆದಿದ್ದರು. ಆದರೂ ಬೋಸರಾಜು ತಮ್ಮ ಪ್ರಭಾವದಿಂದ ಸಚಿವ ಸಂಪುಟ ಸೇರಿದ್ದಾರೆ.

ಮಾಹಿತಿಯ ಪ್ರಕಾರ ಮಾಜಿ ಶಾಸಕ, ತೆಲಂಗಾಣ ರಾಜ್ಯದ ಉಸ್ತುವಾರಿ ಹೊಂದಿರುವ ಎನ್‌ಎಸ್ ಬೋಸರಾಜು ಅವರು ಹೈಕಮಾಂಡ್ ಕೋಟಾದಲ್ಲಿ ಸಚಿವ ಸಂಪುಟ ಸೇರಿಕೊಳ್ಳಲಿದ್ದಾರೆ. ಇವರ ಜೊತೆಗೆ ಇನ್ನು 23 ಶಾಸಕರು ಬೆಳಗ್ಗೆ 11.45ಕ್ಕೆ 24 ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಂಪುಟ ತನ್ನ ಪೂರ್ಣ ಬಲ 34ಕ್ಕೆ ತಲುಪಲಿದೆ. ಬೋಸರಾಜು ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಖುದ್ದು ಮಲ್ಲಿಕಾರ್ಜುನ ಖರ್ಗೆಯವರೇ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಬೋಸರಾಜು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಆರು ತಿಂಗಳವರೆಗೆ ಅವರು ವಿಧಾನಸಭೆ ಅಥವಾ ವಿಧಾನ ಪರಿಷತ್‌ಗೆ ಸದಸ್ಯರಾಗುವ ಅವಕಾಶವಿರುತ್ತದೆ. ಹಾಗಾಗಿ ವಿಧಾನ ಪರಿಷತ್ ಚುನಾವಣೆಗೆ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ನಿಲ್ಲಿಸಿ ಗೆಲ್ಲಿಸಿ ಸಚಿವ ಸ್ಥಾನ ಗಟ್ಟಿ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ತೆಲಂಗಾಣದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಇವರ ಸಚಿವ ಸ್ಥಾನ ಚುನಾವಣೆ ಮೇಲೆ ಪ್ರಭಾವ ಬೀರಲಿದೆ ಎಂಬುದು ಹೈಕಮಾಂಡ್ ತಂತ್ರವಾಗಿದೆ.

24 ನೂತನ ಸಚಿವರ ಅಧಿಕೃತ ಪಟ್ಟಿಯಲ್ಲಿ, ಕೆಲವು ಘಟಾನುಘಟಿ ನಾಯಕರ ಹೆಸರೇ ಬಿಟ್ಟುಹೋಗಿದೆ. ಆರ್.ವಿ.ದೇಶಪಾಂಡೆ, ಬಿಕೆ ಹರಿಪಸ್ರಾದ್, ಟಿ.ಬಿ.ಜಯಚಂದ್ರ ಹಾಗೂ ಸಿಎಂ ಆಪ್ತ ಬಸವರಾಜ ರಾಯರೆಡ್ಡಿ ಅವರಿಗೂ ಸಚಿವ ಸ್ಥಾನ ದಿಕ್ಕಿಲ್ಲ. ಆದರೆ ಬೋಸರಾಜು ಸಂಪುಟ ಸೇರ್ಪಡೆಯಾಗಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!