ಬೆಂಗಳೂರು: ಮತದಾರರ ಓಲೈಕೆಗೆ ಉಡುಗೊರೆಗಳ ಮಹಾಪೂರ, ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣು
ರಾಜ್ಯ ವಿಧಾನಸಭಾ ಚುನಾವಣಾ ಕಾವು ಏರಿದಂತೆ ಮತದಾರರ ಓಲೈಕೆಗೆ ಉಡುಗೊರೆಗಳ ಮಹಾಪೂರವನ್ನೇ ಹರಿಸಲಾಗುತ್ತಿದ್ದು, ರಾಜಧಾನಿಯಲ್ಲಿ ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.
ಚುನಾವಣಾ ದಿನಾಂಕ ಘೋಷಣೆಗೂ ಮುನ್ನವೇ ಅಖಾಡಕ್ಕೆ ಇಳಿದಿರುವ ಟಿಕೆಟ್ ಆಕಾಂಕ್ಷಿಗಳು ಮತದಾರರ ಮನ ಗೆಲ್ಲಲು ನಾನಾ ಕಸರತ್ತು ಮಾಡುತ್ತಿದ್ದಾರೆ. ಕ್ಷೇತ್ರಗಳಲ್ಲಿಮತದಾರರ ಓಲೈಕೆ ಕಸರತ್ತು ಜೋರಾಗಿದ್ದು, ಸಂಭವನೀಯ ಅಭ್ಯರ್ಥಿಗಳು ಪರಸ್ಪರ ಪೈಪೋಟಿಗೆ ಇಳಿದವರಂತೆ ಹಣ, ಉಡುಗೊರೆಗಳನ್ನು ಹಂಚುತ್ತಿದ್ದಾರೆ. ಮತ್ತೊಂದೆಡೆ ಹಬ್ಬ, ವಿಶೇಷ ಸಂದರ್ಭಗಳ ನೆಪ ಮಾಡಿಕೊಂಡು ಮನೆ ಮನೆಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ. ಹೊರವಲಯದ ಪ್ರದೇಶಗಳಲ್ಲಿಗುಂಡು-ತುಂಡಿನ ಸಮಾರಾಧನೆಯ ಪಾರ್ಟಿಗಳು ಜೋರಾಗಿ ನಡೆಯುತ್ತಿವೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಪೊಲೀಸರು ನಗರದೆಲ್ಲೆಡೆ ಕಟ್ಟೆಚ್ಚರ ವಹಿಸಿದ್ದಾರೆ. ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿತಾತ್ಕಾಲಿಕ ಚೆಕ್‌ಪೋಸ್ಟ್ ತೆರೆಯಲಾಗಿದ್ದು, ಎಲ್ಲ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ವಾಹನದ ನೋಂದಣಿ ಸಂಖ್ಯೆ, ಚಾಲಕರ ವೈಯಕ್ತಿಕ ವಿವರ ಸಂಗ್ರಹಿಸಲಾಗುತ್ತಿದೆ. ನಗರವನ್ನು ಸಂಪರ್ಕಿಸುವ ರಸ್ತೆಗಳಲ್ಲೂ ಚೆಕ್‌ಪೋಸ್ಟ್ ಆರಂಭಿಸಲಾಗಿದ್ದು, ಹಣ, ಮದ್ಯ ಸಾಗಣೆ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ದಿನದ 24 ತಾಸೂ ಕಾರ್ಯ ನಿರ್ವಹಿಸುತ್ತಿದ್ದು, ಹೊರ ರಾಜ್ಯದ ನೋಂದಣಿ ಸಂಖ್ಯೆಯಿರುವ ಹಾಗೂ ಅನುಮಾನಾಸ್ಪದ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.
ಟಿಕೆಟ್ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರು ಪೊಲೀಸರ, ಚುನಾವಣಾ ಶಾಖೆ ಸಿಬ್ಬಂದಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಧಿಕಾರಿಗಳ ಕಣ್ತಪ್ಪಿಸಿ ಉಡುಗೊರೆಗಳನ್ನು ಹಂಚಿ ಮತದಾರರಿಗೆ ಬಲೆ ಬೀಸುತ್ತಿದ್ದಾರೆ. ಮತ್ತೆ ಕೆಲ ಆಕಾಂಕ್ಷಿಗಳು ಮತದಾರರಿಗೆ ಮುಂಗಡ ಟೋಕನ್ ಕೊಟ್ಟು ನಿಗದಿತ ಅಂಗಡಿಗಳಲ್ಲಿದಿನಸಿ ಕಿಟ್ ಪಡೆದುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ. ಕೈ ಗಡಿಯಾರ, ಬೆಳ್ಳಿ ದೀಪ, ಹೆಲ್ಮೆಟ್, ಕುಕ್ಕರ್, ಮಿಕ್ಸಿ, ಟಿ.ವಿ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಹಂಚಲಾಗುತ್ತಿದೆ. ಉಡುಗೊರೆ ಹಂಚಿಕೆಯಲ್ಲಿ ಪಕ್ಷೇತರರು ಸಹ ಪೈಪೋಟಿಗೆ ಇಳಿದಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆ ಕಣ್ಗಾವಲು : ಚುನಾವಣಾ ಕಣ ರಂಗೇರುತ್ತಿದ್ದಂತೆ ನಗರದೆಲ್ಲೆಡೆ ತಪಾಸಣೆ ತೀವ್ರಗೊಳಿಸಿರುವ ವಾಣಿಜ್ಯ ತೆರಿಗೆ ಇಲಾಖೆ ಜಾಗೃತ ದಳವು ಸೂಕ್ತ ರಸೀದಿಯಿಲ್ಲದೆ ಸರಕುಗಳ ಸಾಗಣೆ, ಅಕ್ರಮ ದಾಸ್ತಾನು, ಅನುಮಾನಾಸ್ಪದ ಖರೀದಿಗಳ ಮೇಲೆ ನಿಗಾ ಇರಿಸಿ, ಪರಿಶೀಲನೆ ಹೆಚ್ಚಿಸಿದೆ. ಸರಕು ಸಾಗಣೆಗೆ ಸಂಬಂಧಪಟ್ಟಂತೆ ‘ಇ-ಇನ್ವಾಯ್ಸ…’, ‘ಇ-ವೇ ಬಿಲ…’, ಸರಕಿನ ಪ್ರಮಾಣ, ಖರೀದಿದಾರರು, ಪೂರೈಕೆದಾರರು, ವಿಳಾಸ ಇತರೆ ಮಾಹಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಅನುಮಾನಾಸ್ಪದ ಗೋದಾಮುಗಳ ಮೇಲೆ ದಾಳಿ, ಪರಿಶೀಲನೆ, ಗೋದಾಮುಗಳಲ್ಲಿನ ಸರಕಿನ ಪ್ರಮಾಣ, ಮೌಲ್ಯ ಹಾಗೂ ದಾಖಲೆಗಳ ಅಂಕಿ ಸಂಖ್ಯೆ ತಾಳೆ, ಹೊರ ರಾಜ್ಯಗಳಿಂದ ಸಾಗಣೆಯಾಗಿ ಬರುವ ಸರಕಿನ ಮೇಲೆ ಕಣ್ಗಾವಲು ಇಡಲಾಗಿದೆ.
ಜಿಎಸ್‌ಟಿಯಡಿ ನೋಂದಣಿಯಾದ ವ್ಯಾಪಾರ- ವ್ಯವಹಾರಸ್ಥರ ತಿಂಗಳ ಸರಾಸರಿ ವಹಿವಾಟಿನ ಜತೆಗೆ ಚುನಾವಣೆ ಸಂದರ್ಭದಲ್ಲಿನ ವಹಿವಾಟಿನ ವಿವರ ತಾಳೆ ಹಾಕಲಾಗುತ್ತಿದೆ. ಸರಾಸರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿಸರಕು-ಸೇವೆ ಅಥವಾ ಚುನಾವಣಾ ಸರಕುಗಳ ಖರೀದಿ ಇಲ್ಲವೇ ಪೂರೈಕೆ ಕಂಡುಬಂದರೆ ಅವುಗಳನ್ನು ಗುರುತಿಸಿ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಚುನಾವಣಾ ನೀತಿ ಸಂಹಿತೆ ಜಾರಿ ಬಳಿಕ ತಪಾಸಣೆ ಮತ್ತಷ್ಟು ಕಠಿಣಗೊಳಿಸಲು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ರೌಡಿಗಳ ಮೇಲೆ ನಿಗಾ : ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಪೊಲೀಸರು ರೌಡಿ ಆಸಾಮಿಗಳ ಚಲನವಲನಗಳ ಮೇಲೆ ಹೆಚ್ಚಿನ ನಿಗಾ ವಹಿಸಿದ್ದಾರೆ. ರೌಡಿ ಪಟ್ಟಿಯಲ್ಲಿರುವ ವ್ಯಕ್ತಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಠಾಣೆಗೆ ಕರೆತಂದು ಚುನಾವಣೆ ವೇಳೆ ಕಾನೂನುಬಾಹಿರ ಚಟುವಟಿಕೆಗಳಲ್ಲಿಭಾಗಿಯಾಗದಂತೆ ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತಿದೆ. ಜತೆಗೆ ಕುಖ್ಯಾತ ರೌಡಿಗಳನ್ನು ಗಡಿಪಾರು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಗಸ್ತು ಸಿಬ್ಬಂದಿ ನಿಯಮಿತವಾಗಿ ರೌಡಿಗಳ ಮನೆಗಳಿಗೆ ಭೇಟಿ ಕೊಟ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ. ಮತ್ತೊಂದೆಡೆ ರೌಡಿಗಳ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗುತ್ತಿದೆ.
ಹಣ-ಉಡುಗೊರೆ ಜಪ್ತಿ : ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿಮತದಾರರಿಗೆ ಹಂಚಲು ಹಯಗ್ರೀವ ಪಬ್ಲಿಕ್ ಶಾಲೆಯಲ್ಲಿದಾಸ್ತಾನು ಮಾಡಿದ್ದ 3.60 ಲಕ್ಷ ರೂ. ಮೌಲ್ಯದ 450 ಹೆಲ್ಮೆಟ್, 1.40 ಲಕ್ಷ ರೂ. ಮೌಲ್ಯದ ಕ್ರಿಕೆಟ್ ಕಿಟ್, 25 ಸಾವಿರ ರೂ. ಮೌಲ್ಯದ ಬ್ಲಾಂಕೆಟ್‌ಗಳ ಜಪ್ತಿ. ಹೆಲ್ಮೆಟ್‌ಗಳ ಮೇಲೆ ಬಿಜೆಪಿ ಮುಖಂಡ ಮುನೀಂದ್ರ ಕುಮಾರ್ ಭಾವಚಿತ್ರವಿದ್ದು, ಯಲಹಂಕ ಠಾಣೆಯಲ್ಲಿಪ್ರಕರಣ ದಾಖಲಿಸಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತ ಸೈಯದ್ ಸಾದಿಕ್ ಎಂಬಾತ ಬ್ಯಾಟರಾಯನಪುರ ಕ್ಷೇತ್ರದ ಹೆಗಡೆ ನಗರದಲ್ಲಿಹಂಚುತ್ತಿದ್ದ 90 ಸಾವಿರ ರೂ. ಮೌಲ್ಯದ 151 ದಿನಸಿ ಕಿಟ್‌ಗಳನ್ನು ಜಪ್ತಿ ಮಾಡಿ ಸಂಪಿಗೆಹಳ್ಳಿ ಠಾಣೆಯಲ್ಲಿದೂರು ದಾಖಲಿಸಲಾಗಿದೆ.
ಸೂಕ್ತ ದಾಖಲೆ ಪತ್ರಗಳಿಲ್ಲದೆ ಕಾರಿನಲ್ಲಿಕೊಂಡೊಯ್ಯುತ್ತಿದ್ದ 1.42 ಲಕ್ಷ ರೂ.ಗಳನ್ನು ದೇವನಹಳ್ಳಿ ಸಮೀಪದ ಪೂಜನಹಳ್ಳಿ ಟೋಲ್‌ಗೇಟ್ ಬಳಿ ಪೊಲೀಸರು ಜಪ್ತಿ ಮಾಡಿದ್ದಾರೆ.ತೆರಿಗೆ ಪಾವತಿಯ ದಾಖಲೆಗಳನ್ನು ಹೊಂದಿಲ್ಲದೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಸಾಗಿಸುತ್ತಿದ್ದ 6.45 ಲಕ್ಷ ರೂ. ಮೌಲ್ಯದ ತಂಬಾಕು ಪ್ಯಾಕೆಟ್‌ಗಳನ್ನು ಟೋಲ್‌ಗೇಟ್‌ನಲ್ಲಿಪೊಲೀಸರು ವಶಪಡಿಸಿಕೊಂಡಿದ್ದಾರೆ.