Mysore
24
broken clouds

Social Media

ಬುಧವಾರ, 09 ಜುಲೈ 2025
Light
Dark

ಕೇರಳ| ಶಿಕ್ಷಕನ ಕೈ ಕತ್ತರಿಸಿದ ಪ್ರಕರಣ: ಪಿಎಫ್‌ಐನ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಕೊಚ್ಚಿ (ಕೇರಳ):  2010ರ ಜುಲೈ 4ರಂದು ದೇಶಾದ್ಯಂತ ಸುದ್ದಿಯಾಗಿದ್ದ ತೊಡುಪುಯ ನ್ಯೂಮಾನ್‌ ಕಾಲೇಜಿನ ಮಲೆಯಾಳಂ ಶಿಕ್ಷಕ ಪ್ರೊ. ಟಿ.ಜೆ.ಜೋಸೆಫ್‌ ಅವರ ಕೈ ಕತ್ತರಿಸಿದ ಪ್ರಕರಣದಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಗೆ ಸೇರಿದ ಮೂವರು ಅಪರಾಧಿಗಳಿಗೆ ಕೊಚ್ಚಿಯ ಎನ್‌ಐಎ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಎರಡನೆ ಆರೋಪಿ ಮೂವಾಟ್ಟುಪುಯ ನಿವಾಸಿ ಸಜಿಲ್‌ (36), ಮೂರನೇ ಆರೋಪಿ ಅಲುವಾ ನಿವಾಸಿ ಎಂ.ಕೆ.ನಾಸರ್‌ (48) ಮತ್ತು ಐದನೇ ಆರೋಪಿ ಕಡುಂಗಲ್ಲೂರು ನಿವಾಸಿ ನಜೀಬ್‌ (42) ಎಂಬವರು ಶಿಕ್ಷೆಗೊಳಗಾದ ಅಪರಾಧಿಗಳು. ಈ ಮೂವರಿಗೂ ತಲಾ 50 ಸಾವಿರ ರೂ. ದಂಡ ವಿಧಿಸಲಾಗಿದೆ.

ಮೂವರಿಗೆ ಜಾಮೀನು: ತಪ್ಪಿತಸ್ಥರೆಂದು ಸಾಬೀತಾದ ಉಳಿದ ಮೂವರು ಅಪರಾಧಿಗಳಿಗೂ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 9ನೇ ಆರೋಪಿ ಆಲುವಾ ನಿವಾಸಿ ಎಂ.ಕೆ.ನೌಶಾದ್‌ (48), 11ನೇ ಆರೋಪಿ ಅಲುವಾ ನಿವಾಸಿ ಪಿ.ಪಿ.ಮೊಯ್ದೀನ್‌ಕುಂಞಿ (60) ಮತ್ತು 12ನೇ ಆರೋಪಿ ಅಲುವಾ ನಿವಾಸಿ ಪಿ.ಎಂ.ಅಯೂಬ್‌ (48) ಎಂಬವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯ ಇವರಿಗೆ ಜಾಮೀನು ಮಂಜೂರು ಮಾಡಿದೆ. ಆರೋಪಿಗಳು ಪ್ರೊ.ಟಿ.ಜೆ.ಜೋಸೆಫ್‌ ಅವರಿಗೆ 4 ಲಕ್ಷ ರೂ. ಪರಿಹಾರ ನೀಡುವಂತೆಯೂ ಕೋರ್ಟ್‌ ಸೂಚಿಸಿದೆ.

ಮೂರು ವರ್ಷ ಅಥವಾ ಅದಕ್ಕಿಂತ ಕಡಿಮೆ ಶಿಕ್ಷೆಗೆ ಒಳಗಾದವರು ಜಾಮೀನು ಅರ್ಜಿ ಸಲ್ಲಿಸಲು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ನಿಯಮವು ಅವಕಾಶ ನೀಡುತ್ತದೆ. ಇದರ ಪ್ರಕಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಲು ಒಂದು ತಿಂಗಳ ಕಾಲಾವಕಾಶ ನೀಡಿ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಪ್ರಕರಣದ ಎರಡನೇ ಹಂತದ ವಿಚಾರಣೆಯನ್ನು ಪೂರ್ಣಗೊಳಿಸಿದ ಬಳಿಕ, ಕೊಚ್ಚಿಯ ಎನ್‌ಐಎ ವಿಶೇಷ ನ್ಯಾಯಾಲಯ ಇನ್ನೂ ಆರು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದೆ. ಈ ಪ್ರಕರಣದಲ್ಲಿ ಭಯೋತ್ಪಾದಕ ಚಟುವಟಿಕೆ ಸಾಬೀತಾಗಿದೆ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣ: ಪ್ರಶ್ನೆ ಪತ್ರಿಕೆ ತಯಾರಿಕೆಯಲ್ಲಿ ಧರ್ಮನಿಂದನೆ ಮಾಡಲಾಗಿದೆ ಎಂದು ಆರೋಪಿಸಿ 2010ರ ಜುಲೈ 4ರಂದು ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ತರಗತಿಯಲ್ಲಿ ಪಾಠ ಮಾಡುತ್ತಿದ್ದ ಪ್ರೊ.ಟಿ.ಜೆ.ಜೋಸೆಫ್‌ ಅವರಿಗೆ ಹಲ್ಲೆ ನಡೆಸಿ ವಿದ್ಯಾರ್ಥಿಗಳ ಮುಂದೆಯೆ ಕೈ ಕತ್ತರಿಸಿದ್ದಾರೆ. ಮೊದಲ ಹಂತದಲ್ಲಿ ವಿಚಾರಣೆ ಎದುರಿಸಿದ 13 ಮಂದಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ 18 ಮಂದಿಯ ಮೇಲಿನ ಆರೋಪವನ್ನು ಕೈ ಬಿಡಲಾಗಿದೆ.

2015ರ ಬಳಿಕ ಬಂಧಿತರಾದ 11 ಆರೋಪಿಗಳ ವಿಚಾರಣೆಯನ್ನು ಎರಡನೇ ಹಂತದಲ್ಲಿ ನಡೆಸಲಾಗಿದೆ. ದಾಳಿಯ ಬಳಿಕ ತಲೆಮರೆಸಿಕೊಂಡ ಆರೋಪಿಗಳು ಇವರಲ್ಲಿ ಒಳಗೊಂಡಿದ್ದಾರೆ. ಮತ್ತು ಆರಂಭಿಕ ವಿಚಾರಣೆ ಬಳಿಕ ಇವರನ್ನು ಬಂಧಿಸಲಾಗಿದೆ.

ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅನಿಲ್‌ ಕೆ.ಭಾಸ್ಕರ್‌ ವಿಚಾರಣೆ ಪೂರ್ಣಗೊಳಿಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದಾರೆ. ಮೊದಲ ಹಂತದ ವಿಚಾರಣೆಯಲ್ಲಿ ಪ್ರಾಸಿಕ್ಯೂಷನ್‌ಗೆ ಪಿ.ಜಿ.ಮನು ಮತ್ತು ಬಳಿಕ ಸಿಂಧು ರವಿಶಂಕರ್‌ ವಕಾಲತ್ತು ನಡೆಸಿದ್ದಾರೆ.

ಬುಧವಾರ ನಡೆದ ಎರಡನೇ ಹಂತದ ವಿಚಾರಣೆಯಲ್ಲಿನ್ಯಾಯಾಲಯ ಐವರು ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಶಫೀಕ್‌ (31), ಅಜೀಜ್‌ ಓಡಕ್ಕಾಲಿ (36), ಮೊಹಮ್ಮದ್‌ ರಾಫಿ (40), ಟಿ.ಪಿ.ಜುಬೇರ್‌ (40) ಮತ್ತು ಮನ್ಸೂರ್‌ (52) ಎಂಬವರನ್ನು ಖುಲಾಸೆಗೊಳಿಸಲಾಗಿದೆ. ಪ್ರಕರಣದ ಮೊದಲ ಆರೋಪಿ ಸವಾದ್‌ (33) ಎಂಬಾತ ಇನ್ನೂ ತಲೆಮರೆಸಿಕೊಂಡಿದ್ದಾನೆ. ಸವಾದ್‌ ವಿದೇಶದಲ್ಲಿದ್ದಾನೆ ಎಂದು ಹೇಳಲಾಗುತ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!