ನವದೆಹಲಿ: ಮುಂಬೈನ 16 ವರ್ಷದ ಹರೆಯದ ಬಾಲಕಿ ಕಾಮ್ಯ ಕಾರ್ತಿಕೇಯನ್ ಅವರು ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್‌ನ್ನು ಏರುವ ಮೂಲಕ ವಿಶೇಷ ದಾಖಲೆ ಬರೆದಿದ್ದಾರೆ.
ಮುಂಬೈನ ನೇವಿ ಚಿಲ್ಡ್ರನ್ ಶಾಲೆಯಲ್ಲಿ 12ನೇ ತರಗತಿಯಲ್ಲಿ ಓದುತ್ತಿರುವ ಕಾಮ್ಯ ಸೋಮವಾರ ಮೌಂಟ್ ಎವರೆಸ್ಟ್ ಏರುವ ಮೂಲಕ ವಿನೂತನ ದಾಖಲೆ ಬರೆದಿದ್ದಾರೆ.
ಈ ಶಿಖರವನ್ನೇರಲು ಅವರು, ತಮ್ಮ ತಂದೆ ಕಮಾಂಡರ್ ಎಸ್. ಕಾರ್ತಿಕೇಯನ್ ಜತೆಗೂಡಿ ಈ ಕಾರ್ಯ ಸಾಧನೆ ಮಾಡಿದ್ದಾರೆ. ಇದೀಗ ಇವರ ಸಾಧನೆಯನ್ನು ಭಾರತೀಯ ನೌಕಾಪಡೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಕಾಮ್ಯ ಅವರು ಬಾಲ್ಯದಲ್ಲಿಯೇ ಟ್ರೆಕ್ಕಿಂಗ್ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದು, ತಂದೆಯೊಂದಿಗೆ ಕೂಡಿ ಟ್ರೆಕ್ಕಿಂಗ್ ಮಾಡಲು ತಾವು ಮೂರು ವರ್ಷದವಳಾಗಿದ್ದಾಗಲೇ ಆರಂಭಿಸಿದ್ದಾರೆ. ಬಳಿಕ ಇದು ಅಭ್ಯಾಸವಾಗಿ ಮೌಂಟ್ ಎವರೆಸ್ಟ್ ಏರುವ ವರೆಗೆ ಬೆಳೆದು ನಿಂತಿದೆ.
ಕಾಮ್ಯ ಅವರು ಈವರೆಗೆ ಹರ್-ಕಿ ಡನ್, ಕೇದಾರನಾಥ ಶಿಖರ್, ರೂಪ್‌ಕುಂಡ್ ಸರೋವರಗಳನ್ನು ಏರಿದ್ದರು. ಕಾಮ್ಯ ಅವರು ತಮ್ಮ 13ನೇ ವಯಸ್ಸಿನಲ್ಲಿಯೇ ಎವರೆಸ್ಟ್ ಬೇಸ್ ಕ್ಯಾಂಪ್ ಹತ್ತುವ ಮೂಲಕ ಇತಿಹಾಸ ನಿರ್ಮಿಸಿದ್ದರು.
ಈ ಸಾಧನೆ ಗುರುತಿಸಿದ್ದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಮನ್‌ಕಿ ಬಾತ್‌ನಲ್ಲಿ ಈಕೆಯ ಸಾಧನೆಯನ್ನು ಕೊಂಡಾಡಿದ್ದರು. 2021ರಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯನ್ನು ಕಾಮ್ಯ ಅವರು ಮುಡಿಗೇರಿಸಿಕೊಂಡಿದ್ದಾರೆ.