ನವದೆಹಲಿ : ಸಂಘರ್ಷ ಪೀಡಿತ ಹಾಗೂ ಇಸ್ರೇಲ್‌ನಿಂದ ದಿಗ್ಬಂಧನಕ್ಕೊಳಗಾಗಿರುವ ಗಾಝಾಗೆ ಭಾನುವಾರ ಭಾರತವು ವೈದ್ಯಕೀಯ ನೆರವು ಹಾಗೂ ಪರಿಹಾರ ಸಾಮಾಗ್ರಿಗಳನ್ನು ರವಾನಿಸಿತು ಎಂದು ndtv.com ವರದಿ ಮಾಡಿದೆ.
“ಈ ಪರಿಹಾರ ಸಾಮಾಗ್ರಿಗಳಲ್ಲಿ ಅತ್ಯಗತ್ಯ ಜೀವರಕ್ಷಕ ಔಷಧಗಳು, ಶಸ್ತ್ರಚಿಕಿತ್ಸಾ ಸಾಮಗ್ರಿಗಳು, ಟೆಂಟ್, ಟಾರ್ಪಾಲಿನ್ ಗಳು ಹಾಗೂ ಇನ್ನಿತರ ಅಗತ್ಯ ಸಾಮಗ್ರಿಗಳನ್ನು ರವಾನಿಸಲಾಗಿದೆ” ಎಂದು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
ಆಕ್ಟೋಬರ್ 7ರಂದು ಹಮಾಸ್ ಹೋರಾಟಗಾರರು ತನ್ನ ನೆಲದ ಮೇಲೆ ಹಠಾತ್ ದಾಳಿ ನಡೆಸಿದ ಬಳಿಕ ಗಾಝಾದ ಮೇಲೆ ಸಂಪೂರ್ಣ ದಿಗ್ಬಂಧನ ವಿಧಿಸಿರುವ ಇಸ್ರೇಲ್ ಅಲ್ಲಿಗೆ ನೀರು, ವಿದ್ಯುತ್, ಇಂಧನ ಹಾಗೂ ಆಹಾರ ಪೂರೈಕೆಯನ್ನು ಕಡಿತಗೊಳಿಸಿದೆ ಹಾಗೂ ಅವಶ್ಯಕ ವಸ್ತುಗಳ ತೀವ್ರ ಅಭಾವವನ್ನು ಸಷ್ಟಿಸಿದೆ.