ಇಂದು ( ಡಿಸೆಂಬರ್ 1 ) ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ನಾಲ್ಕನೇ ಟಿ ಟ್ವೆಂಟಿ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 20 ರನ್‌ಗಳ ಗೆಲುವನ್ನು ದಾಖಲಿಸಿದೆ. ಈ ಗೆಲುವಿನ ಮೂಲಕ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನು ಟೀಮ್ ಇಂಡಿಯಾ 3-1 ಅಂತರದಿಂದ ಕೈವಶಪಡಿಸಿಕೊಂಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ರಿಂಕು ಸಿಂಗ್, ಜಿತೇಶ್ ಶರ್ಮಾ, ರುತುರಾಜ್ ಹಾಗೂ ಜೈಸ್ವಾಲ್ ಉತ್ತಮ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ ಆಸ್ಟ್ರೇಲಿಯಾಗೆ ಗೆಲ್ಲಲು 175 ರನ್‌ಗಳ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಗಿರುವ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 154 ರನ್ ಕಲೆಹಾಕಿದೆ.
ಭಾರತದ ಇನ್ನಿಂಗ್ಸ್: ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗೂ ರುತುರಾಜ್ ಗಾಯಕ್ವಾಡ್ ಜೋಡಿ ಪವರ್‌ಪ್ಲೇನಲ್ಲಿ 50 ರನ್‌ಗಳ ಜತೆಯಾಟ ಆಡುವ ಮೂಲಕ ಉತ್ತಮ ಆರಂಭವನ್ನು ಕಟ್ಟಿಕೊಟ್ಟಿತು. ಯಶಸ್ವಿ ಜೈಸ್ವಾಲ್ 37 ರನ್ ಗಳಿಸಿದರೆ, ರುತುರಾಜ್ ಗಾಯಕ್ವಾಡ್ 32 ರನ್ ಕಲೆಹಾಕಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶ್ರೇಯಸ್ ಅಯ್ಯರ್ 8 ರನ್, ನಾಯಕ ಸೂರ್ಯಕುಮಾರ್ ಕೇವಲ 1 ರನ್ ಗಳಿಸಿ ನಿರಾಸೆ ಮೂಡಿಸಿದರು. ಬಳಿಕ ಅಬ್ಬರಿಸಿದ ಜಿತೇಶ್ ಶರ್ಮಾ 19 ಎಸೆತಗಳಲ್ಲಿ 3 ಸಿಕ್ಸರ್, 1 ಬೌಂಡರಿ ಸಹಿತ 35 ರನ್, ರಿಂಕು ಸಿಂಗ್ 29 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 46 ರನ್ ಬಾರಿಸಿದರು. ಅಕ್ಷರ್ ಪಟೇಲ್ ಹಾಗೂ ದೀಪಕ್ ಚಹರ್ ಶೂನ್ಯ ಸುತ್ತಿದರೆ, ರವಿ ಬಿಷ್ಣೋಯಿ 4 ಹಾಗೂ ಅವೇಶ್ ಖಾನ್ ಅಜೇಯ 1 ರನ್ ಕಲೆಹಾಕಿದರು.
ಆಸ್ಟ್ರೇಲಿಯಾ ಪರ ಬೆನ್ ಡ್ವಾರ್‌ಶ್ಯೂಸ್ 3 ವಿಕೆಟ್ ಪಡೆದರೆ, ಜೇಸನ್ ಬೆಹ್ರೆನ್‌ಡಾರ್ಫ್ ಹಾಗೂ ತನ್ವೀರ್ ಸಂಘ ತಲಾ ಎರಡು ವಿಕೆಟ್ ಪಡೆದರು ಮತ್ತು ಆರೊನ್ ಹಾರ್ಡಿ ಒಂದು ವಿಕೆಟ್ ಪಡೆದರು.
ಆಸ್ಟ್ರೇಲಿಯಾ ಇನ್ನಿಂಗ್ಸ್: ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ 31, ಜೋಸ್ ಫಿಲಿಪ್ 8, ಬೆನ್ ಮೆಕ್‌ಡೆರ್ಮಟ್ 19, ಆರನ್ ಹಾರ್ಡಿ 8, ಟಿಮ್ ಡೇವಿಡ್ 19, ಮ್ಯಾಥ್ಯೂ ಶಾರ್ಟ್ 22, ಮ್ಯಾಥ್ಯೂ ವೇಡ್ ಅಜೇಯ 36, ಬೆನ್ ಡ್ವಾರ್‌ಶ್ಯೂಸ್ 1 ಹಾಗೂ ಕ್ರಿಸ್ ಗ್ರೀನ್ ಅಜೇಯ 2 ರನ್ ಬಾರಿಸಿದರು.
ಭಾರತದ ಪರ ಬೌಲಿಂಗ್‌ನಲ್ಲಿ ಅಕ್ಷರ್ ಪಟೇಲ್ ಆಸ್ಟ್ರೇಲಿಯಾದ ಪ್ರಮುಖ 3 ವಿಕೆಟ್ ಪಡೆಯುವ ಮೂಲಕ ಮಿಂಚಿದರು. ಅಬ್ಬರದ ಓಪನಿಂಗ್ ನೀಡಿದ್ದ ಟ್ರಾವಿಸ್ ಹೆಡ್, ಬೆನ್ ಮೆಕ್‌ಡೆರ್ಮಟ್ ಹಾಗೂ ಆರನ್ ಹಾರ್ಡಿ ಅವರ ವಿಕೆಟ್‌ಗಳನ್ನು ಅಕ್ಷರ್ ಕಬಳಿಸಿದರು. ಇನ್ನುಳಿದಂತೆ ದೀಪಕ್ ಚಹರ್ 2, ರವಿ ಬಿಷ್ಣೋಯಿ ಹಾಗೂ ಅವೇಶ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.





