Mysore
20
overcast clouds
Light
Dark

ಮಾತು ಉಳಿಸಿಕೊಳ್ಳದಿದ್ದರೆ ಪಕ್ಷ ವಿಸರ್ಜನೆ : ಎಚ್.ಡಿ.ಕೆ

ಮಂಡ್ಯ : ಜನರಿಗೆ ಅನುಕೂಲವಾಗುವ ಪಂಚರತ್ನ ಯೋಜನೆಗಳನ್ನು ಜಾರಿಗೆ ತರಲು ಪೂರ್ಣ ಅಧಿಕಾರ ಕೊಡಿ. ಒಂದು ವೇಳೆ ನಾನು ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೆ ಜೆಡಿಎಸ್ ಪಕ್ಷವನ್ನು ವಿಸರ್ಜಿಸುತ್ತೇನೆ. ಜತೆಗೆ ಮತ್ತೆಂದೂ ನಿಮ್ಮೆದುರು ಬಂದು ಮತ ಕೇಳಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಆರ್.ರಾಮಚಂದ್ರು ಪರ ಮತಯಾಚನೆ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬವು ಯಾವುದೇ ಸಾಲವಿಲ್ಲದೆ ನೆಮ್ಮದಿಯಿಂದ ಬದುಕುವ ವಾತಾವರಣ ಕಲ್ಪಿಸುತ್ತೇನೆ. ಒಮ್ಮೆ ನನ್ನನ್ನು ಪರೀಕ್ಷಿಸಿ ನೋಡಿ. ಘೋಷಣೆಯಾಗಿರುವ ಯೋಜನೆಯ ಕನಸನ್ನು ನನಸು ಮಾಡಲು ಅಂದಾಜು 2.50 ಲಕ್ಷ ಕೋಟಿ ರೂ ಬೇಕು. ಇದನ್ನು ಕಾಂಗ್ರೆಸ್, ಬಿಜೆಪಿ ಜತೆಗೂಡಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಜೆಡಿಎಸ್‌ಗೆ ಸಂಪೂರ್ಣ ಬಹುಮತ ಕೊಡಿ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ರಾಹುಲ್‌ಗಾಂಧಿ, ಪ್ರಿಯಾಕಾ ಗಾಂಧಿ ಸೇರಿದಂತೆ ಉತ್ತರ ಭಾರತದ ಬಹುತೇಕ ನಾಯಕರು ಕರ್ನಾಟಕದ ಮೇಲೆ ದೃಷ್ಟಿ ಇಟ್ಟಿದ್ದಾರೆ. ಆದರೆ, 2016-17ರಲ್ಲಿ ರಾಜ್ಯದಲ್ಲಿ ಅದರಲ್ಲೂ ಮಂಡ್ಯದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಇವರೆಲ್ಲಾ ಎಲ್ಲಿ ಹೋಗಿದ್ದರು?. ಮಂಡ್ಯ ಜಿಲ್ಲೆಯ ರೈತನೊಬ್ಬ ಕಬ್ಬಿನ ಗದ್ದೆಗೆ ಬೆಂಕಿ ಹಾಕಿ, ಅದರೊಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಾಗ ಅವರುಯಾರಿಗೂ ರೈತರ ಸಂಕಟ ತಿಳಿಯಲಿಲ್ಲವೇ?. ಆಗ ರೈತರ ನೆರವಿಗೆ ಬಂದಿದ್ದು ಎಚ್.ಡಿ.ದೇವೇಗೌಡರು ಮಾತ್ರ ಎಂದರು.

ಟಿಕೆಟ್‌ಗೆ ಶ್ರೀನಿವಾಸ್ ಎಷ್ಟು ಕೊಟ್ಟಿದ್ದರು?: ಅವಮಾನವಾಗಬಾರದೆಂದು ಹಾಲಿ ಶಾಸಕ ಶ್ರೀನಿವಾಸ್‌ಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಲಾಯಿತು. ಅವರ ಆರೋಗ್ಯದ ಪರಿಸ್ಥಿತಿ ನನಗೆ ಗೊತ್ತಿತ್ತು. ಹೊಸ ಮುಖಕ್ಕೆ ಅವಕಾಶ ಕೊಡಿ ಎಂದು ಕಾರ್ಯಕರ್ತರು ಕೇಳುತ್ತಿದ್ದಾರೆ. ನೀವೇ ಯಾರನ್ನಾದರೂ ಆಯ್ಕೆ ಮಾಡಿ ಎಂದಿದ್ದೆ. ಆದರೆ ಅವರು ನನಗೆ ಕೊಡಲಿಲ್ಲ ಎಂದರೆ ನನ್ನ ಅಳಿಯನಿಗೆ ಕೊಡಿ ಎಂದಿದ್ದರು ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಜೆಡಿಎಸ್ ಟಿಕೆಟ್ ಹಣಕ್ಕೆ ಮಾರಾಟವಾಗಿದೆ ಎಂದು ಆರೋಪಿಸುವ ಶಾಸಕ ಎಂ.ಶ್ರೀನಿವಾಸ್, 4 ಬಾರಿ ಅಭ್ಯರ್ಥಿಯಾಗಿದ್ದಾಗ ಯಾರಿಗೆ ಎಷ್ಟು ಹಣ ಕೊಟ್ಟಿದ್ದರು. ಅವರು ಇಷ್ಟೊಂದು ಕೀಳು ಮಟ್ಟದಲ್ಲಿ ಮಾತನಾಡುವುದು ಸರಿಯಲ್ಲ. ಇನ್ನು ಟಿಕೆಟ್ ಕೊಡುತ್ತೇನೆ ಒಂದು ವರ್ಷದ ಹಿಂದೆಯೇ ವಿಜಯಾನಂದಗೆ ಹೇಳಿದ್ದೆ. ಈಗಲೇ ಬೇಡವೆಂದು ಹೇಳಿದ್ದರು. ಆದರೂ ಅವರು ಒಂದು ದಿನವೂ ಪಕ್ಷ ಸಂಘಟನೆ ಮಾಡಲಿಲ್ಲ. ಹೀಗಾಗಿ ನಮಗೆ ರಾಮಚಂದ್ರಗೆ ಟಿಕೆಟ್ ಕೊಡಬೇಕಾಗಿತ್ತು. ನಾವು ರಾಜಕೀಯದಲ್ಲಿ ಎಲ್ಲ ನೋಡಿ ಆಗಿದೆ. ಜಿದ್ದಿಗಾಗಿ ಚುನಾವಣೆಗೆ ನಿಲ್ಲುವ ಅವಶ್ಯಕತೆ ಇಲ್ಲ ಎಂದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ