Mysore
20
overcast clouds
Light
Dark

ಉತ್ತರ ಕನ್ನಡದಲ್ಲಿ ಭಾರೀ ಮಳೆ, ಗುಡ್ಡಕುಸಿತ- ಹಿಮಾಚಲ, ಉತ್ತರಾಖಂಡದಲ್ಲಿ ದಿಢೀರ್ ಪ್ರವಾಹ ಅವಾಂತರ

ಬೆಂಗಳೂರು : ರಾಜ್ಯದಲ್ಲಿ ಇದೀಗ ಮುಂಗಾರು ಚುರುಕು ಪಡೆಯುತ್ತಿದೆ. ಆದರೆ ನಿರೀಕ್ಷೆಯಷ್ಟು ಪ್ರಮಾಣದಲ್ಲಿ ಮಳೆ ಎಲ್ಲಾ ಕಡೆ ವ್ಯಾಪಿಸಿಲ್ಲ. ಇಂದು ಉತ್ತರಕನ್ನಡ ದಲ್ಲಿ ಭಾರೀ ಮಳೆಯಾಗಿದೆ.

ಕಾರವಾರದ ಜನವಸತಿ ಪ್ರದೇಶಕ್ಕೆ ನೀರು ನುಗ್ಗಿದೆ. ಬಿಣಗಾ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ಮೇಲೆ ಬೃಹತ್ ಬಂಡೆ ಉರುಳಿದೆ. ಪರಿಣಾಮ ಏಕ ಮುಖ ಸಂಚಾರ ಬಂದ್ ಮಾಡಲಾಗಿದೆ. ಅವಘಡಕ್ಕೆ ಅವೈಜ್ಞಾನಿಕ ಕಾಮಗಾರಿ ಕಾರಣ ಎನ್ನಲಾಗ್ತಿದೆ. ಹೊನ್ನಾವರದ ಕಡ್ನೀರ್ ಬಳಿ ರಸ್ತೆಗೆ ಮರ ಬಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.

ಉಡುಪಿ, ದಕ್ಷಿಣ ಕನ್ನಡದಲ್ಲೂ ಮಳೆಯಾಗುತ್ತಿದೆ. ಬೆಳಗಾವಿಯಲ್ಲೂ ಒಂದಿಷ್ಟು ಮಳೆಯಾಗಿದೆ. ಆದರೆ ಇದು ಕೃಷಿಗೆ ಸಾಕಾಗ್ತಿಲ್ಲ. ಹೀಗಾಗಿ ಜನ ಕಪ್ಪೆ ಮದುವೆ, ಕತ್ತೆ ಮದುವೆಗಳಿಗೆ ಮೊರೆ ಹೋಗ್ತಿದ್ದಾರೆ. ವಿಜಯಪುರದ ಕಲಕೇರಿಯ ಜನ ಮಳೆಗಾಗಿ ಸಮಾಧಿಗಳಿಗೆ ನೀರುಣಿಸುವ ಶಾಸ್ತ್ರ ಮಾಡಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಮಳೆ ಚಿತ್ರಣ ಆಶಾದಾಯಕವಾಗಿಲ್ಲ. ಕಳೆದ 26ದಿನದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಒಟ್ಟಾರೆ 61%ರಷ್ಟು ಮಳೆ ಕೊರತೆಯಾಗಿದೆ.

ಇತ್ತ ಮುಂಗಾರು ಮಾರುತಗಳು ದೇಶಾದ್ಯಂತ ವ್ಯಾಪಿಸಿವೆ. ಪರಿಣಾಮ ಹಲವು ರಾಜ್ಯಗಳಲ್ಲಿ ಕುಂಭದ್ರೋಣ ಮಳೆ ಆಗ್ತಿದೆ. ಪ್ರವಾಹ, ಮೇಘಸ್ಫೋಟ, ಭೂಕುಸಿತಗಳು ಉಂಟಾಗಿ ನಾನಾ ಅವಾಂತರಗಳು ಉಂಟಾಗ್ತಿವೆ. ಹಿಮಾಚಲಪ್ರದೇಶದ ಬಾಗಿಪುಲ್‍ನಲ್ಲಿ ದಿಢೀರ್ ಪ್ರವಾಹ ಉಂಟಾಗಿ 200 ಮಂದಿ ಅಪಾಯಕ್ಕೆ ಸಿಲುಕಿದ್ದಾರೆ. ಕುಲ್ಲು-ಮಂಡಿ ಹೈವೇಯಲ್ಲಿ ಗುಡ್ಡ ಕುಸಿತ ಉಂಟಾದ ಪರಿಣಾಮ ಸುಮಾರು 15 ಕಿಲೋಮೀಟರ್‍ನಷ್ಟು ಉದ್ದಕ್ಕೆ ವಾಹನಗಳು ಸಾಲುಗಟ್ಟಿವೆ. ಹಿಂದೆ ಹೋಗಲು ಆಗ್ತಿಲ್ಲ ಮುಂದೆ ಹೋಗಲು ದಾರಿ ಇಲ್ಲ. ಅಲ್ಲೆಲ್ಲೂ ಊಟ ವಸತಿಗಾಗಿ ಕನಿಷ್ಠ ಹೋಟೆಲ್ ಕೂಡ ಇಲ್ಲ. ಪ್ರವಾಸಿಗರಂತೂ ದಿಕ್ಕು ತೋಚದೇ ಕುಳಿತುಬಿಟ್ಟಿದ್ದಾರೆ.

ಕಾಮಾಂಡ್ ಪ್ರಾಂತ್ಯದಲ್ಲಿ ಹತ್ತಾರು ವಾಹನಗಳು ಸಿಲುಕಿವೆ. ಕೆಲವು ವಾಹನಗಳು ನೀರಲ್ಲಿ ಕೊಚ್ಚಿ ಹೋಗಿವೆ. ಮುಂದಿನ ಐದು ದಿನ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರಾಖಂಡ್, ಹಿಮಾಚಲದಲ್ಲಿ ಮಳೆಗೆ ಐದಾರು ಮಂದಿ ಬಲಿ ಆಗಿದ್ದಾರೆ. ಕೇದಾರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಅತ್ತ ಅಸ್ಸಾಂನಲ್ಲಿ ರಣಭೀಕರ ಪ್ರವಾಹಕ್ಕೆ ತತ್ತರಿಸಿದೆ. 15 ಜಿಲ್ಲೆಗಳ 2.72 ಲಕ್ಷ ಮಂದಿ ಪ್ರವಾಹ ಸಂತ್ರಸ್ತರಾಗಿದ್ದಾರೆ. ಮಹಾರಾಷ್ಟ್ರ ಕರಾವಳಿಯಲ್ಲಿ ಭಾರೀ ಮಳೆ ಆಗ್ತಿದೆ. ಒಡಿಶಾ, ರಾಜಸ್ಥಾನ, ಮಧ್ಯಪ್ರದೇಶ, ಗೋವಾ, ಛತ್ತೀಸ್‍ಘಡ, ಹಿಮಾಚಲ ಪ್ರದೇಶ, ಹರಿಯಾಣ, ಪಂಜಾಬ್ ಮತ್ತು ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆ ಆಗಲಿದೆ ಎಂದು ಐಎಂಡಿ ತಿಳಿಸಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ