ನವದೆಹಲಿ : ಕಳೆದ ಅಕ್ಟೋಬರ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹದಲ್ಲಿ ಶೇಕಡಾ 13 ರಷ್ಟು ಏರಿಕೆಯಾಗಿದ್ದು, ಒಟ್ಟು 1.72 ಲಕ್ಷ ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿದೆ. ಇದು ಇದುವರೆಗಿನ ಎರಡನೇ ಅತ್ಯಧಿಕ ಕಲೆಕ್ಷನ್ ಆಗಿದೆ.
ಅಕ್ಟೋಬರ್‌ನಲ್ಲಿ ಒಟ್ಟು ಜಿಎಸ್ ಟಿ ಆದಾಯ 1,72,003 ಕೋಟಿ ರೂಪಾಯಿ ಸಂಗ್ರವಾಗಿದ್ದು, ಇದು ಕಳೆದ ವರ್ಷದ ಅಕ್ಟೋಬರ್ಗೆ ಹೋಲಿಸಿದರೆ ಜಿಎಸ್‌ಟಿ ಸಂಗ್ರಹದಲ್ಲಿ ಶೇ. 13ರಷ್ಟು ಹೆಚ್ಚಳವಾಗಿದೆ. ದೇಶೀಯ ವಹಿವಾಟುಗಳು ಮತ್ತು ಸೇವೆಗಳ ಆಮದು ಏರಿಕೆಯು ಜೆಎಸ್ ಟಿ ಆದಾಯ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಅಕ್ಟೋಬರ್‌ನಲ್ಲಿ ಸಂಗ್ರಹವಾಗಿರುವ 1.72 ಲಕ್ಷ ಕೋಟಿ ರೂ. ಜಿಎಸ್ಟಿಯಲ್ಲಿ, ಸೆಂಟ್ರಲ್ ಜಿಎಸ್‌ಟಿ 30,062 ಕೋಟಿ ರೂ, ಸ್ಟೇಟ್ ಜಿಎಸ್‌ಟಿ 38,171 ಕೋಟಿ ರೂ, ಐಜಿಎಸ್ಟಿ 91,315 ಕೋಟಿ ರೂ, ಹಾಗೂ 12,456 ಕೋಟಿ ರೂ. ಸೆಸ್ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಐಜಿಎಸ್ಟಿಯನ್ನು ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಹಂಚಲಾಗಿದೆ. ಕೇಂದ್ರಕ್ಕೆ 42,873 ಕೋಟಿ ರೂ ಸಿಕ್ಕಿದೆ. ರಾಜ್ಯಕ್ಕೆ 36,614 ಕೋಟಿ ರೂ ಪಾಲು ಬಂದಿದೆ. ಇದರೊಂದಿಗೆ ಅಕ್ಟೋಬರ್ ತಿಂಗಳ ಜಿಎಸ್‌ಟಿ ಸಂಗ್ರಹದಲ್ಲಿ ಕೇಂದ್ರಕ್ಕೆ 72,934 ಕೋಟಿ ರೂ, ರಾಜ್ಯ ಸರ್ಕಾರಗಳಿಗೆ 74,785 ಕೋಟಿ ರೂ ಸಿಕ್ಕಂತಾಗಿದೆ.