ಮಂಡ್ಯ : ಸ್ನಾನ ಮಾಡಲೆಂದು ನಾಲೆಗೆ ಇಳಿದಿದ್ದ ಐವರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ದೊಡ್ಡ ಕೊತ್ತಗೆರೆ ಗ್ರಾಮದ ಸಮೀಪವಿರುವ ವಿ.ನಾಲೆಯಲ್ಲಿ ಮಂಗಳವಾರ ನಡೆದಿದೆ.
ಬೆಂಗಳೂರಿನ ನೀಲಸಂದ್ರ ಮೂಲದವರಾದ ಅತೀಕ (22), ಅನೀಸ ಬೇಗಂ (34), ತಸ್ಮಿಯ (22), ಮಹತಾಬ್ (10) ಮತ್ತು ಹರ್ಷಕ್ ಮೃತ ದುರ್ದೈವಿಗಳು.
ತಾಲೂಕಿನ ಹಲಗೆರೆ ಗ್ರಾಮಕ್ಕೆ ನೀಲಸಂದ್ರ ದಿಂದ ಬಂದಿದ್ದ 15 ಜನರ ತಂಡ ಮಂಗಳವಾರ ಸ್ನಾನ ಮಾಡಲೆಂದು ವಿ.ನಾಲೆಗೆ ಇಳಿದಿದ್ದಾರೆ. ಈ ಸಂದರ್ಭ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದದ್ದನ್ನು ನೋಡಿದ ಉಳಿದವರು ಆತನ ರಕ್ಷಣೆಗೆಂದು ಹೋದಾಗ ಬಾಲಕ ಸೇರಿದಂತೆ ಐವರು ಜಲಸಮಾಧಿಯಾಗಿದ್ದಾರೆ.
ಇವರ ಪೈಕಿ ಮೂವರ ಮೃತದೇಹಗಳು ಪತ್ತೆಯಾಗಿದ್ದು, ಇನ್ನಿಬ್ಬರ ಮೃತ ದೇಹಕ್ಕಾಗಿ ಶೋಧ ನಡೆಸಲಾಗುತ್ತಿದೆ
ಈ ಸಂಬಂಧ ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.