ಕೋಲ್ಕತ್ತ : ಭಾರತದ ಮೊದಲ ಅಂಡರ್ ವಾಟರ್ ಮೆಟ್ರೊದ ಪ್ರಾಯೋಗಿಕ ಸಂಚಾರವನ್ನು ಕೋಲ್ಕತ್ತ ಮೆಟ್ರೋ ಯಶಸ್ವಿಯಾಗಿ ನಡೆಸಿದೆ. ಹೌರಾ ಮೈದಾನದಿಂದ ಎಸ್‌ಪ್ಲೇನಡ್ ಮೆಟ್ರೊ ನಿಲ್ದಾಣದವರೆಗೆ ಪ್ರಾಯೋಗಿಕ ಸಂಚಾರ ನಡೆಸಲಾಗಿತ್ತು. ಹೂಗ್ಲಿ ನದಿಯ ಸುರಂಗ ಮಾರ್ಗದಲ್ಲಿ ಮೆಟ್ರೊ ಯಶಸ್ಸಿಯಾಗಿ ಸಾಗಿದ್ದು, ಆ ಮೂಲಕ ಕೋಲ್ಕತ್ತ ಮೆಟ್ರೊ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ.
ಈ ಪ್ರಾಯೋಗಿಕ ಸಂಚಾರದಲ್ಲಿ ಎಂಜಿನಿಯರ್‌ಗಳು ಮತ್ತು ತಂತ್ರಜ್ಞರು ಮಾತ್ರ ಭಾಗವಹಿಸಿದ್ದರು. ಇದೊಂದು ಐತಿಹಾಸಿಕ ಕ್ಷಣವಾಗಿದೆ ಎಂದು ಕೋಲ್ಕತ್ತ ಮೆಟ್ರೊ ರೈಲ್ವೇ ನಿರ್ವಾಹಕ ಪಿ ಉದಯ್ ಕುಮಾರ್ ರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ.
‘ಹೌರಾ ಮೈದಾನದಿಂದ ಎಸ್‌ಪ್ಲೇನಡ್ ಮೆಟ್ರೊ ನಿಲ್ದಾಣದವರೆ ಪರೀಕ್ಷಾರ್ಥ ಸಂಚಾರ ನಡೆಸಲಾಗಿದೆ. ಮುಂದಿನ ಐದರಿಂದ ಏಳು ತಿಂಗಳವರೆಗೆ ಪ್ರಾಯೋಗಿಕ ಸಂಚಾರವನ್ನು ಮುಂದುವರಿಸಲಾಗುತ್ತದೆ. ಇದಾದ ಬಳಿಕವಷ್ಟೇ ನಿಯಮಿತ ಸೇವೆಗಳು ಪ್ರಾರಂಭವಾಗುತ್ತದೆ‘ ಎಂದು ಉದಯ್‌ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಈ ಸುರಂಗ ಮಾರ್ಗವು ನದಿಯ ಮೇಲ್ಮೈಯಿಂದ 13 ಮೀಟರ್ ಕೆಳಗಿದ್ದು, ಭೂಮಿಯ ಮೇಲ್ಮೈಯಿಂದ 33 ಮೀಟರ್ ಕೆಳಗಿದೆ. ಸುರಂಗ ಮಾರ್ಗವನ್ನು ರೈಲು ಹಾದು ಹೋಗಲು ಸುಮಾರು 45 ಸೆಕೆಂಡ್ ತೆಗೆದುಕೊಳ್ಳುತ್ತದೆ. ಪ್ರಯಾಣ ಸಮಯವನ್ನು ಕಡಿತಗೊಳಿಸುವ ಹಾಗೂ ಸಂಚಾರ ದಟ್ಟಣೆಯನ್ನು ತಪ್ಪಿಸುವುದಕೋಸ್ಕರ ಅಂಡರ್ ವಾಟರ್ ಮೆಟ್ರೋ ಮಾರ್ಗವನ್ನು ನಿರ್ಮಿಸಲಾಗಿದೆ.