Mysore
20
overcast clouds
Light
Dark

ಪಂಜಾಬ್‌ನ ಸೇನಾ ಘಟಕದಲ್ಲಿ ಗುಂಡಿನ ದಾಳಿ : 4 ಯೋಧರ ಸಾವು

ಬತಿಂಡಾ : ಪಂಜಾಬ್‌ನಲ್ಲಿ ಬತಿಂಡಾ ಸೇನಾ ಘಟಕದಲ್ಲಿ ಬುಧವಾರ ಬೆಳಿಗ್ಗೆ ಗುಂಡಿನ ದಾಳಿ ನಡೆಸಿದ್ದು, ನಾಲ್ವರು ಗುಂಡೇಟಿಗೆ ಬಲಿಯಾಗಿದ್ದಾರೆ. ಈ ಪ್ರದೇಶದಲ್ಲಿ ಜನರ ಓಡಾಡವನ್ನು ನಿರ್ಬಂಧಿಸಲಾಗಿದ್ದು, ತ್ವರಿತ ಪ್ರತಿಕ್ರಿಯಾ ತಂಡಗಳು ಶೋಧ ಕಾರ್ಯ ನಡೆಸುತ್ತಿವೆ ಎಂದು ಸೇನೆಯ ನೈಋತ್ಯ ಕಮಾಂಡ್ ಹೇಳಿಕೆ ನೀಡಿದೆ.

ಇದು ಭಯೋತ್ಪಾದನಾ ದಾಳಿ ಅಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಈವರೆಗೂ ಸೇನಾ ಘಟಕದ ಒಳಗೆ ಪ್ರವೇಶಿಸಲು ಸೇನೆಯು ಪೊಲೀಸರಿಗೆ ಅವಕಾಶ ನೀಡಿಲ್ಲ. ಮೃತರಾದ ಎಲ್ಲ ನಾಲ್ಕೂ ಮಂದಿ 80 ಮೀಡಿಯಂ ರೆಜಿಮೆಂಟ್‌ಗೆ ಸೇರಿದವರಾಗಿದ್ದಾರೆ. ದಾಳಿಕೋರ ಸಾಮಾನ್ಯ ವಸ್ತ್ರದಲ್ಲಿದ್ದ ಎಂದು ಹೇಳಲಾಗಿದೆ.

“ಬತಿಂಡಾ ಮಿಲಿಟರಿ ಸ್ಟೇಷನ್ ಒಳಗೆ ಬೆಳಗಿನ ಜಾವ 4.35ರ ಸುಮಾರಿಗೆ ಗುಂಡಿನ ದಾಳಿ ಘಟನೆ ವರದಿಯಾಗಿದೆ. ವಿಭಾಗದ ತುರ್ತು ಪ್ರತಿಕ್ರಿಯಾ ತಂಡಗಳು ಕೂಡಲೇ ಸಕ್ರಿಯವಾಗಿವೆ. ಈ ಪ್ರದೇಶವನ್ನು ಜನ ಓಡಾಟದಿಂದ ನಿರ್ಬಂಧಿಸಲಾಗಿದೆ ಹಾಗೂ ಸೀಲ್ ಮಾಡಲಾಗಿದೆ. ಹುಡುಕಾಟ ಕಾರ್ಯಾಚರಣೆಗಳು ನಡೆಯುತ್ತಿವೆ. ನಾಲ್ಕು ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ಹೆಚ್ಚಿನ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ” ಎಂದು ಸೇನಾ ಹೇಳಿಕೆ ತಿಳಿಸಿದೆ.

ಪೊಲೀಸ್ ತಂಡವೊಂದು ಸೇನಾ ಘಟಕದ ಹೊರಗೆ ಕಾಯುತ್ತಿದೆ. ಅವರು ಒಳಗೆ ಪ್ರವೇಶಿಸಲು ಸೇನೆಯು ಇನ್ನೂ ತನ್ನ ಅನುಮತಿ ನೀಡಿಲ್ಲ. ಆದರೆ ಇದು ಭಯೋತ್ಪಾದನಾ ದಾಳಿಯಂತೆ ಕಾಣಿಸುತ್ತಿಲ್ಲ. ಇದು ‘ಆಂತರಿಕ ವಿಚಾರ’ ಇರಬಹುದು ಎಂದು ಬತಿಂಡಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜಿಎಸ್ ಖುರಾನಾ ತಿಳಿಸಿದ್ದಾರೆ.

“ಇದರಲ್ಲಿ ಉಗ್ರರ ಅಥವಾ ಆತ್ಮಾಹುತಿ ದಾಳಿಯ ಆಯಾಮ ಕಾಣಿಸುತ್ತಿಲ್ಲ. ಶಸ್ತ್ರಾಸ್ತ್ರಗಳನ್ನು ಹೊಂದಿರುವ ಇಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ” ಎಂದು ಎಡಿಜಿ ಸುರಿಂದರ್ ಪಾಲ್ ಸಿಂಗ್ ಪಾರ್ಮರ್ ಮಾಹಿತಿ ನೀಡಿದ್ದಾರೆ.
ಬತಿಂಡಾ ಮಿಲಿಟರಿ ಸ್ಟೇಷನ್‌ನ ಆರ್ಟಿಲರಿ ಘಟಕದಲ್ಲಿ ಈ ಗುಂಡಿನ ದಾಳಿ ನಡೆದಿದೆ. ಇಲ್ಲಿ ಯೋಧರ ಕುಟುಂಬಗಳು ವಾಸಿಸುತ್ತಿವೆ. ಮಿಲಿಟರಿ ಸ್ಟೇಷನ್‌ನಲ್ಲಿನ ಅಧಿಕಾರಿಗಳ ಮೆಸ್‌ನ ಒಳಭಾಗದಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಮೂಲಗಳು ಹೇಳಿವೆ. ಕಂಟೋನ್ಮೆಂಟ್‌ನ ಎಲ್ಲ ನಾಲ್ಕು ದ್ವಾರಗಳನ್ನು ಮುಚ್ಚಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟಕದ ಗಾರ್ಡ್ ರೂಂನಿಂದ 28 ಕಾರ್ಟ್ರಿಡ್ಜ್‌ಗಳಿದ್ದ ಐಎನ್‌ಎಸ್‌ಎಎಸ್ ಅಸಾಲ್ಟ್ ರೈಫಲ್ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿತ್ತು. ಕೆಲವು ಸೇನಾ ಸಿಬ್ಬಂದಿ ಈ ದಾಳಿ ಹಿಂದೆ ಇರಬಹುದು ಎಂದು ಪೊಲೀಸರು ಊಹಿಸಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ