Mysore
20
overcast clouds
Light
Dark

ಸಕ್ಕರೆ ನಾಡಲ್ಲಿ ರಣಕಹಳೆ ಮೊಳಗಿಸಿದ ಫೈರ್ ಬ್ರಾಂಡ್ : ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಿದ ಯೋಗಿ ಆದಿತ್ಯನಾಥ್

ಮಂಡ್ಯ : ಬಿಜೆಪಿ ಫೈರ್ ಬ್ರಾಂಡ್ ಎನಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಂಡ್ಯದಲ್ಲಿ ಬೃಹತ್ ರೋಡ್ ಶೋ ನಡೆಸುವುದರೊಂದಿಗೆ ಹೊಸ ಸಂಚಲನ ಸೃಷ್ಟಿಸಿ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ.
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ನಡೆದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಪ್ರಧಾನಿಯಾದ ಕೇವಲ ೯ ವರ್ಷಗಳಲ್ಲಿ ಭಾರತ ಅಭಿವೃದ್ಧಿಯಲ್ಲಿ ಸಂಪೂರ್ಣ ಬದಲಾಗಿದೆ. ಆದ್ದರಿಂದ ಅಭಿವೃದ್ಧಿ ಮತ್ತು ಸದೃಢ ಭಾರತ ನಿರ್ಮಾಣಕ್ಕಾಗಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವಂತೆ ಮತದಾರರಲ್ಲಿ ಮನವಿ ಮಾಡಿದರು.

ರೋಡ್ ಶೋ : ಮೈಸೂರಿನಿಂದ ಹೆಲಿಕಾಪ್ಟರ್‌ನಲ್ಲಿ ಮಂಡ್ಯದ ಪಿಇಟಿ ಕ್ರೀಡಾಂಗಣಕ್ಕೆ ಮಧ್ಯಾಹ್ನ 12.05ಕ್ಕೆ ಬಂದಿಳಿದ ಯೋಗಿ ಆದಿತ್ಯನಾಥ ಅವರು ಅಲ್ಲಿಂದ ಕಾರಿನ ಮೂಲಕ
ಜಯಚಾಮರಾಜೇಂದ್ರ ಒಡೆಯರ್ ವೃತ್ತಕ್ಕೆ 12.10ಕ್ಕೆ ಆಗಮಿಸಿದರು. ಅಲ್ಲಿ ಹೂವುಗಳಿಂದ ಅಲಂಕರಿಸಿ ಸಿದ್ಧಪಡಿಸಲಾಗಿದ್ದ ಪ್ರಚಾರ ರಥವನ್ನೇರಿದರು.
ಸಂಸದೆ ಸುಮಲತಾ ಅಂಬರೀಶ್, ಬಿಜೆಪಿ ಅಭ್ಯರ್ಥಿಗಳಾದ ಅಶೋಕ್ ಜಯರಾಂ, ಸಚ್ಚಿದಾನಂದ, ಸುಧಾ ಶಿವರಾಮೇಗೌಡ ಸಾಥ್ ನೀಡಿದರು. ಯೋಗಿ ಅವರನ್ನು ನೂರಾರು ಮಹಿಳೆಯರು ಫೂರ್ಣಕುಂಭ ಸ್ವಾಗತದೊಂದಿಗೆ ಮುನ್ನಡೆಸಿಕೊಂಡು ಬಂದರು. ಪ್ರಥಮ ಬಾರಿಗೆ ಮಂಡ್ಯಕ್ಕೆ ಆಗಮಿಸಿದ ಯೋಗಿ ಅವರನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರವೇ ನೆರೆದಿತ್ತು.

ರಣಬಿಸಿಲನ್ನೂ ಲೆಕ್ಕಿಸದೆ ಜನರು ಯೋಗಿ ಆಗಮನಕ್ಕಾಗಿ ಕಾದು ಕುಳಿತಿದ್ದರು. ಪ್ರಚಾರ ರಥದಲ್ಲಿದ್ದ ಯೋಗಿ ಆದಿತ್ಯನಾಥ ಅವರು ಜನರತ್ತ ಕೈ ಮುಗಿಯುತ್ತಾ, ಒಮ್ಮೊಮ್ಮೆ ಕೈ ಬೀಸುತ್ತಾ ಸಾಗಿದರೆ ಜನಸಮೂಹದ ಕಡೆಯಿಂದ ಪ್ರಚಾರರಥಯಾತ್ರೆ ಕಡೆಗೆ ಹೂವುಗಳನ್ನು ಎಸೆದು ಬಿಜೆಪಿ ಕಾರ್ಯರ್ತರು ಸ್ವಾಗತ ಕೋರಿದರು. ಯೋಗಿ. ಯೋಗಿ ಎಂದು ಹಲವರು ಘೋಷಣೆಗಳನ್ನು ಕೂಗಿದರು. ಮಧ್ಯಾಹ್ನ 12.30ರ ಸಮಯಕ್ಕೆ ಪ್ರಚಾರ ರಥಯಾತ್ರೆ ಸಾರ್ವಜನಿಕ ಸಭೆ ನಿಗದಿಯಾಗಿದ್ದ ಸಿಲ್ವರ್ ಜ್ಯುಬಿಲಿ ಪಾರ್ಕ್ಗೆ ಆಗಮಿಸಿತು.

ಭಾರೀ ಬಿಗಿ ಭದ್ರತೆ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆಗಮನದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಭಾರೀ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ರೋಡ್ ಶೋ ನಡೆಯುವ ಜೆ.ಸಿ.ವೃತ್ತದಿಂದ ಸಿಲ್ವರ್ ಜ್ಯುಬಿಲಿ ಪಾರ್ಕ್‌ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಕಬ್ಬಿಣದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಎರಡೂ ಕಡೆಗಳಲ್ಲಿ ಮುಂಜಾಗ್ರತೆಯಾಗಿ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು.

ಪರ್ಯಾಯ ಮಾರ್ಗ : ಬೆಂಗಳೂರು-ಮೈಸೂರು ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಲಾಗಿತ್ತು. ಬೆಂಗಳೂರು ಕಡೆಯಿಂದ ಬರುವ ವಾಹನಗಳನ್ನು ನಗರದೊಳಗಿರುವ ವಿವೇಕಾನಂದ ರಸ್ತೆ ಮೂಲಕ ಕೆ.ಆರ್.ರಸ್ತೆ ಮಾರ್ಗವಾಗಿ ಬಸ್ ನಿಲ್ದಾಣಕ್ಕೆ ತೆರಳುವಂತೆ ವ್ಯವಸ್ಥೆ ಮಾಡಲಾಗಿತ್ತು. ಮೈಸೂರು ಕಡೆಯಿಂದ ಬರುವ ವಾಹನಗಳನ್ನು ಕಲ್ಲಹಳ್ಳಿ ಬಳಿ ಎಪಿಎಂಸಿ ಮಾರುಕಟ್ಟೆ ಮುಂಭಾಗದ ರಸ್ತೆಯಿಂದ ಬನ್ನೂರು ರಸ್ತೆಗೆ ಸಂಪರ್ಕ ಕಲ್ಪಿಸುವಂತೆ ಮಾಡಿ ನಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ