ಕಳೆದ ವಾರವಷ್ಟೇ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬಾಕಿ ಜಿಎಸ್‌ಟಿ ನೀಡುವಂತೆ ಪತ್ರ ಬರೆದಿದ್ದರು. ಇದೀಗ ರಾಜ್ಯ ಸಭೆಯಲ್ಲಿ ಇಂದು ( ಡಿಸೆಂಬರ್ 12 ) ಮಾತನಾಡಿದ ನಿರ್ಮಲಾ ಸೀತಾರಾಮನ್ ಯಾವುದೇ ರಾಜ್ಯದ ಜಿಎಸ್‌ಟಿ ಬಾಕಿ ಉಳಿದಿಲ್ಲ ಎಂದು ಉತ್ತರ ನೀಡಿದ್ದಾರೆ.
ಕೇಂದ್ರದಿಂದ ಜಿಎಸ್‌ಟಿ ಬಾಕಿ ಉಳಿದಿದೆ ಎಂಬ ಹೇಳಿಕೆಗಳು ಸರಿಯಲ್ಲ, ರಾಜ್ಯಗಳು ಎಜಿ ವರದಿಯನ್ನು ಸಲ್ಲಿಸದೇ ಇರುವುದು ತಪ್ಪು ಎಂದರು. “ಅಕೌಂಟೆಂಟ್ ಜನರಲ್‌ನ ಪ್ರಮಾಣೀಕರಣ ಕಡ್ಡಾಯವಾಗಿದೆ ಎಂಬುದನ್ನು ರಾಜ್ಯಗಳು ಅರ್ಥ ಮಾಡಿಕೊಳ್ಳುವುದು ಅತಿಮುಖ್ಯ. ಎಜಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸದಿದ್ದರೆ ಜಿಎಸ್‌ಟಿ ಬಾಕಿ ಬಿಡುಗಡೆ ಸಾಧ್ಯವಿಲ್ಲ, ಕೆಲ ರಾಜ್ಯಗಳು ಎಜಿ ಪ್ರಮಾಣ ಪತ್ರ ಸಲ್ಲಿಸಿದ ನಂತರವೂ ಅಂತಿಮ ಬಾಕಿ ಬಿಡುಗಡೆಯನ್ನು ಸ್ವಲ್ಪ ತಡೆಯುವಂತೆ ಮನವಿ ಮಾಡುತ್ತವೆ” ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ತೃಣಮೂಲ ಕಾಂಗ್ರೆಸ್ ಸದಸ್ಯ ಸಾಕೇತ್ ಗೋಖಲೆ ಪಶ್ಚಿಮ ಬಂಗಾಳದ ಜಿಎಸ್‌ಟಿ ಬಾಕಿ ಕುರಿತು ಕೇಳಿದ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಉತ್ತರಿಸಿದ್ದು, 2022-23ರ ಆರ್ಥಿಕ ವರ್ಷದಲ್ಲಿ ಕರ್ನಾಟಕ ಹೊತರುಪಡಿಸಿ ಉಳಿದ ಯಾವುದೇ ರಾಜ್ಯಗಳು ಎಜಿ ಪ್ರಮಾಣಪತ್ರವನ್ನು ನೀಡಿಲ್ಲ ಎಂದು ತಿಳಿಸಿದರು.