Mysore
29
few clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಲಂಡನ್‌ ಮಾರುಕಟ್ಟೆಯಲ್ಲಿ ದರ ಹೆಚ್ಚಳ ಪರಿಣಾಮ: ರೊಬಸ್ಟಾ ಕಾಫಿ ಬೆಲೆ 6 ಸಾವಿರಕ್ಕೆ ಏರಿಕೆ

ಚಿಕ್ಕಮಗಳೂರು : ಸತತವಾಗಿ ಏರಿಕೆ ಕಾಣುತ್ತಿರುವ ರೊಬಸ್ಟಾ ಕಾಫಿ ದರವು ಹೊಸ ದಾಖಲೆ ಬರೆದಿದೆ. 50 ಕೆ.ಜಿ ತೂಕದ ರೊಬಸ್ಟಾ ಚೆರ್ರಿ ಮೂಟೆಯೊಂದಕ್ಕೆ ₹ 6 ಸಾವಿರ ಧಾರಣೆ ಬಂದಿದ್ದು, ಇದು ಸಾರ್ವಕಾಲಿಕ ಗರಿಷ್ಠ ಬೆಲೆಯಾಗಿದೆ.

ಲಂಡನ್ ಮಾರುಕಟೆಯಲ್ಲಿ ರೊಬಸ್ಟಾ ಕಾಫಿ ಬೀನ್ಸ್‌ ಟನ್‌ಗೆ 2,411 ಡಾಲರ್ ಆಸುಪಾಸಿನಲ್ಲಿ ಶುಕ್ರವಾರ ಮಾರಾಟವಾಗಿದೆ. ಪರಿಣಾಮ ಸ್ಥಳೀಯ ಕಾಫಿ ಮಾರುಕಟ್ಟೆಯಲ್ಲೂ ಧಾರಣೆ ಮತ್ತು ಬೇಡಿಕೆ ಹೆಚ್ಚಳವಾಗಿದೆ. ಸದ್ಯ 1 ಕೆ.ಜಿ ರೊಬಸ್ಟಾ ಕಾಫಿ ಬೀನ್ಸ್‌ಗೆ ₹ 220 ದರ ಇದೆ.

ಕಳಸ ತಾಲ್ಲೂಕಿನಲ್ಲಿ ಈ ವರ್ಷದ ಕಾಫಿ ಫಸಲು ಶೇ 30ರಷ್ಟು ಕಡಿಮೆ ಇದೆ. ಜನವರಿಯಲ್ಲಿ ಬೆಲೆ ₹5 ಸಾವಿರ ತಲುಪಿದಾಗ ಬಹುತೇಕ ಬೆಳೆಗಾರರು ಕಾಫಿ ಮಾರಿದ್ದಾರೆ. ಸದ್ಯ ಕೆಲವೇ ಬೆಳೆಗಾರರಲ್ಲಿ ಫಸಲು ಉಳಿದಿದ್ದು, ಅವರೂ ಬೆಲೆ ಇನ್ನಷ್ಟು ಏರುವ ನಿರೀಕ್ಷೆಯಲ್ಲಿದ್ದಾರೆ.

ರೊಬಸ್ಟಾ ಕಾಫಿ ಬೆಳೆಯುವ ಇಂಡೊನೇಷ್ಯಾ, ವಿಯಟ್ನಾಂ ಹಾಗೂ ಅರೇಬಿಕಾ ಕಾಫಿ ತಳಿ ಬೆಳೆಯುವ ಬ್ರೆಜಿಲ್‌ನಲ್ಲಿ ಈ ಬಾರಿ ಪ್ರತಿಕೂಲ ಹವಾಮಾನದಿಂದ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಪೂರೈಕೆ ಕುಗ್ಗಿದ್ದು, ಬೆಲೆ ಸತತವಾಗಿ ಏರುತ್ತಲೇ ಇದೆ ಎನ್ನುತ್ತಾರೆ ಕಾಫಿ ವ್ಯಾಪಾರಿಗಳು.

‘ಸದ್ಯಕ್ಕೆ ಬೆಳೆಗಾರರ ಕೈಯಲ್ಲಿ ಶೇ 10ರಷ್ಟು ಪ್ರಮಾಣದ ಕಾಫಿಯೂ ಉಳಿದಿಲ್ಲ. ಬೆಲೆ ಏರುತ್ತಿದ್ದರೂ, ಅದರ ಲಾಭ ಪಡೆಯಲು ನಮ್ಮಂತಹ ಬೆಳೆಗಾರರಿಗೆ ಆಗುತ್ತಿಲ್ಲ’ ಎಂದು ಸಣ್ಣ ಪ್ರಮಾಣದಲ್ಲಿ ಕಾಫಿ ಬೆಳೆಯುವ ಬೆಳೆಗಾರರು ಬೇಸರ ವ್ಯಕ್ತಪಡಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!