ನವದೆಹಲಿ : ಮಾಧ್ಯಮ ಸಂಸ್ಥೆಗಳು ಪೋಸ್ಟ್ ಮಾಡಿದ ವರದಿಗಳು ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ‘ನಕಲಿ ಸುದ್ದಿ’ಗಳ ಮೇಲೆ ನಿಗಾ ಇಡಲು ‘ವಾಸ್ತವ ಪರಿಶೀಲನೆ’ ಘಟಕವನ್ನು ಸ್ಥಾಪಿಸುವ ಕರ್ನಾಟಕ ಸರಕಾರದ ನಿರ್ಧಾರಕ್ಕೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ(ಇಜಿಐ) ವಿರೋಧ ವ್ಯಕ್ತಪಡಿಸಿದೆ.
ಬಾಂಬೆ ಹೈಕೋರ್ಟ್ ನಲ್ಲಿ IT ನಿಯಮಗಳಿಗೆ (2023) ತಿದ್ದುಪಡಿಗಳನ್ನು ಪ್ರಶ್ನಿಸಿರುವ ತನ್ನ ಅರ್ಜಿಯನ್ನು ಉಲ್ಲೇಖಿಸಿ ಎಡಿಟರ್ಸ್ ಗಿಲ್ಡ್ ಹೇಳಿಕೆಯನ್ನು ನೀಡಿದೆ ಹಾಗೂ “ವಾಸ್ತವ-ತಪಾಸಣಾ ಘಟಕಕ್ಕೆ ಎಚ್ಚರಿಕೆ ನೀಡಿದೆ.
ವಿಶೇಷವಾಗಿ ಆನ್ಲೈನ್ ನಲ್ಲಿ ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳ ಸಮಸ್ಯೆ ಇದೆ, ಎಂದು ಎಡಿಟರ್ಸ್ ಗಿಲ್ಡ್ ಒಪ್ಪಿಕೊಂಡಿದೆ . ಆದರೆ ಅಂತಹ ವಿಷಯವನ್ನು ಗುರುತಿಸುವ ಹಾಗೂ ತೆಗೆದುಹಾಕುವ ಪ್ರಯತ್ನಗಳನ್ನು ಸರಕಾರದ ವ್ಯಾಪ್ತಿಯಲ್ಲಿಲ್ಲದ ಸ್ವತಂತ್ರ ಸಂಸ್ಥೆಗಳು ಮುನ್ನಡೆಸಬೇಕು. ಇಲ್ಲದಿದ್ದರೆ ಅದು ಭಿನ್ನಾಭಿಪ್ರಾಯದ ಧ್ವನಿಗಳನ್ನು ಹತ್ತಿಕ್ಕುವ ಸಾಧನಗಳಾಗುತ್ತವೆ ಎಂದಿದೆ.
“ಯಾವುದೇ ಮೇಲ್ವಿಚಾರಣಾ ಚೌಕಟ್ಟು ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳು ಸೇರಿದಂತೆ ನೈಸರ್ಗಿಕ ನ್ಯಾಯದ ತತ್ವಗಳನ್ನು ಅನುಸರಿಸಬೇಕು, ಇದು ಪತ್ರಿಕಾ ಸ್ವಾತಂತ್ರ್ಯವನ್ನು ಹಾಳು ಮಾಡಬಾರದು” ಎಂದು EGI ಹೇಳಿಕೆ ತಿಳಿಸಿದೆ.
“ಉದ್ದೇಶಿತ ಸತ್ಯ-ಪರಿಶೀಲನಾ ಘಟಕದ ವ್ಯಾಪ್ತಿ ಹಾಗೂ ಅಧಿಕಾರಗಳು ಮತ್ತು ಅದು ಕಾರ್ಯನಿರ್ವಹಿಸುವ ಆಡಳಿತ ಕಾರ್ಯವಿಧಾನವನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸಲು ಗಿಲ್ಡ್, ಕರ್ನಾಟಕ ಸರಕಾರವನ್ನು ಒತ್ತಾಯಿಸಿದೆ
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರವು ಕಳೆದ ವಾರ ‘ವಾಸ್ತವ-ಪರಿಶೀಲನಾ ಘಟಕ’ ರಚನೆಗೆ ಅನುಮತಿ ನೀಡಿತು, ನಕಲಿ ಸುದ್ದಿ ಪ್ರಜಾಪ್ರಭುತ್ವದ ದುರ್ಬಲಗೊಳ್ಳುವಿಕೆ ಮತ್ತು ಸಮಾಜದಲ್ಲಿ ಧ್ರುವೀಕರಣಕ್ಕೆ ಕಾರಣವಾಗಿದೆ” ಎಂದು ಸಿಎಂ ಕಚೇರಿ ಪ್ರಕಟಿಸಿತ್ತು..
“‘ನಕಲಿ’ ಎಂದು ಟ್ಯಾಗ್ ಮಾಡಲಾದ ಪೋಸ್ಟ್ ಗಳು ಮತ್ತು ವರದಿಗಳನ್ನು ತೆಗೆದುಹಾಕಲಾಗುವುದು ಮತ್ತು ಅಗತ್ಯವಿದ್ದರೆ ಸರಕಾರವು ದಂಡದ ಕ್ರಮಗಳನ್ನು ಸಹ ತೆಗೆದುಕೊಳ್ಳಬಹುದು” ಎಂದು ರಾಜ್ಯದ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಇತ್ತೀಚೆಗೆ ಹೇಳಿದ್ದರು.
ಕರ್ನಾಟಕ ಸರಕಾರವು ‘ನಕಲಿ ಸುದ್ದಿ’ಗಳ ಮೇಲೆ ನಿಗಾ ಇಡಲು ‘ವಾಸ್ತವ ಪರಿಶೀಲನೆ ಘಟಕ’ವನ್ನು ಸ್ಥಾಪಿಸುವ ನಿರ್ಧಾರದ ಕೆಲವು ಅಂಶಗಳ ಬಗ್ಗೆ ಇಜಿಐ ಕಳವಳಗೊಂಡಿದೆ. ಅಂತಹ ಘಟಕಗಳು ಕಾರ್ಯನಿರ್ವಾಹಕ ನಿಯಂತ್ರಣದಿಂದ ಸ್ವತಂತ್ರವಾಗಿವೆ ಹಾಗೂ ಪತ್ರಿಕಾ ಸ್ವಾತಂತ್ರ್ಯವನ್ನು ತುಳಿಯದಂತೆ ಅವುಗಳ ವ್ಯಾಪ್ತಿ ಮತ್ತು ಅಧಿಕಾರಗಳನ್ನು ನಿರ್ದಿಷ್ಟಪಡಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಎಲ್ಲಾ ಸರಕಾರಗಳನ್ನು ಒತ್ತಾಯಿಸುತ್ತೇವೆ ಎಂದು ಎಡಿಟರ್ಸ್ ಗಿಲ್ಡ್ ಟ್ವೀಟಿಸಿದೆ.