ಬೆಂಗಳೂರು : ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಸರಳ ರೀತಿಯಲ್ಲಿ ಜನರಿಗೆ ತಲುಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಅದರಲ್ಲೂ ಗೃಹಲಕ್ಷ್ಮೀ ಯೋಜನೆಗೆ ಅರ್ಹರಾಗಿರುವ ಮಹಿಳೆಯರಿಗೆ ಸರ್ಕಾರ ಬಿಗ್ ರಿಲೀಫ್ ನೀಡಿದೆ. ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರು ಯಾವುದೇ ಚಿಂತೆ ಮಾಡಬೇಕಿಲ್ಲ. ಗಂಟೆಗಟ್ಟಲೇ ಕ್ಯೂ ನಿಲ್ಲುವ ಸಮಸ್ಯೆಯು ಇಲ್ಲ. ಏಕೆಂದರೆ, ಗೃಹಲಕ್ಷ್ಮೀ ಯೋಜನೆಗೆ ಮನೆ ಬಾಗಿಲಲ್ಲಿಯೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲು ಸರ್ಕಾರ ಮುಂದಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜೊತೆ ಕೈಜೋಡಿಸಿರುವ ಕಂದಾಯ ಇಲಾಖೆ ಗೃಹಲಕ್ಷ್ಮೀ ಯೋಜನೆಯ ಅರ್ಜಿ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ, ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಅರ್ಜಿ ಸಲ್ಲಿಕೆಯನ್ನು ಸರಳವಾಗಿಸಲು ಕಂದಾಯ ಇಲಾಖೆ ನೇಮಿಸುವ ಸಿಬ್ಬಂದಿ ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಗೃಹಲಕ್ಷ್ಮೀ ಯೋಜನೆ ಅನುಷ್ಠಾನಕ್ಕಾಗಿ ಕಂದಾಯ ಇಲಾಖೆಯ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ. ಯೋಜನೆ ಅಡಿಯಲ್ಲಿ ರಾಜ್ಯಾದ್ಯಂತ 1.30 ಕೋಟಿ ಜನರು ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ. ಎರಡು ತಿಂಗಳೊಳಗೆ ಅರ್ಜಿಗಳನ್ನು ಸ್ವೀಕರಿಸಿ, ವಿಲೇವಾರಿ ಮಾಡಬೇಕಿದ್ದು, ಅದು ಸವಾಲಿನ ಕೆಲಸವಾಗಿದೆ. ಇಡೀ ವರ್ಷದಲ್ಲಿ ಕಂದಾಯ ಇಲಾಖೆ 1.50 ಕೋಟಿ ಅರ್ಜಿಗಳನ್ನು ವಿಲೇವಾರಿ ಮಾಡುತ್ತದೆ. ಆದರೆ, 2 ತಿಂಗಳಲ್ಲಿ ಅಷ್ಟೇ ಪ್ರಮಾಣದ ಅರ್ಜಿಗಳನ್ನು ವಿಲೇವಾರಿ ಮಾಡಬೇಕಿದ್ದು, ಈಗಾಗಲೇ ತಯಾರಿ ನಡೆಸಲಾಗಿದೆ.
ರಾಜ್ಯದಲ್ಲಿನ 898 ನಾಡ ಕಚೇರಿ ಸೇರಿ 7 ಸಾವಿರಕ್ಕೂ ಹೆಚ್ಚಿನ ಸೇವಾ ಸಿಂಧು ಕಚೇರಿ, ಬಾಪೂಜಿ ಸೇವಾ ಕೇಂದ್ರ (ಗ್ರಾಮ ಒನ್ ಕೇಂದ್ರ), ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಜೂನ್ 15ರಿಂದ ಅರ್ಜಿ ಸ್ವೀಕಾರ ಆರಂಭವಾಗಲಿದೆ. ನಾಡ ಕಚೇರಿಗಳಲ್ಲಿ ಸೂಕ್ತ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳ ಲಾಗುತ್ತಿದೆ. ಫಲಾನುಭವಿಗಳು ಒಮ್ಮೆಲೇ ಅರ್ಜಿ ಸಲ್ಲಿಸಲು ಬಂದು ಗೊಂದಲ ಸೃಷ್ಟಿಯಾಗುವುದನ್ನು ತಡೆಯಲು, ಆನ್‌ಲೈನ್ ಮತ್ತು ಮೊಬೈಲ್ ಆ್ಯಪ್ ಮೂಲಕವೂ ಅರ್ಜಿ ಸ್ವೀಕರಿಸಲು ಕ್ರಮ ಕೈಗೊಳ್ಳಲಾಗಿದೆ.
ಕಂದಾಯ ಇಲಾಖೆ ಜತೆಗೆ ಕೃಷಿ ಇಲಾಖೆ ಸೇರಿ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಫೀಲ್ಡ್ ಸಿಬ್ಬಂದಿಗಳನ್ನು ಅರ್ಜಿ ಸ್ವೀಕಾರ ಕಾರ್ಯದಲ್ಲಿ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ. ಅವರುಗಳು ಫಲಾನುಭವಿಗಳ ಮನೆಗೆ ತೆರಳಿ ಆ್ಯಪ್ ಅಥವಾ ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿಮಾಡಿಕೊಂಡು ಸಲ್ಲಿಕೆ ಮಾಡಲಿದ್ದಾರೆ. ಅದಕ್ಕಾಗಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ತಾಲೂಕು ಮಟ್ಟದಲ್ಲಿ ತರಬೇತಿ ನೀಡಲು ಸರ್ಕಾರ ಮುಂದಾಗಿದೆ.
ಪಿಂಚಣಿ ಪಡೆಯುವವರಿಗೂ ಗೃಹಲಕ್ಷ್ಮೀ ಅನ್ವಯ! : ಇನ್ನು, ಕಂದಾಯ ಇಲಾಖೆ ಅಡಿಯಲ್ಲಿ 78 ಲಕ್ಷ ಜನರು ವಿವಿಧ ರೀತಿಯ ಪಿಂಚಣಿ ಪಡೆಯುತ್ತಿದ್ದಾರೆ. ವಾರ್ಷಿಕ 10,411 ಕೋಟಿ ರೂ.. ಪಿಂಚಣಿ ವಿತರಿಸಲಾಗುತ್ತಿದೆ. ಆದರೆ, ಕೆಲವರು ಗೊಂದಲ ಸೃಷ್ಟಿಸುವ ಉದ್ದೇಶದಿಂದ ಪಿಂಚಣಿ ಪಡೆಯುತ್ತಿರುವ ಮಹಿಳೆಯರಿಗೆ ಗೃಹಲಕ್ಷ್ಮೀ ಅನ್ವಯವಾಗುವುದಿಲ್ಲ ಎಂದು ಸುಳ್ಳು ಹರಡುತ್ತಿದ್ದಾರೆ. ವಿಧವೆಯರು, ಹಿರಿಯ ನಾಗಕರಿರು, ಅಂಗವಿಕಲ ಮಹಿಳೆಯರು ಹಾಗೂ ತೃತೀಯ ಲಿಂಗಿಗಳಿಗೆ ಗೃಹಜ್ಯೋತಿ ಅನ್ವಯವಾಗುತ್ತದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.