Mysore
25
haze

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಬಂಡಿಪುರವನ್ನು ಅದಾನಿಗೆ ಮಾರಬೇಡಿ : ಪ್ರಧಾನಿ ಭೇಟಿ ಬೆನ್ನಲ್ಲೇ ಕಾಂಗ್ರೆಸ್ ವ್ಯಂಗ್ಯ

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ಬಂಡಿಪುರ ಹುಲಿ ಸಂರಕ್ಷಣಾ ಅರಣ್ಯ ಸಫಾರಿಯಲ್ಲಿ ಕಾಂಗ್ರೆಸ್ ಕಟುವಾಗಿ ಟೀಕಿಸಿದೆ. ‘ಹುಲಿ ಯೋಜನೆಯ 50ನೇ ವರ್ಷದ ಆಚರಣೆ’ ಕಾರ್ಯಕ್ರಮದ ನಿಮಿತ್ತ ಬಂಡಿಪುರಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಬಹುದು. ಆದರೆ ವಾಸ್ತವ ಸಂಪೂರ್ಣ ತದ್ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಭಾನುವಾರ ಹೇಳಿದೆ.”50 ವರ್ಷಗಳ ಹಿಂದೆ ಬಂಡಿಪುರದಲ್ಲಿ ಆರಂಭಿಸಿದ ಹುಲಿ ಯೋಜನೆಗೆ ಪ್ರಧಾನಿ ಮೋದಿ ಅವರು ಇಂದು ಸಂಪೂರ್ಣ ಶ್ರೇಯಸ್ಸು ಪಡೆದುಕೊಳ್ಳಲಿದ್ದಾರೆ.

ಅವರು ಅದ್ಭುತ ವೀಕ್ಷಣೆಯ ಅನುಭವ ಪಡೆದುಕೊಳ್ಳಲಿದ್ದಾರೆ. ಆದರೆ ಪರಿಸರ, ಅರಣ್ಯಗಳು, ವನ್ಯಜೀವಿಗಳು ಮತ್ತು ಅರಣ್ಯ ಪ್ರದೇಶಗಳಲ್ಲಿ ಜೀವಿಸುತ್ತಿರುವ ಮೂಲನಿವಾಸಿ ಜನರ ರಕ್ಷಣೆಗಾಗಿ ಮಾಡಿರುವ ಎಲ್ಲ ಕಾನೂನುಗಳನ್ನು ನಾಶಪಡಿಸುವ ಮೂಲಕ ಅವರು ಮತ್ತಷ್ಟು ತಮಾಷೆ ಮಾಡುತ್ತಿದ್ದಾರೆ. ಅವರು ಹೆಡ್‌ಲೈನ್‌ನಲ್ಲಿ ಕಾಣಿಸಿಕೊಳ್ಳಬಹುದು. ಆದರೆ ವಾಸ್ತವಾಂಶವು ಸಂಪೂರ್ಣವಾಗಿ ತದ್ವಿರುದ್ಧವಾಗಿದೆ” ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರ ಸಫಾರಿಯ ಬಗ್ಗೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಕೂಡ ವ್ಯಂಗ್ಯವಾಡಿದೆ. ಬಂಡಿಪುರ ಹುಲಿ ಸಂರಕ್ಷಣಾ ಯೋಜನೆಯನ್ನು 1973ರಲ್ಲಿ ಕಾಂಗ್ರೆಸ್ ಸರ್ಕಾರ ಪರಿಚಯಿಸಿತ್ತು ಎಂದಿರುವ ಪಕ್ಷ, ರಾಷ್ಟ್ರೀಯ ಸಂಪತ್ತನ್ನು ಉದ್ಯಮಿ ಗೌತಮ್ ಅದಾನಿ ಅವರಿಗೆ ಮಾರಾಟ ಮಾಡಬೇಡಿ ಎಂದು ಹೇಳಿದೆ.”70 ವರ್ಷದಿಂದ ಕಾಂಗ್ರೆಸ್ ಏನು ಮಾಡಿದೆ” ಎನ್ನುವ ನರೇಂದ್ರ ಮೋದಿ ಅವರೇ, ಇಂದು ನೀವು ಸಫಾರಿ ಮೋಜು ಮಾಡುತ್ತಿರುವ ಬಂಡೀಪುರದ ಹುಲಿ ಸಂರಕ್ಷಣಾ ಯೋಜನೆಯನ್ನು 1973ರಲ್ಲಿ ಜಾರಿಗೊಳಿಸಿದ್ದು ಕಾಂಗ್ರೆಸ್ ಸರ್ಕಾರವೇ. ಅದರ ಪರಿಣಾಮವೇ ಇಂದು ಹುಲಿಗಳ ಸಂಖ್ಯೆ ಗಣನೀಯ ಏರಿಕೆ ಕಂಡಿದೆ.

ತಮ್ಮಲ್ಲಿ ವಿಶೇಷ ಮನವಿ – ಬಂಡೀಪುರವನ್ನು ಅದಾನಿಗೆ ಮಾರಬೇಡಿ!” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.ಬಂಡಿಪುರ ಹುಲಿ ಸಂರಕ್ಷಣಾ ಅರಣ್ಯಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ ಎನಿಸಿರುವ ನರೇಂದ್ರ ಮೋದಿ ಅವರು ಅಲ್ಲಿನ ಸಂರಕ್ಷಣಾ ಚಟುವಟಿಕೆಗಳಲ್ಲಿ ತೊಡಗಿರುವ ಮುಂಚೂಣಿ ಅರಣ್ಯ ಸಿಬ್ಬಂದಿ ಹಾಗೂ ಸ್ವ ಸಹಾಯ ಗುಂಪುಗಳ ಜತೆ ಸಂವಾದ ನಡೆಸಿದರು. ತಮಿಳುನಾಡಿನ ಮದುನಲೈ ಹುಲಿ ಸಂರಕ್ಷಣ ಅರಣ್ಯದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿದ ಅವರು ಮಾವುತ ಮತ್ತು ಕಾವಾಡಿಗಳ ಜತೆ ಕೂಡ ಸಂವಾದಿಸಿದರು.

ಮತ್ತಷ್ಟು ಯೋಜನೆಗಳನ್ನು ನೀಡಿ ಎಂದ ಸ್ಟಾಲಿನ್ : ತಮಿಳುನಾಡಿನಲ್ಲಿ ಶನಿವಾರ ಸಾರಿಗೆ ವಲಯಕ್ಕೆ ಸಂಬಂಧಿಸಿದಂತೆ ಸುಮಾರು 5,000 ಕೋಟಿ ರೂ ವೆಚ್ಚದ ಹೊಸ ಯೋಜನೆಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ ಅವರು, ಚೆನ್ನೈ- ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮತ್ತು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡಗಳನ್ನು ಉದ್ಘಾಟಿಸಿದ್ದರು. ಕೇಂದ್ರ ಸರ್ಕಾರದಿಂದ ತಮ್ಮ ರಾಜ್ಯಕ್ಕೆ ಮತ್ತಷ್ಟು ಯೋಜನೆಗಳನ್ನು ಹಂಚಿಕೆ ಮಾಡುವಂತೆ ಈ ಸಂದರ್ಭದಲ್ಲಿ ತಮಿಳುನಾಡಿ ಸಿಎಂ ಎಂಕೆ ಸ್ಟಾಲಿನ್ ಅವರು ಪ್ರಧಾನಿಗೆ ಮನವಿ ಮಾಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ