ತಮಿಳುನಾಡು: ಸ್ಟಾಲಿನ್ ನೇತೃತ್ವದ ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ ಮತ್ತು ಮಕ್ಕಳ್ ನೀಧಿ ಮೈಯ್ಯಮ್(ಎಂಎನ್‌ಎಂ) ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಅವರು ಮುಂಬರುವ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಎಂಎನ್‌ಎಂ ಸ್ಪರ್ಧೆಯಿಂದ ಹಿಂದೆ ಸರಿದು ಡಿಎಂಕೆ ಪಕ್ಷವನ್ನು ಬೆಂಬಲಿಸಿದರೆ, ಮುಂದಿನ ಅಂದರೆ 2025ರ ರಾಜ್ಯ ಸಭೆ ಚುನವಾಣೆಯಲ್ಲಿ ಎಂಎನ್‌ಎಂ ಗೆ ಒಂದು ಸ್ಥಾನ ಬಿಟ್ಟುಕೊಡುವುದಾಗಿ ಒಪ್ಪಂದವಾಗಿದೆ.
ಶನಿವಾರ (ಮಾ.೦೯) ಡಿಎಂಕೆ ಪಕ್ಷದ ಕಾರ್ಯಾಲಯದಲ್ಲಿ ಕಮಲ್ ಹಾಸನ್ ಹಾಗೂ ಸಿಎಂ ಸ್ಟಾಲಿನ್ ಎರಡು ಪಕ್ಷಗಳ ನಡುವಿನ ಒಪ್ಪಂದವನ್ನು ಅಂತಿಮಗೊಳಿಸಿದರು.
ಯಾವುದೇ ಸ್ಥಾನ ಮಾನದ ಅಸೆಗಾಗಿ ನಾವು ಡಿಎಂಕೆ ಪಕ್ಷವನ್ನು ಬೆಂಬಲಿಸಿಲ್ಲ. ಬದಲಾಗಿ ದೇಶದ ಒಳಿತಿಗಾಗಿ ನಮ್ಮ ಪಕ್ಷ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಡಿಎಂ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ಎಂಎನ್‌ಎಂ ಪಕ್ಷದ ಕಮಲ್ ಹಾಸನ್ ಇದೇ ವೇಳೆ ತಿಳಿಸಿದರು.
ಈ ಒಪ್ಪಂದದ ಅನುಸಾರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಂಎನ್‌ಎಂ ಪಕ್ಷವೂ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಬದಲಾಗಿ ಡಿಎಂಕೆ ಪರ ಪ್ರಚಾರ ನಡೆಸಲಿದೆ.