ನವದೆಹಲಿ : ಉಗ್ರಸ್ವರೂಪ ಪಡೆದುಕೊಂಡು ಮುನ್ನುಗ್ಗುತ್ತಿರುವ ಬಿಪರ್‌ಜಾಯ್ ಚಂಡಮಾರುತ ಇಂದು ಸಂಜೆ ಗುಜರಾತ್‍ನ ಕಛ್ ತೀರಕ್ಕೆ ಅಪ್ಪಳಿಸಲಿದೆ.
ಸಂಜೆ 4 ಮತ್ತು ರಾತ್ರಿ 8 ಗಂಟೆಯ ಒಳಗಡೆ ಚಂಡಮಾರುತ ಕಛ್ ತೀರಕ್ಕೆ ಅಪ್ಪಳಿಸಿ ಪಾಕಿಸ್ತಾನದ ಕಡೆಗೆ ಸಾಗಲಿದೆ. ಕಳೆದ 58 ವರ್ಷಗಳಲ್ಲೇ ಜೂನ್ ತಿಂಗಳಲ್ಲಿ ಕಾಣಿಸಿಕೊಳ್ಳುತ್ತಿರುವ ದೊಡ್ಡ ಚಂಡಮಾರುತ ಇದಾಗಿದ್ದು ಅರಬ್ಬಿ ಸಮುದ್ರದ ಸಮೀಪದ ಪ್ರದೇಶಗಳಲ್ಲಿ ಭಾರೀ ಅನಾಹುತ ಸೃಷ್ಟಿಸಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ಗುಜರಾತ್‍ನ ಸೌರಾಷ್ಟ್ರ, ಕಛ್, ಜಾಮ್‍ನಗರ, ದ್ವಾರಕಾ ಸೇರಿ 8 ಜಿಲ್ಲೆಗಳಿಗೆ ಹೈಅಲರ್ಟ್ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಮುದ್ರ ತೀರದಿಂದ 10 ಕಿ.ಮೀ. ಅಂತರದಲ್ಲಿನ ಸುಮಾರು 74 ಸಾವಿರ ಮಂದಿಯನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ.
ಪಶ್ಚಿಮ ರೈಲ್ವೇ 76 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಗಾಳಿಯ ವೇಗ ಗಂಟೆಗೆ 125 ರಿಂದ 150 ಕಿ.ಮೀ ಇರಲಿದ್ದು, ಪ್ರವಾಹ ಪರಿಸ್ಥಿತಿಯೂ ಎದುರಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
18 ಎನ್‍ಡಿಆರ್‌ಎಫ್,12 ಎಸ್‌ಡಿಆರ್‌ಎಫ್, 115 ರಾಜ್ಯ ರಸ್ತೆ ಹಾಗೂ ನಿರ್ಮಾಣ ಕೇಂದ್ರ ತಂಡಗಳು, 397 ವಿದ್ಯುತ್ ಇಲಾಖೆಯ ತಂಡಗಳನ್ನು ರಕ್ಷಣಾ ಕೆಲಸಕ್ಕೆ ನಿಯೋಜಿಸಲಾಗಿದೆ. ವಾಯುಪಡೆ, ನೌಕಾಪಡೆಗೆ ಯಾವುದಕ್ಕೂ ಸನ್ನದ್ಧವಾಗಿರುವಂತೆ ಸೂಚಿಸಲಾಗಿದೆ.
ಬಿರುಗಾಳಿಯಿಂದ ಈಗಾಗಲೇ ಗುಜರಾತ್ ತೀರದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮೊಬೈಲ್ ಹಾಗೂ ಸ್ಥಿರ ದೂರವಾಣಿಯಲ್ಲಿ ಸಂಪರ್ಕ ವ್ಯತ್ಯಯವಾಗಲಿರುವ ಕಾರಣ ರಕ್ಷಣಾ ತಂಡಗಳಿಗೆ ಸ್ಯಾಟಲೈಟ್ ಫೋನ್‌ಗಳನ್ನು ನೀಡಲಾಗಿದೆ. ಶಾಲೆ ಮತ್ತು ಇತರ ಸಭಾಭವನದಂತಹ ದೊಡ್ಡ ಕಟ್ಟಡಗಳಲ್ಲಿ ತಾತ್ಕಾಲಿಕ ಆಶ್ರಯ ಶಿಬಿರ ನಿರ್ಮಾಣ ಮಾಡಲಾಗಿದೆ.
ಚಂಡಮಾರುತರದಿಂದ ಸಮುದ್ರ ಪ್ರಕ್ಷುಬ್ಧವಾಗಿದು ಸೌರಾಷ್ಟ್ರ ಮತ್ತು ಕಛ್ ತೀರದಲ್ಲಿ 6 ಅಡಿ ಎತ್ತರದ ಅಲೆಗಳು ಏಳಲು ಆರಂಭಿಸಿದೆ. ಇಂದು ಅಲೆಗಳ ಎತ್ತರ 9 ಅಡಿಗೆ ಹೋಗಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಗುಜರಾತ್ ಜೊತೆಗೆ ಮಹಾರಾಷ್ಟ್ರ, ಗೋವಾ, ಕರ್ನಾಟಕದ ಕರಾವಳಿ ತೀರದ ಮೇಲೂ ನಿಗಾ ಇಡಲಾಗಿದೆ.