ತೀರ್ಥಹಳ್ಳಿ : ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಮಾಡಿದ ಎಲ್ಲ ಅಭಿವೃದ್ಧಿ ಯೋಜನೆಗಳನ್ನು ರದ್ದು ಪಡಿಸಲಾಗುವುದು ಎಂದು ಹೇಳುವ ಮೂಲಕ ಕಾಂಗ್ರೆಸ್ ರಿವರ್ಸ್ ಎಂಜಿನ್ ಪಕ್ಷ ಎಂಬುದನ್ನು ಸ್ವತಃ ಆ ಪಕ್ಷದವರೇ ಘೋಷಿಸಿಕೊಂಡಿದ್ದಾರೆ ಎಂದು ರಾಜ್ಯ ಬಿಜೆಪಿ ಸಹ ಉಸ್ತುವಾರಿ ಅಣ್ಣಾಮಲೈ ಟೀಕಿಸಿದರು.
ಬಾಳೇಬೈಲಿನಲ್ಲಿ ನಡೆದ ಬಿಜೆಪಿ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿ,ಆರಗ ಜ್ಞಾನೇಂದ್ರ ಸೈದ್ಧಾಂತಿಕ ಬದ್ಧತೆ ಹೊಂದಿದ್ದು ವೈಯಕ್ತಿಕ ಛಾಪು ಹೊಂದಿದ್ದಾರೆ. ಕನಿಷ್ಠ 40 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ನಮಗಿದೆ. ಬಿಜೆಪಿ ಸಾಮಾಜಿಕ ನ್ಯಾಯ ನೀಡುವ ಜೊತೆಗೆ ದೇಶದ ಅಭಿವೃದ್ದಿಗೆ ವೇಗ ನೀಡಿದೆ ಎಂದು ಅವರು ಹೇಳಿದರು.
‘ಬಿಜೆಪಿ 10ನೇ ಬಾರಿ ಸ್ಪರ್ಧೆಗೆ ಅವಕಾಶ ಕೊಟ್ಟಿದೆ. ಸ್ಪರ್ಧೆಗೆ ಅವಕಾಶ ಸಿಕ್ಕಿಲ್ಲವೆಂದಿದ್ದರೂ ಬೇಸರ ಇರಲಿಲ್ಲ. ವಿಧಾನಸಭೆ ಚುನಾವನೆಯಲ್ಲಿ ಒಂದೇ ಪಕ್ಷ ಒಂದೇ ಚಿಹ್ನೆಯಡಿ ಸ್ಪರ್ಧಿಸುತ್ತಿದ್ದೇನೆ. ಕ್ಷೇತ್ರದಲ್ಲಿ ಸೈದ್ಧಾಂತಿಕ ರಾಜಕಾರಣ ಮಾಡಿದ ವಿಶ್ವಾಸ ನನಗಿದೆ’ ಎಂದು ಗೃಹಸಚಿವ, ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಹೇಳಿದರು.
ಕ್ಷೇತ್ರದಲ್ಲಿ ನನನ್ನು ಸೋಲಿಸಲು ಇಬ್ಬರು ಒಟ್ಟಾಗಿದ್ದಾರೆ. ಆದರೆ ಜನರೇ ಅವರನ್ನು ಸೋಲಿಸುತ್ತಾರೆ. ಎದುರಾಳಿ ಯಾವೆಲ್ಲಾ ಪಕ್ಷ ಸುತ್ತಾಡಿದ್ದಾರೆ ಎಂದು ನನಗೆ ತಿಳಿದಿದೆ ಎಂದು
ಕುಟುಕಿದರು.
ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸ ಮೆಚ್ಚಿ ಜನರು ಈ ಬಾರಿ ಬೆಂಬಲಿಸುತ್ತಾರೆ. ಕ್ಷೇತ್ರದ ಅಭಿವೃದ್ಧಿಗೆ 3254 ಕೋಟಿ ಮಂಜೂರಾಗಿದೆ. ಮಾಜಿ ಶಾಸಕರ ಅವಧಿಯಲ್ಲಿ ಕ್ಷೇತ್ರದ ತುಂಬ ಕಳಪೆ ಕಾಮಗಾರಿ ನಡೆದಿತ್ತು. ನನ್ನ ಅವಧಿಯಲ್ಲಿ ಎಲ್ಲಿಯೂ ಕಳಪೆ ಕಾಮಗಾರಿ ನಡೆದಿಲ್ಲ. ಅಂತಹ ಕಳಪೆ ಕಾಮಗಾರಿ ನಡೆದಿದ್ದರೆ ಕಿಮ್ಮನೆ ರತ್ನಾಕರ ಬಹಿರಂಗ ಪಡಿಸಲಿ ಎಂದು ಸವಾಲೆಸೆದರು.
ಸುದೀರ್ಘ ರಾಜಕಾರಣದಲ್ಲಿ ಆರಗ ಜ್ಞಾನೇಂದ್ರ ವ್ಯಕ್ತಿತ್ವಕ್ಕೆ ಕಪ್ಪುಚುಕ್ಕೆ ಅಂಟಿಸಿಕೊಂಡಿಲ್ಲ. ಅಧಿಕಾರದಲ್ಲಿ ಜನರಿಗಾಗಿ ಹಗಲಿರುಳು ಕೆಲಸ ಮಾಡಿದ್ದಾರೆ. ಸಭೆಯಲ್ಲಿ ಸೇರಿದ ಜನರ ಉತ್ಸಾಹ ಕಂಡರೆ ಈ ಸಮಾವೇಶ ಆರಗ ಜ್ಞಾನೇಂದ್ರರ ವಿಜಯೋತ್ಸವದಂತೆ ಕಾಣಿಸುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಸಂತೋಷ ವ್ಯಕ್ತಪಡಿಸಿದರು.
ಮಾಜಿ ಶಾಸಕ ಬಿ. ಸ್ವಾಮಿರಾವ್, ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೋಡ್ಗಿ ಮಾತನಾಡಿದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಭಾರತಿಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್‌ರು ಇದ್ದರು. ತಾಲ್ಲೂಕು ಅಧ್ಯಕ್ಷ ಬಾಳೇಬೈಲು ರಾಘವೇಂದ್ರ ಪ್ರಾಸ್ತಾವಿಕವಾಗಿ
ಮಾತನಾಡಿದರು.





