ನವದೆಹಲಿ : ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರನ್ನು ‘ಅಶಿಸ್ತಿನ’ ವರ್ತನೆಗಾಗಿ ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ.
ಲೋಕಸಭೆಯಲ್ಲಿ ತಮ್ಮ ಭಾಷಣದ ವೇಳೆ ಪ್ರಧಾನಿ ಮೋದಿ ವಿರುದ್ಧ ಸರಣಿ ವಾಗ್ದಾಳಿ ನಡೆಸಿದ ರಂಜನ್ ಚೌಧರಿ, ಮಹಾಭಾರತವನ್ನು ಉಲ್ಲೇಖಿಸಿದ್ದಾರೆ. ಹಸ್ತಿನಾಪುರದಲ್ಲಾಗಲೀ ಅಥವಾ ಮಣಿಪುರದಲ್ಲಾಗಲೀ ಮಹಿಳೆಯರ ವಿರುದ್ಧ ಏನು ನಡೆಯುತ್ತಿದೆ ಎಂಬುದರ ಬಗ್ಗೆ ರಾಜ ಕುರುಡನಾಗಬಾರದು ಎಂದು ಚೌಧರಿ ಟೀಕಿಸಿದ್ದಾರೆ.
ಚೌಧರಿ ಟೀಕೆಗೆ ಗೃಹ ಸಚಿವ ಅಮಿತ್ ಶಾ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಚೌಧರಿ ಅವರು ಸಂಸತ್ತಿನಲ್ಲಿ ಸಂಯಮದಿಂದ ಮತ್ತು ಸದನದ ಸೌಜನ್ಯವನ್ನು ಕಾಪಾಡಿಕೊಳ್ಳುವಂತೆ ನೋಡಲು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಒತ್ತಾಯಿಸಿದ್ದಾರೆ.
ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಅವರಿಗೆ ಯಾವುದೇ ಸಮಸ್ಯೆಗಳಿಲ್ಲದಿದ್ದಾಗ ಅಮಿತ್ ಶಾ ಯಾಕೆ ಕೋಪಗೊಳ್ಳುತ್ತಿದ್ದಾರೆ ಎಂದು ಚೌಧರಿ ಮರುಪ್ರಶ್ನೆ ಹಾಕಿದ್ದಾರೆ. ಧ್ರುವೀಕರಣ, ಕೋಮುವಾದ ಮತ್ತು ಕೇಸರಿಕರಣ ಭಾರತವನ್ನು ತೊರೆಯುವ ಸಮಯ ಬಂದಿದೆ ಎಂದು ಚೌಧರಿ ಹೇಳಿದ್ದು, ಬಿಜೆಪಿ ಸಂಸದರು ಚೌಧರಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಪೀಕರ್ ಓಂ ಬಿರ್ಲಾ ಕೂಡಾ ಚೌಧರಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.