ಮಂಡ್ಯ : ರೈತರ ವಿರೋಧದ ನಡುವೆಯೂ ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನಿರಂತರವಾಗಿ ಹರಿಸುತ್ತಿರುವ ನೀರು ನಿಲ್ಲಿಸಲು ರಾಜ್ಯಪಾಲರು ಮಧ್ಯಪ್ರವೇಶಿಸುವಂತೆ ಒತ್ತಾಯಿಸಿ ಬಿಜೆಪಿ ಪಕ್ಷದ ಕಾರ್ಯಕರ್ತರು ರಕ್ತದಲ್ಲಿ ಸಹಿ ಮಾಡಿದ ಪತ್ರದ ಮೂಲಕ ಮನವಿ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ರಕ್ತದ ಸಹಿ ಮಾಡಿದ ಮನವಿ ಪತ್ರವನ್ನು ರವಾನಿಸಿದರು.
ರಾಜ್ಯ ತೀವ್ರ ಬರಗಾಲವನ್ನು ಎದುರಿಸುತ್ತಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರು, ರೈತರ ಬೆಳೆಗಳಿಗೆ ನೀರು ಇಲ್ಲದ ಪರಿಸ್ಥಿತಿ ಎದುರಾಗಿದ್ದು, ಆದರೂ ಸಹ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ, ಇದರಿಂದ ಮುಂದಿನ ದಿನಗಳಲ್ಲಿ ಬೆಂಗಳೂರು ಮೈಸೂರು ಸೇರಿದಂತೆ ಹಲವು ಪ್ರದೇಶಕ್ಕೆ ಕುಡಿಯಲು ನೀರು ಸಹ ಇಲ್ಲದಂತಾಗುತ್ತದೆ. ಹಾಗಾಗಿ ತಾವುಗಳು ಮಧ್ಯ ಪ್ರವೇಶಿಸಿ ತಮಿಳುನಾಡಿಗೆ ಬಿಟ್ಟಿರುವ ನೀರನ್ನು ನಿಲ್ಲಿಸಲು ಕ್ರಮವಹಿಸಿ ರಾಜ್ಯದ ಜನರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.
ಮುಖಂಡ ಶಿವಕುಮಾರ ಆರಾಧ್ಯ ಮಾತನಾಡಿ ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದ್ದರೂ ಸಹ ಕನ್ನಡ ಚಿತ್ರರಂಗ ಹೋರಾಟ ಮಾಡುತ್ತಿಲ್ಲ, ಕಾವೇರಿ ಕಣಿವೆಯ ಹೀರೋಗಳಾದ ದರ್ಶನ್ ಮತ್ತು ಯಶ್ ಈ ಕೂಡಲೇ ಬೀದಿ ಗಿಳಿದು ಹೋರಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಸಿದ್ದರಾಜು ಗೌಡ ಮಾತನಾಡಿ ರೈತರು ಮತ್ತು ಜನರು ವಿರೋಧ ಮಾಡುತ್ತಿದ್ದರೂ ತಮಿಳುನಾಡಿಗೆ ಹರಿಯುತ್ತಿರುವ ನೀರನ್ನು ಸರ್ಕಾರ ಸ್ಥಗಿತ ಮಾಡಿಲ್ಲ, ರಕ್ತದಲ್ಲಿ ಸಹಿ ಮಾಡಿದ ಪತ್ರವನ್ನು ಸಲ್ಲಿಸಿದ್ದೇವೆ, ಕತ್ತು ಕುಯ್ದು ಕೊಂಡರೂ ಸರ್ಕಾರ ನೀರು ನಿಲ್ಲಿಸುವುದಿಲ್ಲ ಎಂದು ಕಿಡಿಕಾರಿದರು.
ಕಾವೇರಿ ವಿಚಾರದಲ್ಲಿ ಅನ್ಯಾಯವಾಗಿದ್ದರೂ ಬೆಂಗಳೂರಿನ ಜನ ಏನು ಗೊತ್ತಿಲ್ಲದಂತೆ ಇದ್ದಾರೆ, ಮುಂದಿನ ದಿನಗಳಲ್ಲಿ ಅವರಿಗೆ ನೀರಿನ ಅಭಾವದ ಪರಿಸ್ಥಿತಿ ಎದುರಾಗಲಿದೆ ಈಗಲೇ ಎಚ್ಚೆತ್ತು ಹೋರಾಟ ಮಾಡಬೇಕು ಎಂದು ಹೇಳಿದರು.
ಮಂಡ್ಯ ಜಿಲ್ಲೆಯ ಶಾಸಕರು ಹೇಳಿಕೆ ನೀಡಿ ಸುಮ್ಮನಿದ್ದಾರೆ, ಸರ್ಕಾರದ ಮೇಲೆ ಒತ್ತಡ ಹಾಕಿ ನೀರು ನಿಲ್ಲಿಸುವ ಕೆಲಸ ಮಾಡುತ್ತಿಲ್ಲ, ಸಂಸದರು ಒಂದು ದಿನ ಪ್ರತಿಭಟನೆ ಮಾಡಿ ಹೋದವರು ಇತ್ತ ಕಡೆ ತಲೆ ಹಾಕಿಲ್ಲ, ಜಿಲ್ಲೆಯ ಶಾಸಕರು ಮುಖ್ಯಮಂತ್ರಿ ಗಳ ಬಳಿ ತೆರಳಿ ನೀರು ನಿಲ್ಲಿಸಲು ಒತ್ತಡ ಹಾಕಲಿ ಎಂದು ಒತ್ತಾಯಿಸಿದರು.
ಡಣಾಯಕನಪುರ ರವಿಕುಮಾರ್, ಯೋಗೇಶ್, ಚಂದ್ರ, ನಿತ್ಯ, ಇತರರಿದ್ದರು