ಬೆಂಗಳೂರು: ಬಿಜೆಪಿಯವರು ಈಗ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಮಾತನ್ನಾಡುತ್ತಿದ್ದಾರೆ. ದೇಶದ ಆಡಳಿತ ವ್ಯವಸ್ಥೆಯಲ್ಲಿ ಸಂವಿಧಾನವೇ ಭಗವದ್ಗೀತೆ, ಬೈಬಲ್, ಕುರಾನ್. ಸಂವಿಧಾನ ಭಾರತೀಯರಿಗೆ ಗ್ರಂಥ ಇದ್ದಂತೆ. ಕಲಂ 25ರಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ಧರ್ಮ ಆಯ್ಕೆಯ ಹಕ್ಕು ನೀಡಿದೆ. ಅದಕ್ಕೆ ವಿರುದ್ಧವಾಗಿ ಬಿಜೆಪಿಯವರು ಮತಾಂತರ ನಿಷೇಧ ಕಾಯ್ದೆ ಮಾಡಿದ್ದರು ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.
ಬಿಜೆಪಿ ಸರ್ಕಾರ ಮಾಡಿದ ಕಾಯ್ದೆ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಸದನದಲ್ಲಿ ಮಸೂದೆ ಮಂಡಿಸಿದ ವೇಳೆಯೇ ಹೇಳಿದ್ದೆವು. ಈಗ ರಾಜ್ಯದಲ್ಲಿ ನಮ್ಮ ಸರ್ಕಾರ ಬಂದಿದೆ. ನಮ್ಮ ಸರ್ಕಾರಕ್ಕೆ ಸಂವಿಧಾನದ ಮೇಲೆ ನಂಬಿಕೆ ಇದೆ. ಹಾಗಾಗಿ ನಾವು ಮತಾಂತರ ನಿಷೇಧ ಕಾಯ್ದೆಯನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ ಎಂದರು.
ರಾಜ್ಯದಲ್ಲಿ ಮರಳು ಮಾಫಿಯಾ ತಲೆ ಎತ್ತಿದೆ ಎಂಬ ಬಿಜೆಪಿ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದ ಅಗತ್ಯವಿಲ್ಲ. ನಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡುತ್ತೇವೆ ಎಂದರು.
ನೀವು ಸಿಎಂ ಆಗುತ್ತೀರಾ ಎಂದು ಕೇಳಿತ್ತಿದ್ದಂತೆ ಉತ್ತರ ನೀಡದೆ ತೆರಳಿದರು. ‘ಅದೊಂದನ್ನ ಬಿಟ್ಟು ಬೇರೆ ಏನು ಬೇಕಾದರೂ ಕೇಳಿ’ ಎಂದಷ್ಟೆ ಹೇಳಿದರು.